×
Ad

ಡಯಾಗ್ನೋಸ್ಟಿಕ್ ಸೆಂಟರ್‌ಗಳು ಲೈಸೆನ್ಸ್ ಪಡೆಯುವುದು ಕಡ್ಡಾಯ: ಹೈಕೋರ್ಟ್ ಸ್ಪಷ್ಟನೆ

Update: 2018-08-07 22:10 IST

ಬೆಂಗಳೂರು, ಆ.7: ಡಯಾಗ್ನೋಸ್ಟಿಕ್ ಸೆಂಟರ್‌ಗಳು ಇತರೆ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಂತೆ ಲೈಸೆನ್ಸ್ ಪಡೆಯುವುದು ಕಡ್ಡಾಯ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಆನಾರೋಗ್ಯಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ಹಾಗೂ ಶುಶ್ರೂಷೆ ಮಾಡಲು ಆರಂಭಿಸುವ ಸಂಸ್ಥೆಗಳಿಗೆ ಲೈಸೆನ್ಸ್ ಕಡ್ಡಾಯ ಅಲ್ಲದಿದ್ದರೂ, ಲೈಸೆನ್ಸ್ ಪಡೆದಿಲ್ಲ ಎಂಬ ಕಾರಣಕ್ಕೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ನಗರದ ಶೇಷಾದ್ರಿಪುರಂನ ಶ್ರೀ ಹೆಲ್ತ್ ಕೇರ್ ಡಯಾಗ್ನೋಸ್ಟಿಕ್ ಸೆಂಟರ್‌ನ ಒಡತಿ ಡಾ. ಸುನೀತಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಜಾನ್ ಮೈಕೆಲ್ ಕುನ್ಹ ಅವರಿದ್ದ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಆರೋಗ್ಯ ಸೇವೆ ನೀಡುವಂತಹ ಸಂಸ್ಥೆಗಳು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆ 1961ರ ನಿಯಮಗಳ ಅನುಸಾರ ಲೈಸೆನ್ಸ್ ಪಡೆಯುವ ಅಗತ್ಯವಿಲ್ಲ. ವೈದ್ಯಕೀಯ ಚಿಕಿತ್ಸೆ ನೀಡುವ ಸಂಸ್ಥೆಗಳಿಗೆ ಅಂತಹ ನಿಮಯಗಳಿಂದ ವಿನಾಯಿತಿ ಇದೆ. ಆದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಲೈಸೆನ್ಸ್ ಪಡೆದಿಲ್ಲ ಎಂದು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ, ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ಹಾಗೂ ಎಫ್‌ಐಆರ್‌ನ್ನು ರದ್ದುಪಡಿಸಬೇಕು ಎಂದು ಕೋರಿದರು.

ಸರಕಾರದ ಪರ ಅಭಿಯೋಜಕರಾದ ರಾಚಯ್ಯ ವಾದಿಸಿ, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆ 1961ರ ನಿಯಮಗಳ ಪ್ರಕಾರ ಡಯಾಗ್ನೋಸ್ಟಿಕ್ ಸೆಂಟರ್‌ಗಳು ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು. ಡಯಾಗ್ನೋಸ್ಟಿಕ್ ಸೆಂಟರ್‌ಗಳು ರೋಗಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರಗಳಲ್ಲ. ಬದಲಿಗೆ ರೋಗಿಯ ಕೆಲವೊಂದು ಆರೋಗ್ಯ ಸಂಬಂಧಿ ವರದಿಗಳನ್ನು ವೈದ್ಯರಿಗೆ ತಯಾರಿಸಿಕೊಡುವ ಕೇಂದ್ರಗಳಷ್ಟೇ. ಹೀಗಾಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೂ ಲೈಸೆನ್ಸ್ ಕಡ್ಡಾಯವೆಂಬ ನಿಯಮ ಅನ್ವಯಿಸುತ್ತದೆ ಎಂದು ವಿವರಿಸಿದರು.

ಸರಕಾರಿ ಅಭಿಯೋಜಕರ ವಾದ ಮನ್ನಿಸಿದ ಪೀಠ, ಶ್ರೀ ಹೆಲ್ತ್ ಕೇರ್ ಡಯಾಗ್ನೋಸ್ಟಿಕ್ ಸೆಂಟರ್‌ನ ಮುಖ್ಯಸ್ಥೆ ಡಾ. ಸುನೀತಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ: ನಗರದ ಶೇಷಾದ್ರಿಪುರಂನಲ್ಲಿರುವ ಶ್ರೀ ಹೆಲ್ತ್ ಕೇರ್ ಡಯಾಗ್ನೋಸ್ಟಿಕ್ ಸೆಂಟರ್‌ಗೆ 2010ರ ಆ.2ರಂದು ನಗರದ ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಲೈಸೆನ್ಸ್ ಪಡೆಯದೇ ಡಯಾಗ್ನೋಸ್ಟಿಕ್ ಸೆಂಟರ್ ನಡೆಸುತ್ತಿದ್ದುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಲೈಸೆನ್ಸ್ ಪಡೆಯುವಂತೆ ಸೂಚಿಸಿದ್ದರು. ಆದರೆ ಡಯಾಗ್ನೋಸ್ಟಿಕ್ ಸೆಂಟರ್ ಮಾಲಕರು ಈ ಕುರಿತು ಯಾವುದೇ ಕ್ರಮ ಪಾಲಿಸಿರಲಿಲ್ಲ. ನಂತರ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News