ಒಂದೇ ಗ್ರಾಮದ 8 ಬಾಲಕಿಯರ ಆಯ್ಕೆ

Update: 2018-08-07 18:21 GMT

 ಚಂಡಿಗಡ, ಆ.7: ಭೂತಾನ್‌ನಲ್ಲಿ ಆ.9ರಿಂದ ಆರಂಭವಾಗಲಿರುವ ಸ್ಯಾಫ್ ಆಯೋಜಿಸಿರುವ ಅಂಡರ್-15 ಟೂರ್ನಿಗೆ ಭಾರತ ತಂಡಕ್ಕೆ ಹರ್ಯಾಣದ ಸಾದಲ್ಪುರ ಗ್ರಾಮದ ಎಂಟು ಬಾಲಕಿಯರಾದ ಮನಿಶಾ, ಅಂಜು, ರಿತೂ, ಕವಿತಾ, ಪೂನಂ,ಕಿರಣ್, ನಿಶಾ ಹಾಗೂ ವರ್ಷಾ ಆಯ್ಕೆಯಾಗಿದ್ದಾರೆ.

 ಸಂಪ್ರದಾಯವಾದಿಗಳ ವಿರುದ್ಧ ಹೋರಾಡುತ್ತಾ, ಸ್ಮಶಾನದಲ್ಲಿ ಫುಟ್ಬಾಲ್ ಅಭ್ಯಾಸ ನಡೆಸುತ್ತಿದ್ದ ಹರ್ಯಾಣದ ಸಾದಲ್ಪುರ ಗ್ರಾಮದ ಎಂಟು ಬಾಲಕಿಯರು ಈಗ ಫುಟ್ಬಾಲ್ ಅಕಾಡಮಿಯ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿಗಾಗಿ ಪ್ರತಿದಿನ ಎರಡು ಹೊತ್ತು ಸುಮಾರು 52 ಕಿ.ಮೀ.ದೂರದ ತನಕ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ.

 ‘‘ಕಳೆದ ಎರಡು ವರ್ಷಗಳಿಂದ ನಮ್ಮ ಬಾಲಕಿಯರು ಭಾರತ ತಂಡದಲ್ಲಿ ಆಡುತ್ತಿದ್ದು ಒಂದೇ ಹಳ್ಳಿಯಲ್ಲಿ ಇಷ್ಟೊಂದು ಆಟಗಾರ್ತಿಯರು ಸೃಷ್ಟಿಯಾಗಿದ್ದು ದೊಡ್ಡ ಸಾಧನೆ’’ ಎಂದು ಎಂಟು ಬಾಲಕಿಯರಿಗೆ ಕೋಚ್ ನೀಡುತ್ತಿರುವ ಮಾಜಿ ವಿವಿ ಮಟ್ಟದ ಫುಟ್ಬಾಲ್ ಆಟಗಾರ ವಿನೋದ್ ಲೊಯಲ್ ಹೇಳಿದ್ದಾರೆ.

ಅಂಡರ್-15 ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿರುವ ಹೆಚ್ಚಿನ ಬಾಲಕಿಯರು ಬಡ ಹಾಗೂ ಕೆಳ ಮಧ್ಯಮ ವರ್ಗದಿಂದ ಬಂದವರು.

 ಕಳೆದ ತಿಂಗಳು ಕಟಕ್‌ನಲ್ಲಿ ನಡೆದ ಸಬ್-ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅಂಜು 18 ಗೋಲುಗಳನ್ನು ಹೊಡೆದಿದ್ದರು. ಈಕೆಯ ತಂದೆ ವಾಹನ ಚಾಲಕ. ಗೋಲ್‌ಕೀಪರ್ ಮನಿಶಾರ ತಂದೆ ದಿನಗೂಲಿ ಕಾರ್ಮಿಕನಾಗಿದ್ದಾರೆ. ಕವಿತಾಳ ತಂದೆ ಆಕೆ ಎರಡು ವರ್ಷ ಮಗುವಿದ್ದಾಗ ತೀರಿಕೊಂಡಿದ್ದರು. ಆಕೆಯ ತಾಯಿ ಹೊಲದಲ್ಲಿ ದುಡಿದು ಕುಟುಂಬವನ್ನು ಸಲಹುತ್ತಿದ್ದಾರೆ.

ತಂಡದ ಇತರ ಬಾಲಕಿಯರ ಕುಟುಂಬದವರಿಗೆ ತಮ್ಮದೇ ಜಮೀನು ಇದ್ದು ಅದರಿಂದ ಬರುವ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.

