ಬುಡಕಟ್ಟು ಸಮುದಾಯಗಳ ಮೇಲೆ ಹಿಂದುತ್ವ ಹೇರಿಕೆ ಸಲ್ಲ: ಸಂಸದ ಜಿತೇಂದ್ರ ಚೌಧರಿ

Update: 2018-08-11 14:29 GMT

ಬೆಂಗಳೂರು, ಆ.11: ಕೇಂದ್ರ ಸರಕಾರ ಆದಿವಾಸಿಗರ ಹಕ್ಕುಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಮೂಲಕ ಬುಡಕಟ್ಟು ಸಮುದಾಯಗಳ ಮೇಲೆ ಹಿಂದುತ್ವವನ್ನು ಹೇರಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ದಿವಾಸ್ ಅಧಿಕಾರ್ ರಾಷ್ಟ್ರೀಯ ಮಂಚ್ ಸಂಚಾಲಕ, ಸಂಸದ ಜಿತೇಂದ್ರ ಚೌಧರಿ ಆರೋಪಿಸಿದರು.

ಶನಿವಾರ ವಿಶ್ವ ಆದಿವಾಸಿ ದಿನದ ಪ್ರಯುಕ್ತ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಯೋಜಿಸಿದ್ದ ’ಆದಿವಾಸಿ ಹಕ್ಕುಗಳ ಜಾರಿ’ ಸಂವಾದದಲ್ಲಿ ಮಾತನಾಡಿದ ಅವರು, ಆದಿವಾಸಿಗರ ಹಕ್ಕುಗಳನ್ನು ದಮನಗೊಳಿಸಿ ವಿಚ್ಛೇದಿಸುವ ಶಕ್ತಿಗಳ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹೋರಾಟ ರೂಪಿಸಬೇಕಾಗಿದೆ ಎಂದು ತಿಳಿಸಿದರು.

ಪ್ರಕೃತಿಯನ್ನು ಆರಾಧಿಸುವವರನ್ನು ಶಿವ, ಮಹದೇವ ಆರಾಧಕರನ್ನಾಗಿ ಮಾಡುತ್ತಿದೆ. ಆದಿವಾಸಿಗರ ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ವಿಚಾರಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಅರಣ್ಯ ಕಾಯ್ದೆಗಳಿಗೆ ತಿದ್ದುಪಡಿ ತಂದು ಕಾಡಿನಲ್ಲಿ ಮುಕ್ತವಾಗಿ ಜೀವಿಸುವ ಹಕ್ಕನ್ನು ಕಸಿದುಕೊಂಡು ನಮ್ಮ ಚಲನವಲನಗಳ ನಿರ್ಬಂಧಿಸುತ್ತಿದೆ ಎಂದು ಅವರು ತಿಳಿಸಿದರು.

ಶೇ.95 ಆದಿವಾಸಿಗರ ತಿಂಗಳ ಆದಾಯ 5 ಸಾವಿರ ರೂ.ಗೂ ಕಡಿಮೆ ಇದ್ದು, ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಲು ಆಗುತ್ತಿಲ್ಲ. ಅರಣ್ಯ ಹಕ್ಕು ಕಾಯ್ದೆಯ 10 ಹೆಕ್ಟೇರ್ ಜಮೀನು ಕೋರಿ ಸಲ್ಲಿಕೆಯಾದ 47 ಲಕ್ಷ ಅರ್ಜಿಗಳಲ್ಲಿ 30 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 17 ಲಕ್ಷ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗಿದೆ. ದೇಶದಲ್ಲಿ ಸುಮಾರು 1 ಕೋಟಿ ಅರ್ಜಿಗಳು ಸಲ್ಲಿಕೆ ಆಗಬೇಕಾಗಿತ್ತು. ಆದರೆ, ರಾಜ್ಯ ಸರಕಾರಗಳ ನಿರ್ಲಕ್ಷದಿಂದಾಗಿ ಆದಿವಾಸಿಗರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

’ನರೇಗಾ’ ಯೋಜನೆಯ 100 ದಿನಗಳ ಕೂಲಿಯಿಂದ ಸಾಕಷ್ಟು ಆದಿವಾಸಿ ಮತ್ತು ಇತರೆ ಸಮುದಾಯದವರಿಗೆ ಅನುಕೂಲವಾಗುತ್ತಿತ್ತು. ಆದರೆ, ಕೇಂದ್ರ ಸರಕಾರ ಈ ಯೋಜನೆಗೆ 22 ಸಾವಿರ ಕೋಟಿ ರೂ. ಕಡಿತಗೊಳಿಸಿದೆ. ಎಸ್ಸಿ/ಎಸ್ಟಿ ಜನಾಂಗದ ಅನುದಾನಕ್ಕೆ ಕತ್ತರಿ ಹಾಕುತ್ತಿದೆ. ಆದರೆ ವಾರ್ಷಿಕ 2-3 ಲಕ್ಷ ಕೋಟಿ ರೂ. ಕಾರ್ಪೊರೇಟ್ ಕಂಪೆನಿಗಳ ಸಾಲ ಮತ್ತು ಬಡ್ಡಿ ಮನ್ನಾ ಮಾಡುತ್ತಿದೆ ಎಂದು ಅವರು ದೂರಿದರು.

ಉನ್ನತ ಮಟ್ಟದ ಸಭೆ: ಕಂದಾಯ, ಅರಣ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರೊಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ಉನ್ನತ ಮಟ್ಟದ ಸಭೆ ಕರೆದು ಆದಿವಾಸಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ಸಂವಾದದಲ್ಲಿ ಕವಯತ್ರಿ ಡಾ.ಸುಕನ್ಯಾ ಮಾರುತಿ, ಬಯ್ಯಾರೆಡ್ಡಿ, ಸಮಿತಿ ಸಂಚಾಲಕರಾದ ವೈ.ಕೆ. ಗಣೇಶ್, ಎಸ್.ವೈ. ಗುರುಶಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಸರಕಾರ ಎಸ್ಸಿ, ಎಸ್ಟಿ ಮೆಟ್ರಿಕ್ ವಿದ್ಯಾರ್ಥಿಗಳ 7 ಸಾವಿರ ಕೋಟಿ ರೂ. ವಿದ್ಯಾರ್ಥಿ ವೇತನ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ಯಾಕೆ ಪ್ರಶ್ನಿಸುತ್ತಿಲ್ಲ.
-ಜಿತೇಂದ್ರ ಚೌಧರಿ ಸಂಚಾಲಕ, ಆದಿವಾಸ್ ಅಧಿಕಾರ್ ರಾಷ್ಟ್ರೀಯ ಮಂಚ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News