ಬೆಂಗಳೂರು: ತಮಿಳು ಹೋರಾಟಗಾರ ತಿರುಮುರುಗನ್ ಗಾಂಧಿ ಬಂಧನ
ಬೆಂಗಳೂರು, ಆ.9: ತಮಿಳು ಹೋರಾಟಗಾರ ತಿರುಮುರುಗನ್ ಗಾಂಧಿ ಅವರನ್ನು ಪೊಲೀಸರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ತಿರುಮುರುಗನ್ ಗಾಂಧಿಗಾಗಿ ಲುಕ್‌ಔಟ್ ನೋಟಿಸ್ ನೀಡಿದ್ದ ತಮಿಳುನಾಡು ಪೊಲೀಸರು, ಜರ್ಮನಿಯಿಂದ ಬೆಂಗಳೂರಿಗೆ ಬಂದಿದ್ದ ಮಾಹಿತಿ ಸಂಗ್ರಹಿಸಿ ಬಂಧಿಸಲಾಗಿದೆ. 2017ರಲ್ಲಿ ತಮಿಳುನಾಡಿನ ಪೊಲೀಸರು ತಿರುಮುರುಗನ್ ವಿರುದ್ಧ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು ಎಂದು ತಿಳಿದುಬಂದಿದೆ.
ತಿರುಮುರುಗನ್ ಗಾಂಧಿ ಮೇ 17 ಚಳುವಳಿ ಪ್ರಮುಖ ರೂವಾರಿ ಎನ್ನಲಾಗಿದೆ. 2009ರಲ್ಲಿ ನಡೆದ ಶ್ರೀಲಂಕಾ ಘರ್ಷಣೆಯಲ್ಲಿ ತಿರುಮುರುಗನ್ ಗಾಂಧಿ ತಮಿಳು ಈಲಂ ಬಂಡುಕೋರರ ಪರ ನಿಂತಿದ್ದು, ಈ ಘರ್ಷಣೆಯಲ್ಲಿ ತಮಿಳು ಈಲಂನ ಸಾಕಷ್ಟು ಬಂಡುಕೋರರು ಸಾವನ್ನಪ್ಪಿದ್ದರು ಎಂದು ಹೇಳಲಾಗುತ್ತಿದೆ.
ತಮಿಳು ಈಲಂ ಬಂಡುಕೋರರನ್ನು ಮುನ್ನಡೆಸುವ ಹೊಣೆಯನ್ನು ಹೊತ್ತಿದ್ದ ತಿರುಮುರುಗನ್ ಗಾಂಧಿ, ಮೇ 17 ಚಳುವಳಿ ಹುಟ್ಟು ಹಾಕಿ, ರೈತರ ಒಗ್ಗೂಡಿಸಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಪೊಲೀಸರು 13 ಜನರ ಮೇಲೆ ಗುಂಡು ಹಾರಿಸಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ತಿರುಮುರುಗನ್ ಗಾಂಧಿ ಮೇಲೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು ಎಂದು ಹೇಳಲಾಗುತ್ತಿದೆ.