ಸ್ವಾಮಿನಾಥನ್ ವರದಿಗೆ ಆಗ್ರಹಿಸಿ ರೈತರಿಂದ ಜೈಲ್ ಬರೋ

Update: 2018-08-09 13:38 GMT

ಬೆಂಗಳೂರು, ಆ.9: ಕೇಂದ್ರ ಸರಕಾರವು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಯೊಂದಿಗೆ, ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜೈಲ್ ಭರೋ ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಪುರಭವನದ ಮುಂಭಾಗ ಸೇರಿದ ನೂರಾರು ರೈತರು, ಕೃಷಿ ಕಾರ್ಮಿಕರು ಕೇಂದ್ರ ಸರಕಾರ ರೈತರ ಎಲ್ಲ ಬಗೆಯ ಸಾಲ ಮನ್ನಾ ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.

ಸರಕಾರಿ ಭೂಮಿ ಒತ್ತುವರಿದಾರರಿಗೆ ವಿಶೇಷ ಕೋರ್ಟ್ ಮೂಲಕ ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿದರು. ಅಲ್ಲದೆ, ನಿವೇಶನ ರಹಿತ ರೈತರಿಗೆ ನಿವೇಶನ, ಸರಕಾರಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು, ರೈತ ವಿರೋಧಿ ನೀತಿಯನ್ನು ಕೇಂದ್ರ ರಾಜ್ಯ ಸರಕಾರ ವಿರೋಧಿಸಿದ್ದೇ ಆದರೆ, ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಮತ್ತು ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ರೈತರ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ, ಗೋಮಾಳ, ಅರಣ್ಯ ಭೂಮಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News