‘‘ನಾವು ಎರಡು ವರ್ಷಗಳ ಕಾಲ ಸಾದಲ್ಪುರದ ಸ್ಮಶಾನದಲ್ಲಿ ಫುಟ್ಬಾಲ್ ಅಭ್ಯಾಸ ನಡೆಸುತ್ತಿದ್ದೆವು.....ಹಳ್ಳಿಯಲ್ಲಿ ಯಾರಾದರೂ ಸಾವನ್ನಪ್ಪಿದ ದಿನ ನಮ್ಮ ಅಭ್ಯಾಸವನ್ನು ರದ್ದುಪಡಿಸುತ್ತಿದ್ದೆವು. ಹಳ್ಳಿಯಲ್ಲಿ ಬಿಶ್‌ನೊಯ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರಲ್ಲಿ ಸಾವನ್ನಪ್ಪಿದವರನ್ನು ಹೂಳಲಾಗುತ್ತದೆ. ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಲಾರಂಭಿಸಿದ ಬಳಿಕ 2014ರಲ್ಲಿ ಗ್ರಾಮ ಪಂಚಾಯತ್ ನಮಗೆ ಭೂಮಿ ಮಂಜೂರು ಮಾಡಿತ್ತು’’ ಎಂದು ವಿನೋದ್ ಹೇಳಿದ್ದಾರೆ. ಕಳೆದ ವರ್ಷ ಹಳ್ಳಿಯಲ್ಲಿ ವಿನೋದ್ ಫುಟ್ಬಾಲ್ ಅಕಾಡಮಿಯನ್ನು ಸ್ಥಾಪಿಸಲಾಗಿದೆ. ಇದು ಸಾದಲ್ಪುರದಿಂದ 13 ಕಿ.ಮೀ.ದೂರದಲ್ಲಿದೆ. ಆದರೆ, 8 ಬಾಲಕಿಯರು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ತರಬೇತಿಗಾಗಿ ಸೈಕಲ್‌ನಲ್ಲಿ ಬರುತ್ತಾರೆ.

 ‘‘ಪ್ರತಿದಿನ ದೈಹಿಕ ತರಬೇತಿ ಸೆಶನ್‌ಗಳಿರುತ್ತವೆ. ಆದರೆ, ಬೆಳಗ್ಗೆ ಹಾಗೂ ಸಂಜೆ ಸಾದಲ್ಪುರದಿಂದ ಸೈಕಲ್‌ನಲ್ಲಿ ಬರುತ್ತಿರುವ ಬಾಲಕಿಯರು ದೈಹಿಕವಾಗಿ ಮತ್ತಷ್ಟು ಬಲಿಷ್ಠರಾಗುತ್ತಿದ್ದಾರೆ’’ ಎಂದು ವಿನೋದ್ ಹೇಳಿದ್ದಾರೆ.

ಸಾದಲ್ಪುರ ಬಾಲಕಿಯರು ಭಾರತ ತಂಡದಲ್ಲಿ ಹರ್ಯಾಣ ರಾಜ್ಯದಿಂದ ಆಯ್ಕೆಯಾಗಿಲ್ಲ. ಆದರೆ, ಅವರು ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ. 2014ರಲ್ಲಿ ನಡೆದಿದ್ದ ಆಯ್ಕೆ ಟ್ರಯಲ್ಸ್‌ನಲ್ಲಿ ಸಾದಲ್ಪುರ ಹಳ್ಳಿಯ ಇಬ್ಬರನ್ನು ಹರ್ಯಾಣ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಮುಂದಿನ ಅಕಾಡಮಿ ಸೆಶನ್‌ನಲ್ಲಿ ಅಂಡರ್-14 ಹಾಗೂ ಅಂಡರ್-17 ವಿಭಾಗದ 25 ಬಾಲಕಿಯರು ಚಂಡೀಗಢದ ಶಾಲೆಗೆ ಸೇರ್ಪಡೆಯಾಗಿದ್ದರು. ಹೀಗಾಗಿ ಚಂಡೀಗಢ ಕಳೆದ ವರ್ಷ ಅಂಡರ್-14 ರಾಷ್ಟ್ರೀಯ ಪ್ರಶಸ್ತಿ ಜಯಿಸಿತ್ತು. ಈ ವರ್ಷ ಹೆಚ್ಚಿ ನ ಬಾಲಕಿಯರು ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸಿದ್ದು ಈ ರಾಜ್ಯ ಸಬ್-ಜೂನಿಯರ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಸ್ಥಾನ ಪಡೆದಿದೆ.

  ‘‘ನನ್ನ ಊರಿನ ಬಾಲಕಿಯರು ಫುಟ್ಬಾಲ್ ಆಡುತ್ತಿದ್ದರು. ಹಾಗಾಗಿ ನಾನು ಈ ಕ್ರೀಡೆಗೆ ಮಾರುಹೋದೆ. ಆರಂಭದಲ್ಲಿ ನಾನು ಶಾರ್ಟ್ಸ್ ಹಾಗೂ ಟಿ-ಶರ್ಟ್ ಧರಿಸಲು ಹಿಂಜರಿಯುತ್ತಿದ್ದೆ. ಸರ್(ವಿನೋದ್)ನನಗೆ ಸಲ್ವಾರ್ ಕಮೀಝ್’ ಧರಿಸಿ ಆಡಲು ಅನುಮತಿ ನೀಡಿದರು. ಕ್ರೀಡೆಗೆ ಶಾರ್ಟ್ಸ್ ಹಾಗೂ ಟಿ-ಶರ್ಟ್ ಅಗತ್ಯವಿದೆ ಎಂಬ ವಿಚಾರ ಕೆಲವೇ ದಿನಗಳಲ್ಲಿ ಅರ್ಥವಾಯಿತು. ನಾವು 2015ರಲ್ಲಿ ಅಂಡರ್-14 ಫುಟ್ಬಾಲ್‌ನಲ್ಲಿ ಕಂಚು ಜಯಿಸಿದ ಬಳಿಕ ಇದೀಗ ಎಲ್ಲ ಬಾಲಕಿಯರ ಹೆತ್ತವರು ತಮ್ಮ ಮಕ್ಕಳನ್ನು ಫುಟ್ಬಾಲ್ ಆಡಲು ಪ್ರೋತ್ಸಾಹಿಸುತ್ತಿದ್ದಾರೆ’’ಎಂದು ಮನಿಶಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News