ವಿದ್ಯಾರ್ಥಿಗಳಿಗೆ ಕಿರಂ ನಾಗರಾಜ ಸ್ಪೂರ್ತಿ: ಕಾಳೇಗೌಡ ನಾಗವಾರ
ಬೆಂಗಳೂರು, ಆ.7: ಹಿರಿಯ ವಿಮರ್ಶಕ ಕಿರಂ ನಾಗರಾಜ ಅವರ ಸರಳ ಜೀವನ ಇಡೀ ವಿದ್ಯಾರ್ಥಿ ಬಳಗಕ್ಕೆ ಸ್ಪೂರ್ತಿಯಾಗಿದೆ ಎಂದು ಸಂಸ್ಕೃತಿ ಚಿಂತಕ ಕಾಳೇಗೌಡ ನಾಗವಾರ ನುಡಿದರು.
ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜನಸಂಸ್ಕೃತಿ, ಅವಿರತ ಪುಸ್ತಕ, ಬೆಂಗಳೂರು ಆರ್ಟ್ ಫೌಂಡೇಷನ್ ಆಯೋಜಿಸಿದ್ದ, ವಿಮರ್ಶಕ ಕಿ.ರಂ.ನಾಗರಾಜ ನೆನಪಿನಾರ್ಥ ಕಾಡುವ ಕಿರಂ ಅಹೋರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.
ಕಿರಂ ದಂತಕತೆಯಾಗಿದ್ದು, ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಅಷ್ಟೇ ಅಲ್ಲದೆ, ಅವರ ಸರಳ ಜೀವನ ವ್ಯಕ್ತಿತ್ವ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಕಿರಂ, ವಿಮರ್ಶೆಗಳನ್ನು ಮೆಚ್ಚುವ ಬಳಗ ಈಗಲೂ ಹುಟ್ಟುಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.
ತ್ಯಾಗ, ಭೋಗ, ವಿದ್ಯೆಯನ್ನು ಗಳಿಕೆ ಮಾಡುವುದೇ ನಿಜವಾದ ನಾಡೋಜ ಪುರಸ್ಕಾರವಾಗಿದೆ ಎಂದ ಅವರು, ಯುವ ಕವಿಗಳನ್ನು ಹುಟ್ಟಹಾಕಬೇಕು. ಅವರಿಗೆ ಸೂಕ್ತ ರೀತಿಯಲ್ಲಿ ವೇದಿಕೆ ಕಲ್ಪಿಸಬೇಕು ಎಂದು ಕಾಳೇಗೌಡ ಹೇಳಿದರು. ಕಾರ್ಯಕ್ರಮದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ, ಲಲಿತಾಕಲಾ ಅಕಾಡೆಮಿ, ನಿಕಟಪೂರ್ವ ಅಧ್ಯಕ್ಷ ಜೆ.ಲೋಕೇಶ್, ಅಧ್ಯಾಪಕಿ ಕೆ.ಎಸ್.ಸಹನಾ, ಸಮನ್ವಯ ರಂಗ ಸಂಘಟಕ ಸಿ.ಎಂ. ನರಸಿಂಹಮೂರ್ತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಿರಂ ಬಳಗದ ಅವರ ನೆನಪಿನಲ್ಲಿ ಕಾಡುವ ಕಿರಂ ಎಂಬ ಸಾಧ್ಯತೆಯನ್ನು ಹುಟ್ಟುಹಾಕಿ, ಎಲ್ಲ ಭಾಗದ ಕವಿಗಳನ್ನು ಒಂದೆಡೆಗೆ ಸೇರುವಂತೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಇಡೀ ಕಿರಂ ಬಳಗಕ್ಕೆ ಈ ಮೂಲಕ ಆಭಾರಿಯಾಗಿದ್ದೇನೆ.
-ಹಾಜಿರಾ ಖಾನ್, ಯುವ ಕವಿ