ಕನ್ನಡ ಕಾವ್ಯಪರಂಪರೆಗೆ ಯುವಕವಿಗಳು ಸಾರಥ್ಯ ವಹಿಸಲಿ: ಪ್ರೊ.ಚಂದ್ರಶೇಖರ ಪಾಟೀಲ

Update: 2018-08-11 13:38 GMT

ಬೆಂಗಳೂರು, ಆ.11: ಕನ್ನಡ ಕಾವ್ಯ ಪರಂಪರೆಗೆ ದೊಡ್ಡ ಇತಿಹಾಸ ಇದೆ. ಕಾವ್ಯ ಲೋಕದ ಪರಂಪರೆಯನ್ನು ಯುವಕವಿಗಳು ಮುಂದುವರೆಸಬೇಕು ಎಂದು ಕವಿ ಹೋರಾಟಗಾರ ಪ್ರೊ.ಚಂದ್ರಶೇಖರ ಪಾಟೀಲ ಆಶಿಸಿದರು.

ಶನಿವಾರ ಅನ್ವೇಷಣೆ ವೇದಿಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ವಿಜಯಕಾಂತ ಪಾಟೀಲರ ‘ಬೆವರಬಣ್ಣ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯುವ ಕವಿಗಳು ನಮ್ಮ ಕಾವ್ಯ ಪರಂಪರೆಯನ್ನು ಗಂಭೀರವಾಗಿ ಅಧ್ಯಯನ ಮಾಡಿದರೆ, ವಾಸ್ತವದ ಬಿಕ್ಕಟ್ಟುಗಳನ್ನು ಕಾವ್ಯದ ಮೂಲಕ ಸೃಜನಾತ್ಮಕವಾಗಿ ಕಟ್ಟಲು ಸಾಧ್ಯವೆಂದು ತಿಳಿಸಿದರು.

ನವ್ಯ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಕಾವ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತು. ಕಾವ್ಯದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಲು ಪ್ರಯತ್ನಿಸಿದರು. ಅವರ ಅನುಭವಗಳನ್ನು ಯುವ ಕವಿಗಳು ಪಡೆದುಕೊಳ್ಳಬೇಕೆಂದು, ಕಾವ್ಯಗಳನ್ನು ಓದಿ, ದಕ್ಕಿಸಿಕೊಳ್ಳಬೇಕೆಂದು ಅವರು ಹೇಳಿದರು.

ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, ದೊಡ್ಡ ಪ್ರಮಾಣದಲ್ಲಿ ಇವತ್ತು ಕಾವ್ಯ ಸೃಷ್ಟಿ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬರೆಯುವವರೆಲ್ಲ ಉತ್ತಮಕಾವ್ಯ ರಚಿಸುತ್ತಿಲ್ಲ. ಅವು ಗದ್ಯರೂಪದಲ್ಲಿ ಇರುತ್ತಿವೆ. ಇದರಿಂದ ಕಾವ್ಯದ ಸೊಗಸು ಕೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಯುವಕವಿಗಳು ಹಿಂದಿನ ಕವಿಗಳ ಕಾವ್ಯದ ಅನುಕರಣೆ ಮಾಡದೆ ಹೊಸ ಕವಿತೆಯ ಸೃಷ್ಟಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಅಭ್ಯಾಸ, ಅನುಭವದ ಕೊರತೆಯಿಂದ ಕಾವ್ಯ ಶಕ್ತಿ ಕ್ಷೀಣಿಸುತ್ತಿದೆ. ಈ ಬಗ್ಗೆ ಯುವ ಕವಿಗಳು ಆಲೋಚಿಸಬೇಕಿದೆ ಎಂದು ಅವರು ಹೇಳಿದರು.

ಕವಯಿತ್ರಿ ಡಾ.ಎಚ್.ಎಲ್.ಪುಷ್ಪಮಾತನಾಡಿ, ವಿಜಯಕಾಂತರ ಕವಿತೆಗಳಲ್ಲಿ ಪ್ರಬುದ್ಧತೆ ಕಾಣುತ್ತಿದೆ. ಸಮಾಜ ಹಾಗೂ ಸುತ್ತಲಿನ ಜಗತ್ತಿನ ಬಗ್ಗೆ ಮಾತನಾಡುವಾಗ ಲೇವಡಿ, ವ್ಯಂಗ್ಯದ ಹರಿತವಾದ ಮಾತನ್ನು ಲೀಲಾಜಾಲವಾಗಿ ಬಳಸುತ್ತಾರೆ ಎಂದು ಅಭಿಪ್ರಾಯಿಸಿದರು.

ಕೃತಿ ಬಿಡುಗಡೆ ಮುನ್ನ ನಡೆದ ಕವಿಗೋಷ್ಟಿಯಲ್ಲಿ ಪ್ರೊ.ಎಲ್.ಎನ್. ಮುಕುಂದರಾಜ್, ಡಾ. ಜಯಶ್ರೀ ಕಂಬಾರ, ಪ್ರೊ.ಪದ್ಮಾ ಚಿನ್ಮಯಿ, ಮಲ್ಲಿಕಾರ್ಜುನಗೌಡ ತೂಲಹಳ್ಳಿ, ಶಿವಕುಮಾರ ಮಾವಲಿ ಮೊದಲಾದವರು ಕಾವ್ಯ ವಾಚನ ಮಾಡಿದರು. ವೇದಿಕೆಯಲ್ಲಿ ಅನ್ವೇಷಣೆ ವೇದಿಕೆಯ ಅಧ್ಯಕ್ಷ ಆರ್‌ಜಿ. ಹಳ್ಳಿ ನಾಗರಾಜ, ಕವಿ ವಿಜಯಕಾಂತ, ಕತೆಗಾರ ಡಾ.ಚೆನ್ನಪ್ಪಅಂಗಡಿ ಉಪಸ್ಥಿತರಿದ್ದರು. ಅಂಕಿತನಿಹಾರಿ ಸ್ವಾಗತಿಸಿದರು. ಪತ್ರಕರ್ತ ದೇವು ಪತ್ತಾರ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News