ಫ್ಲೆಕ್ಸ್, ಹೋರ್ಡಿಂಗ್ಸ್ ತೆರವು ವಿಚಾರ; ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಲಿ: ಹೈಕೋರ್ಟ್

Update: 2018-08-10 18:27 GMT

ಬೆಂಗಳೂರು, ಆ.10: ಬಿಬಿಎಂಪಿ ವ್ಯಾಪ್ತಿಯ ಫ್ಲೆಕ್ಸ್, ಹೋರ್ಡಿಂಗ್ಸ್, ಬ್ಯಾನರ್ಸ್ ತೆರವಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಆ.14ರೊಳಗೆ ನಿಖರ ಹಾಗೂ ಸ್ಪಷ್ಟ ವರದಿ ನೀಡಲು ಸೂಚನೆ ನೀಡಿತು.
 ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ತೆರವಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ಮುಂದುವರಿಸಿತು.

ಅಡ್ವೊಕೇಟ್‌ಜನರಲ್ ಉದಯ ಹೊಳ್ಳ ಅವರು ವಾದಿಸಿ, ಫ್ಲೆಕ್ಸ್‌ಗಳನ್ನು ತೆರವು ಮಾಡುವ ವೇಳೆಯಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೇ ನಡೆಸಿದ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸಿದ್ದು, ನಗರದ 10ನೆ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನೂ ಸಲ್ಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಬಿಬಿಎಂಪಿ ಪರ ವಾದಿಸಿದ ವಕೀಲ ಶ್ರೀನಿಧಿ ಅವರು, ನಗರದಲ್ಲಿ ಅನಧಿಕೃತವಾಗಿ ಹಾಕಿರುವ ಫ್ಲೆಕ್ಸ್, ಹೋರ್ಡಿಂಗ್ಸ್, ಬ್ಯಾನರ್ಸ್‌ಗಳನ್ನು ನ್ಯಾಯಪೀಠವು ಸೂಚಿಸಿದ 48 ಗಂಟೆಯಲ್ಲಿಯೇ ಶೇ.4 ರಿಂದ 5ರಷ್ಟು ತೆರವುಗೊಳಿಸಲಾಗಿದೆ. ಉಳಿದ ಶೇ.95ರಷ್ಟು ಫ್ಲೆಕ್ಸ್ ಹಾಗೂ ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ಮುಂದಿನ ವಿಚಾರಣೆ ವೇಳೆಗೆ ಉಳಿದ ಫ್ಲೆಕ್ಸ್ ಹಾಗೂ ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಬೇಕೆಂದು ನ್ಯಾಯಪೀಠವು ಬಿಬಿಎಂಪಿಗೆ ಖಡಕ್ ಎಚ್ಚರಿಕೆ ನೀಡಿತು.

ಖುದ್ದು ಹಾಜರಿದ್ದ ಬಿಬಿಎಂಪಿ ಆಯುಕ್ತ ಮಂಜುನಾಥ್ ಅವರು, ಬಿಬಿಎಂಪಿ ವ್ಯಾಪ್ತಿಯ ಫ್ಲೆಕ್ಸ್, ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸುವ ವಿಚಾರವಾಗಿ ನೂತನ ಆ್ಯಪ್ ಒಂದನ್ನು ಜಾರಿಗೆ ತರಲಾಗಿದೆ. ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು, ನಗರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ಕಂಡು ಬಂದರೆ ಅವುಗಳನ್ನು ಫೋಟೋ ತೆಗೆದು ಆ್ಯಪ್‌ಗೆ ಹಾಕಿದರೆ ಅವುಗಳನ್ನು ತೆರವುಗೊಳಿಸಲಾಗುವುದು ಹಾಗೂ ಹಾಕಿದವರ ವಿರುದ್ಧ ಸೂಕ್ತ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ಬಿಬಿಎಂಪಿ ಎರಡು ವರ್ಷಗಳಿಂದ ಅನಧಿಕೃತ ಫ್ಲೆಕ್ಸ್ ಹಾಗೂ ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸುತ್ತಿದೆ. ಶೇ.95ರಷ್ಟು ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊ್ಳಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿ ಪ್ರತಿಕ್ರಿಯೆ ನೀಡಿದ ನ್ಯಾಯಪೀಠವು ಫ್ಲೆಕ್ಸ್, ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸುವುದು ಬಿಬಿಎಂಪಿಯ ಜವಾಬ್ದಾರಿ ಆಗಿದೆ. ಬಿಬಿಎಂಪಿ ಅಧಿಕಾರಿಗಳು ಫ್ಲೆಕ್ಸ್ ಹಾಗೂ ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಲು ವಿಳಂಭವಾಯಿತು. ಹೀಗಾಗಿ, ಕ್ಷಮಿಸಿ ಎಂಬ ಪ  ದವನ್ನು ಪದೇ ಪದೇ ಹೇಳಬೇಡಿ. ಬದಲಾಗಿ, ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಮೊದಲು ಕಾರ್ಯಪ್ರವೃತ್ತರಾಗಿ, ನೀವು ಕಾರ್ಯ ಪ್ರವೃತ್ತರಾಗದಿದ್ದರೆ ಈ ವಿಚಾರವಾಗಿ ನ್ಯಾಯಾಲಯವೇ ಮಧ್ಯಪ್ರವೇಶಿಸುತ್ತದೆ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News