ದ್ರಾವಿಡ ನಾಯಕನ ಆಗಲಿಕೆಗೆ ವಿಶ್ವನಾಥ್, ದೇಶಪಾಂಡೆ ಕಂಬನಿ

Update: 2018-08-07 16:41 GMT

ಬೆಂಗಳೂರು, ಆ.7: ಮಾಜಿ ಸಿಎಂ ಕರುಣಾನಿಧಿಯವರ ಅಗಲಿಕೆ ದ್ರಾವಿಡ ಸಂಸ್ಕೃತಿಯ ಕಳಚಿದ ಪ್ರಮುಖ ತಳಹದಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್ ಕಂಬನಿ ಮಿಡಿದಿದ್ದಾರೆ.

ತಮಿಳುನಾಡು ಸಿನಿಮಾ ಪ್ರಪಂಚವನ್ನು ರಾಜಕಾರಣದ ಮಿಳಿತದೊಂದಿಗೆ ಬದುಕಿನ ಕೊನೆಯ ತನಕ ಜನಮಾನಸದಲ್ಲಿ ಪ್ರತಿಷ್ಠಾಪಿತ ನಾಯಕ ಎಂದು ಬಣ್ಣಿಸಿದ್ದಾರೆ. ಮೇರು ತಾರೆಯರಾದ ಶಿವಾಜಿ ಗಣೇಶನ್, ಎಂ ಜಿ ಆರ್ ಮುಂತಾದ ನಾಯಕ ನಟರಿಗೆ ಸಾಹಿತ್ಯ ರಚಿಸಿ ತಮಿಳಿನ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸುವಂತಹ ಸಂಭಾಷಣೆ ರಚಿಸಿದ್ದು ಅಜರಾಮರವಾಗಿದೆ. ಅಂತಹ ದ್ರಾವಿಡ ಮೇರು ಪರ್ವತ ಕರುಣಾನಿಧಿಯವರ ಅಗಲಿಕೆಗೆ ವಿಶ್ವನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಚಿವ ದೇಶಪಾಂಡೆ ಸಂತಾಪ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಪಕ್ಷದ ಅಗ್ರಗಣ್ಯ ನಾಯಕ ಎಂ.ಕರುಣಾನಿಧಿ ಅವರ ನಿಧನಕ್ಕೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದಾರೆ. ಕರುಣಾನಿಧಿಯವರು ತಮಿಳುನಾಡಿನ ಸಮಕಾಲೀನ ರಾಜಕೀಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಿಂದಾಗಿ ಸಮಾಜದ ಕೆಳವರ್ಗಗಳಿಗೆ ರಾಜಕೀಯ ದನಿ ಪ್ರಾಪ್ತವಾಯಿತು. ತಮಿಳುನಾಡಿನ ಅಸ್ಮಿತೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ರಾಷ್ಟ್ರ ರಾಜಕಾರಣದಲ್ಲೂ ಹಲವು ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ಸಚಿವರು ಸ್ಮರಿಸಿಕೊಂಡಿದ್ದಾರೆ.

ಕರ್ನಾಟಕದೊಂದಿಗೆ ಸೌಹಾರ್ದ ಸಂಬಂಧ ಹೊಂದುವುದು ಅಗತ್ಯವೆಂದು ತಿಳಿದಿದ್ದ ಕರುಣಾನಿಧಿಯವರು ಹಲವು ವಿವಾದಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವ ಒಲವು ಹೊಂದಿದ್ದರು. ಅವರ ನಿಧನದಿಂದಾಗಿ ಮುತ್ಸದ್ದಿಯೊಬ್ಬರು ನಿರ್ಗಮಿಸಿದಂತಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಏನೆಂಬುದನ್ನು ಕರುಣಾನಿಧಿಯವರು ತೋರಿಸಿ ಕೊಟ್ಟಿದ್ದರು. ಇದಕ್ಕಾಗಿ ಅವರು ಎಂದೆಂದೂ ನೆನಪಿನಲ್ಲಿ ಉಳಿಯುತ್ತಾರೆ ಎಂದು ದೇಶಪಾಂಡೆಯವರು ಅಗಲಿದ ನಾಯಕನ ವ್ಯಕ್ತಿತ್ವವನ್ನು ನೆನಪಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News