ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಒತ್ತಾಯ: ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಸಹಿಸಂಗ್ರಹ ಅಭಿಯಾನ

Update: 2018-08-09 13:32 GMT

ಬೆಂಗಳೂರು, ಆ.9: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ, ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವುದು ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಅಗತ್ಯವಿರುವ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ರಾಜ್ಯಾದ್ಯಂತ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದೆ.

ಗುರುವಾರ ನಗರದ ಸರಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ದೇಶದಲ್ಲಿರುವ ಯಾವೊಂದು ವಿಶ್ವವಿದ್ಯಾಲಯವೂ ಮೌಲ್ಯಾಧಾರಿತ, ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ವಿಫಲವಾಗಿವೆ. ಈ ಬಗ್ಗೆ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯಗಳು ರೂಪಿಸಬೇಕೆಂದು ಒತ್ತಾಯಿಸಲು ವಿದ್ಯಾರ್ಥಿಗಳ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದೇವೆಂದು ಕೆವಿಎಸ್‌ನ ಸಂಚಾಲಕ ಸರೋವರ್ ತಿಳಿಸಿದರು.

ದೇಶದ ಶಿಕ್ಷಣ ವ್ಯವಸ್ಥೆ ಜಗತ್ತಿನಲ್ಲಿಯೆ ಎರಡನೆ ಅತಿದೊಡ್ಡ ಕ್ಷೇತ್ರವಾಗಿದೆ. ಆದರೂ ದೇಶದ ಯಾವುದೆ ಒಂದು ವಿಶ್ವವಿದ್ಯಾಲಯವು ಪ್ರಪಂಚದ ಮೊದಲ 200 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿಲ್ಲ. ಅಷ್ಟರ ಮಟ್ಟಿಗೆ ದೇಶದ ವಿಶ್ವವಿದ್ಯಾಲಯಗಳು ಅವ್ಯವಸ್ಥೆಯಿಂದ ಕೂಡಿವೆ. ಇದರಿಂದ ದೇಶದ ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆಂದು ಅವರು ವಿಷಾದಿಸಿದರು.

ದೇಶದ ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿಯ ಪ್ರಮಾಣ ಪತ್ರ ಪಡೆಯುತ್ತಿದ್ದಾರೆಯೆ ವಿನಃ ಕೆಲಸಕ್ಕೆ ಅಗತ್ಯವಾದ ಕೌಶಲ್ಯವನ್ನು ಪಡೆಯುವಂತಹ ವ್ಯವಸ್ಥೆ ದೇಶದ ವಿಶ್ವವಿದ್ಯಾಲಯಗಳಲ್ಲಿ ಇಲ್ಲವಾಗಿದೆ. ಇದರಿಂದಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ದೇಶದ ವಿಶ್ವವಿದ್ಯಾಲಯಗಳು ಆಮೂಲಾಗ್ರವಾಗಿ ಬದಲಾವಣೆಯಾಗಬೇಕಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕಾತಿ ಆಗಬೇಕು. ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಸರಕಾರದ ಕರ್ತವ್ಯವಾಗುತ್ತದೆ. ಹಾಗೆಯೆ ಬದಲಾಗುತ್ತಿರುವ ಜಗತ್ತಿಗೆ ಪೂರಕವಾಗಿ ಪಠ್ಯಕ್ರಮದಲ್ಲೂ ಬದಲಾಗಬೇಕು. ಆಗ್ರ ಮಾತ್ರವೆ ಶಿಕ್ಷಣ ಕ್ಷೇತ್ರವು ಪರಿಪೂರ್ಣತೆಯನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕೆವಿಎಸ್ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದ್ದೇವೆಂದು ಅವರು ಹೇಳಿದರು.

ವಿಶ್ವವಿದ್ಯಾಲಯಗಳಲ್ಲಿ ಎಂತಹ ಶಿಕ್ಷಣ ವ್ಯವಸ್ಥೆಯಿರಬೇಕು ಎಂಬುದನ್ನು ವಿದ್ಯಾರ್ಥಿಗಳೆ ನಿರ್ಧರಿಸಬೇಕು. ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಅನುಗುಣವಾಗಿ ಕಾಲೇಜು ವ್ಯವಸ್ಥೆಯನ್ನು ರೂಪಿಸುವುದು ಸರಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೌಲ್ಯಾಧಾರಿತ ಹಾಗೂ ಕೌಶಲ್ಯಾಧಾರಿತ ಶಿಕ್ಷಣಕ್ಕಾಗಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ನಡೆಸುತ್ತಿರುವ ಸಹಿಸಂಗ್ರಹ ಅಭಿಯಾನದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಬೇಕು.

-ಸರೋವರ್, ಸಂಚಾಲಕ, ಕರ್ನಾಟಕ ವಿದ್ಯಾರ್ಥಿ ಸಂಘಟನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News