×
Ad

ಹೆಚ್ಚು ಶಿಕ್ಷಣ ಸಂಸ್ಥೆಗಳಿರುವ ಜಿಲ್ಲೆಗಳ ಪಟ್ಟಿ : ದೇಶದಲ್ಲೇ ಬೆಂಗಳೂರು ನಗರ ಪ್ರಥಮ

Update: 2018-08-10 20:11 IST

ಬೆಂಗಳೂರು, ಆ.10: ಅಖಿಲ ಭಾರತ ಉನ್ನತ ಶಿಕ್ಷಣ ಸಂಸ್ಥೆಗಳ (AISHE) ಸಮೀಕ್ಷೆಯಲ್ಲಿ ಸತತ ಮೂರನೇ ಬಾರಿಗೂ ಅತಿ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳನ್ನು ಹೊಂದಿರುವ ಜಿಲ್ಲೆಯಾಗಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಜುಲೈ 31ರಂದು 2017-18ನೆ ಸಾಲಿನ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಯ ವರದಿ ಪ್ರಕಾರ, ಭಾರತದಲ್ಲಿ ಬೆಂಗಳೂರು ನಗರದಲ್ಲಿ ಹೆಚ್ಚು ಅತ್ಯುನ್ನತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇವೆ. ಬೆಂಗಳೂರಿನಲ್ಲಿ ಒಟ್ಟು 893 ಕಾಲೇಜುಗಳಿವೆ. ನಂತರ ಸ್ಥಾನ ಜೈಪುರ ಪಡೆದಿದ್ದು, ಅಲ್ಲಿ 558, ಹೈದರಾಬಾದ್‌ನಲ್ಲಿ 472 ಮತ್ತು ರಂಗಾರೆಡ್ಡಿ ಜಿಲ್ಲೆಯಲ್ಲಿ 343 ಕಾಲೇಜುಗಳಿವೆ.

ಬೆಂಗಳೂರು ನಗರ ಜಿಲ್ಲೆ ಕಳೆದ ಮೂರು ವರ್ಷಗಳಲ್ಲಿ ಮೊದಲ ಸ್ಥಾನ ಗಳಿಸಿದ್ದರೂ ಕಾಲೇಜುಗಳ ಸಂಖ್ಯೆ ಕಡಿಮೆಯಾಗಿದೆ. ಆಯಿಷ್ ವರದಿ ಪ್ರಕಾರ, 2016-17ನೆ ಶೈಕ್ಷಣಿಕ ಸಾಲಿನಲ್ಲಿ ಬೆಂಗಳೂರು ನಗರದಲ್ಲಿ 1,025 ಕಾಲೇಜುಗಳಿದ್ದವು. 2015-16ರಲ್ಲಿ 970, 2017-18ರಲ್ಲಿ 132 ಕಾಲೇಜುಗಳು ಕಡಿಮೆಯಾಗಿವೆ.

ಕರ್ನಾಟಕಕ್ಕೆ ಮೂರನೇ ಸ್ಥಾನ: ಭಾರತದಲ್ಲಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕಾಲೇಜುಗಳ ಸಂಖ್ಯೆಗೆ ಹೋಲಿಸಿದರೆ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಅನಂತರದ ಸ್ಥಾನಗಳಲ್ಲಿ ರಾಜಸ್ತಾನ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ಮಧ್ಯ ಪ್ರದೇಶ ರಾಜ್ಯಗಳಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News