ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ಯುವಕನ ಥಳಿಸಿ ಕೊಲೆ

Update: 2018-08-08 10:08 GMT

ದಿಂಡೊರಿ, ಆ.8:  ಮಕ್ಕಳ ಕಳ್ಳನೆಂಬ ಶಂಕೆಯಿಂದ  ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಥಳಿಸಿ  ಸಾಯಿಸಿದ ಘಟನೆ ಮಧ್ಯ ಪ್ರದೇಶದ  ದಿಂಡೋರಿ ಎಂಬಲ್ಲಿನ ಸಿಂಗ್ವರ್ ಎಂಬ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಹೆಚ್ಚಾಗಿ ಆದಿವಾಸಿಗಳೇ ವಾಸಿಸುತ್ತಿದ್ದಾರೆ.

ಆಗಸ್ಟ್ 1ರಂದು ಗ್ರಾಮದ ಬಾವಿಯೊಂದರಲ್ಲಿ  ಶವವೊಂದು ತೇಲುತ್ತಿರುವ ಬಗ್ಗೆ  ಪೊಲೀಸರಿಗೆ ಮಾಹಿತಿ ದೊರಕಿತ್ತು. ಮೃತ ವ್ಯಕ್ತಿ ಅನುಪ್ಪುರ್ ಜಿಲ್ಲೆಯ 27 ವರ್ಷದ ಮುಕೇಶ್ ಗೊಂಡ್ ಎಂದು ತಿಳಿದು ಬಂದಿತ್ತು. ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದಾಗ  ಗ್ರಾಮಸ್ಥರೇ ಆತನನ್ನು ಥಳಿಸಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಜುಲೈ 28ರ ರಾತ್ರಿ  ಮುಕೇಶ್ ಗ್ರಾಮದಲ್ಲಿ  ಸುಮ್ಮನೆ ಅಡ್ಡಾಡುತ್ತಿದ್ದಾಗ  ಮದ್ಯ ಸೇವಿಸುತ್ತಿದ್ದ ಜಗದೀಶ್, ಚೇತ್ರಮ್, ಸಂಜಯ್ ಹಾಗೂ ಗಂಗಾರಾಂ ಎಂಬವರು  ಆತನನ್ನು ನೋಡಿ ಕರೆದಿದ್ದರು. ಆದರೆ ಆತ ಹತ್ತಿರದ ಶಾಲೆಯಲ್ಲಿ ಅಡಗಿದಾಗ ಆತನನ್ನು ಅಲ್ಲಿಂದ ಹೊರಗೆಳೆದು  ಆತನ  ಹಿನ್ನೆಲೆಯನ್ನು ಅವರು ಪ್ರಶ್ನಿಸಿದ್ದರು.

ಮಾನಸಿಕ ಅಸ್ವಸ್ಥನಾಗಿದ್ದ ಮುಕೇಶ್ ತಾನು ಅನ್ನುಪುರ್ ಗ್ರಾಮದವನು ಎಂದಷ್ಟೇ  ಹೇಳಿದ್ದ. ಅಷ್ಟರೊಳಗಾಗಿ ಜನರು ಆತನನ್ನು ಬಚ್ಛಾ ಚೋರ್ (ಮಕ್ಕಳ ಕಳ್ಳ) ಎಂದು ಕರೆದು ಹೊಡೆಯಲು ಆರಂಭಿಸಿದ್ದರು. ಬಹಳಷ್ಟು ಮಂದಿ ಸ್ಥಳದಲ್ಲಿ ಸೇರಿ ಆತನಿಗೆ ಇನ್ನಷ್ಟು ಥಳಿಸಿ ನಂತರ ಆತನ ಕೈಕಾಲು ಕಟ್ಟಿ ಜತೆಗೆ ಒಂದು ಕಲ್ಲನ್ನೂ ಕಟ್ಟಿ ಬಾವಿಗೆ ದೂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News