ಕೀನ್ಯದ ಮಾಜಿ ವಿಶ್ವ ಚಾಂಪಿಯನ್ ನಿಕೊಲಸ್ ರಸ್ತೆ ಅಪಘಾತಕ್ಕೆ ಬಲಿ

Update: 2018-08-09 05:33 GMT

ನೈರೋಬಿ, ಆ.8: ಕೀನ್ಯದ ಮಾಜಿ 400 ಮೀ. ಹರ್ಡಲ್ಸ್ ವಿಶ್ವ ಚಾಂಪಿಯನ್ ನಿಕೊಲಸ್ ಬೆಟ್(28 ವರ್ಷ)ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಕೀನ್ಯದ ಕ್ರೀಡಾ ಸಚಿವಾಲಯ ಬುಧವಾರ ತಿಳಿಸಿದೆ.

ಕೀನ್ಯದ ವಾಯುವ್ಯ ಪ್ರದೇಶ ನಂಡಿಕೌಂಟಿಯಲ್ಲಿ ಬೆಟ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಆಫ್ರಿಕ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ತವರಿಗೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ‘‘400 ಮೀ. ಹರ್ಡಲ್ಸ್ ವಿಭಾಗದ ಮಾಜಿ ವಿಶ್ವ ಚಾಂಪಿಯನ್ ನಿಕೊಲಸ್ ಬೆಟ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.... ಕ್ರೀಡಾ ಪರಿವಾರದ ಪರವಾಗಿ ಅವರ ಕುಟುಂಬ ಸದಸ್ಯರಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ’’ ಎಂದು ಕೀನ್ಯ ಕ್ರೀಡಾ ಸಂಪುಟದ ಕಾರ್ಯದರ್ಶಿ ರಶೀದ್ ಹೇಳಿದ್ದಾರೆ.

ಬೆಟ್ 2015ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 400 ಮೀ. ಹರ್ಡಲ್ಸ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದರು. 800 ಮೀ.ಗಿಂತ ಕಡಿಮೆ ವಿಭಾಗದಲ್ಲಿ ಕೀನ್ಯಕ್ಕೆ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News