×
Ad

ಯುವಕನಿಂದ ಬಲವಂತದ ವಸೂಲಿ: ಯುವತಿ ಸೇರಿ ಮೂವರ ಬಂಧನ

Update: 2018-08-11 20:26 IST

ಬೆಂಗಳೂರು, ಆ.11: ಯುವಕನನ್ನು ಬೆದರಿಸಿ ಹಣ, ಆಭರಣವನ್ನು ಬಲವಂತವಾಗಿ ವಸೂಲಿ ಮಾಡುತ್ತಿದ್ದ ಯುವತಿ ಸೇರಿ ಮೂರು ಮಂದಿಯನ್ನು ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಎಚ್.ದಯಾನಂದ ಎಂಬವರನ್ನು ಫೇಸ್‌ಬುಕ್ ಮುಖಾಂತರ ಪರಿಚಯಿಸಿಕೊಂಡ ಅರ್ಪಿತಾ(22) ಜು.29ರಂದು ತಮ್ಮ ಮನೆಗೆ ಕರೆಸಿ ಕುಡಿಯಲು ಟೀ ಕೊಟ್ಟು ಮನೆಯ ಬಾಗಿಲನ್ನು ಬಂದ್ ಮಾಡಿದ್ದಾರೆ. ಆಗ ಸುಮಾರು 25 ವರ್ಷ ವಯಸ್ಸಿನ ವ್ಯಕ್ತಿ ಪೊಲೀಸ್ ಎಂದು ಹೇಳಿಕೊಂಡು ಮನೆಯ ಒಳಗೆ ಬಂದು ತನ್ನ ಮತ್ತೊಬ್ಬ ಸ್ನೇಹಿತನನ್ನು ಅಲ್ಲಿಗೆ ಕರೆಸಿ ದಯಾನಂದರನ್ನು ರೂಮಿನಲ್ಲಿ ಕೂಡಿ ಹಾಕಿದ್ದಾರೆ.

ಸುಮಾರು ಅರ್ಧ ಗಂಟೆ ನಂತರ ದಯಾನಂದರನ್ನು ಹೆದರಿಸಿ ಚಿನ್ನದ ಉಂಗುರ, ಕೊರಳಿನಲ್ಲಿದ್ದ ಚೈನು ಹಾಗೂ ಎಟಿಎಂ ಕಾರ್ಡು ಮತ್ತು ಪಿನ್ ನಂಬರ್, ಮೊಬೈಲ್ ಫೋನ್ ಹಾಗೂ ಕಾರಿನ ಆರ್.ಸಿ.ಪುಸ್ತಕವನ್ನು ಹೆದರಿಸಿ ಕಿತ್ತುಕೊಂಡು ಹೋಗಿದ್ದಾರೆ. ಅಲ್ಲದೆ, ದಯಾನಂದ ಅವರ ಖಾತೆಯಿಂದ 55 ಸಾವಿರ ರೂ.ಗಳನ್ನು ಡ್ರಾ ಮಾಡಿಕೊಂಡಿದ್ದು, ಆ.7ರಂದು ಪುನಃ ಅವರಿಗೆ ಕರೆ ಮಾಡಿ ಇನ್ನು ಒಂದು ಲಕ್ಷ ರೂ. ಕೊಡಬೇಕೆಂದು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಬೆಂಗಳೂರಿನ ಚಿಕ್ಕಬಾಣಾವರದ ಪವನ್‌ ಕುಮಾರ್(25), ಮಡಿವಾಳದ ಸಿದ್ಧಾರ್ಥ್(45) ಹಾಗೂ ಚಿಕ್ಕಬಾಣಾವರದ ಅರ್ಪಿತಾ ಬಿ.ಎನ್.(22)ರನ್ನು ದಸ್ತಗಿರಿ ಮಾಡಿದ್ದಾರೆ.

ಅಲ್ಲದೆ, ಆರೋಪಗಳಿಂದ ಸುಮಾರು 1.35 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 35 ಸಾವಿರ ರೂ.ನಗದು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News