10 ರೂ. ನಾಣ್ಯ ನಿರಾಕರಿಸುವಂತಿಲ್ಲ: ಬಿಎಂಆರ್‌ಸಿಎಲ್ ಸೂಚನೆ

Update: 2018-08-09 15:00 GMT

ಬೆಂಗಳೂರು, ಆ.9: ನಮ್ಮ ಮೆಟ್ರೋದ ಹೊಸ ಪಾರ್ಕಿಂಗ್ ಸ್ಥಳದಲ್ಲಿ ಹಣ ಪಾವತಿ ಮಾಡುವ ಸಂದರ್ಭದಲ್ಲಿ 10 ರೂ.ಗಳ ನಾಣ್ಯವನ್ನು ನಿರಾಕರಿಸುವಂತಿಲ್ಲ ಎಂದು ಬಿಎಂಆರ್‌ಸಿಎಲ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿಗಳಲ್ಲಿ 10 ರೂ. ನಾಣ್ಯವನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಈ ಸಂಬಂಧ ಹಲವು ಬಾರಿ ಸ್ಪಷ್ಟನೆ ನೀಡಿದ್ದರೂ ನಾಣ್ಯವನ್ನು ಸ್ವೀಕರಿಸಲು ಮುಂದಾಗುತ್ತಿಲ್ಲ ಎಂಬ ಆರೋಪವಿದೆ.

ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಖಾಸಗಿ ಕಂಪನಿಗೆ ಗುತ್ತಿಗೆಗೆ ನೀಡಲಾಗಿದೆ. ಈ ನಿಲ್ದಾಣದಿಂದ ದಿನನಿತ್ಯ ನೂರಾರು ಜನರು ಸಂಚಾರ ಮಾಡುತ್ತಿರುತ್ತಾರೆ. ಅಲ್ಲದೆ, ಜನದಟ್ಟಣೆಯೂ ಅಧಿಕವಾಗಿದೆ. ನಿಲ್ದಾಣದಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಿ, ವೈಟ್‌ಫೀಲ್ಡ್, ಕೆ.ಆರ್.ಪುರಂ ಕಡೆಗೆ ಉದ್ಯೋಗಿಗಳು ಹೋಗುತ್ತಾರೆ. ಹೀಗಾಗಿ, ಈ ಸ್ಥಳದಲ್ಲಿ ನಾಣ್ಯವನ್ನು ನಿರಾಕರಿಸುವಂತಿಲ್ಲ ಎಂದು ಸೂಚಿಸಲಾಗಿದೆ.

ಆರ್‌ಬಿಐನ ಸೂಚನೆಯನ್ವಯ 10 ರೂ. ನಾಣ್ಯವನ್ನು ವಿನಿಮಯ ಮಾಡಿಕೊಳ್ಳದಿರುವುದು ತಪ್ಪಾಗುತ್ತದೆ ಎಂದು ಸೂಚಿಸಿದೆ. ಇತ್ತೀಚಿಗೆ ಪ್ರಯಾಣಿಕರೊಬ್ಬರು ಬೈಕ್ ಪಾರ್ಕಿಂಗ್ ಶುಲ್ಕವಾಗಿ 10 ರೂ. ನಾಣ್ಯವನ್ನು ನೀಡಿದ್ದರು. ಇದನ್ನು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಪಡೆಯಲು ಹಿಂದೆ ಸರಿದಿದ್ದರು. ಅಲ್ಲದೆ, ನಾವು ಯಾರೂ ನಾಣ್ಯವನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿಕೊಂಡಿದ್ದರು.

ಇದರಿಂದ ಅಸಮಾಧಾನಗೊಂಡ ಮೆಟ್ರೋ ಪ್ರಯಾಣಿಕರು ಬಿಎಂಆರ್‌ಸಿಎಲ್‌ಗೆ ಟ್ವಿಟರ್ ಮೂಲಕ ದೂರು ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ನಿಗಮ 10 ರೂ. ನಾಣ್ಯವನ್ನು ಕಡ್ಡಾಯವಾಗಿ ಸ್ವೀಕರಿಸಬೇಕು ಎಂದು ಸೂಚಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News