ಬಿಪಿಸಿಎಲ್ ಸ್ಥಾವರದಲ್ಲಿ ಭೀಕರ ಅಗ್ನಿ ದುರಂತ: 43 ಜನರಿಗೆ ಗಾಯ

Update: 2018-08-08 15:37 GMT

ಮುಂಬೈ,ಆ.8: ಇಲ್ಲಿಯ ಚೆಂಬೂರಿನ ಮಹುಲ್ ರಸ್ತೆಯಲ್ಲಿರುವ ಸರಕಾರಿ ಸ್ವಾಮ್ಯದ ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಬಿಪಿಸಿಎಲ್)ನ ಸಂಸ್ಕರಣಾಗಾರದಲ್ಲಿ ಬುಧವಾರ ಅಪರಾಹ್ನ ಭೀಕರ ಅಗ್ನಿ ಅನಾಹುತ ಸಂಭವಿಸಿದ್ದು,ಕನಿಷ್ಠ 43 ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳ ಪೈಕಿ 22 ಜನರಿಗೆ ಬಿಪಿಸಿಎಲ್‌ನ ಪ್ರಥಮ ಚಿಕಿತ್ಸಾ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಮೂಳೆ ಮುರಿತ ಮತ್ತು ಸುಟ್ಟಗಾಯಗಳಾಗಿರುವ 21 ಜನರನ್ನು ಚೆಂಬೂರಿನ ಇನ್ಲಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಓರ್ವ ಗಾಯಾಳುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿಪಿ ಶಹಜಿ ಉಮಾಪ್ ಅವರು ತಿಳಿಸಿದರು.

ಅಪರಾಹ್ನ ಮೂರು ಗಂಟೆಯ ಸುಮಾರಿಗೆ ಹಲವಾರು ಸ್ಫೋಟಗಳು ಸಂಭವಿಸಿದ ಬಳಿಕ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಮುಂಬೈ ಅಗ್ನಿಶಾಮಕ ದಳದ ಏಳು ಅಗ್ನಿಶಾಮಕ ಯಂತ್ರಗಳು,ಎರಡು ಫೋಮ್ ಟೆಂಡರ್‌ಗಳನ್ನು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದ್ದು,ಎರಡು ಬೃಹತ್ ನೀರಿನ ಟ್ಯಾಂಕರ್‌ಗಳೂ ಸ್ಥಳದಲ್ಲಿದ್ದವು.

ಸ್ಥಾವರಲ್ಲಿದ್ದ 20 ಜನರನ್ನು ತೆರವುಗೊಳಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದರು.

ಸಂಜೆಯ ವೇಳೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ.ಎಸ್.ರಹಂಗದಾಳೆ ತಿಳಿಸಿದರು.

ಸ್ಥಾವರದಿಂದ ನಾಲ್ಕು ಕಿ.ಮೀ. ದೂರದ ಪ್ರದೇಶಗಳಲ್ಲಿಯೂ ಭೂಮಿಯು ತಲ್ಲಣಿಸಿತ್ತು ಎಂದು ಸ್ಥಳೀಯರು ತಿಳಿಸಿದರು.

ಸಂಸ್ಕರಣಾಗಾರದ ಸಮೀಪದಲ್ಲಿರುವ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರದ 72 ಕಟ್ಟಡಗಳ ನಿವಾಸಿಗಳು ಸ್ಥಾವರದ ಎದುರು ಗುಂಪುಗೂಡಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಂಸ್ಕರಣಾಗಾರದಿಂದ ಉಂಟಾಗುತ್ತಿರುವ ವಾಯುಮಾಲಿನ್ಯದಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಅವರು ದೂರಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News