ಬೆಂಗಳೂರು: ಯುವತಿ ವಿಚಾರದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ
ಬೆಂಗಳೂರು, ಆ.9: ಯುವತಿಯ ವಿಚಾರಕ್ಕೆ ಜಗಳ ಉಂಟಾಗಿ ಸ್ನೇಹಿತನೊಬ್ಬನನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಗುಜರಾತ್ ಮೂಲದ ರೋಣಕ್ ಚೌದರಿ (23) ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನರ್ಸಿಂಗ್ ಪ್ರವೇಶ ಪರೀಕ್ಷೆ ಬರೆಯಲು ರೋಣಕ್ ಚೌದರಿ ಸಹಿತ 30 ಮಂದಿ ಆ.2ರಂದು ಗುಜರಾತ್‌ನಿಂದ ನಗರಕ್ಕೆ ಬಂದಿದ್ದು, ಬಸಪ್ಪ ವೃತ್ತದ ಬಳಿಯಿರುವ ಹೊಟೇಲ್‌ನಲ್ಲಿ ತಂಗಿದ್ದರು.
ರೋಣಕ್, ಆತನ ಗೆಳೆಯರಾದ ಅಪೂರ್ವ ಚೌದರಿ ಮತ್ತು ರಾಯಲ್ ಚೌದರಿ ಅವರು ಇದೇ ಹೊಟೇಲ್‌ನ ಮೂರನೆ ಮಹಡಿಯಲ್ಲಿರುವ ಒಂದೇ ಕೊಠಡಿಯಲ್ಲಿ ತಂಗಿದ್ದರು. ಆದರೆ, ಬುಧವಾರ ರಾತ್ರಿ 11:15ರ ಸುಮಾರಿಗೆ ರಾಯಲ್ ಚೌದರಿ ಮತ್ತು ರೋಣಕ್ ಚೌದರಿ ನಡುವೆ ಯುವತಿಯೊಬ್ಬಾಕೆಯನ್ನು ಪ್ರೀತಿಸುವ ವಿಷಯದಲ್ಲಿ ಜಗಳವಾಗಿದೆ. ಈ ವೇಳೆ ಖಾಲಿ ಜಾಗವನ್ನು ದಾಟುತ್ತಿದ್ದ ರೋಣಕ್ ಚೌದರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ವಿ.ವಿ.ಪುರಂ ಪೊಲೀಸರು, ಮೃತರ ಪೋಷಕರಿಗೆ ಮಾಹಿತಿ ನೀಡಿ ಅವರ ಬರುವಿಕೆಗಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.