ಕೇಂದ್ರ ಕ್ರಮ ವಹಿಸದಿದ್ದರೆ ಸುಪ್ರೀಂಕೋರ್ಟ್ ನಮ್ಮ ಮುಂದಿದೆ: ಮಾಜಿ ಸಚಿವ ಎಂ.ಬಿ.ಪಾಟೀಲ್

Update: 2018-08-11 15:09 GMT

ಬೆಂಗಳೂರು, ಆ. 11: ‘ಲಿಂಗಾಯತ ಪ್ರತ್ಯೇಕ ಧರ್ಮ’ಕ್ಕೆ ಸ್ಥಾನಮಾನ ಕಲ್ಪಿಸುವ ಪ್ರಸ್ತಾವನೆ ಕೇಂದ್ರದ ಅಂಗಳದಲ್ಲಿದೆ. ಕೇಂದ್ರ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ನಮ್ಮ ಮುಂದಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಲಿಂಗಾಯತ ಧರ್ಮ ಜಾಗತಿಕ ಧರ್ಮ ಆಗಬೇಕೆಂಬ ನಮ್ಮ ಗುರಿ ಯಥಾಸ್ಥಿತಿಯಲ್ಲಿದೆ. ನಿವೃತ್ತ ಅಧಿಕಾರಿ ಜಾಮದಾರ್ ನನ್ನೊಂದಿಗೆ ಸುದೀರ್ಘ ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಜನ ಜಾಗೃತಿ ಮೂಡಿಸಲಾಗುವುದು ಎಂದರು.

ಸಿಎಂ ಜತೆ ಚರ್ಚೆ: ಉತ್ತರ ಕರ್ನಾಟಕದಲ್ಲಿ ಜಲಾಶಯಗಳೆಲ್ಲ ಭರ್ತಿಯಾಗಿವೆ. ನಾಳೆ ಆಲಮಟ್ಟಿ ಜಲಾಶಯಕ್ಕೆ ಸಿಎಂ ಬಾಗಿನ ಅರ್ಪಿಸಲಿದ್ದಾರೆ. ಜಲಾಶಯದ ನೀರನ್ನು ರೈತರು ನೀರಾವರಿಗೆ ಬಳಕೆ ಮಾಡಿಕೊಳ್ಳಲು ನೆರವಾಗಲಿದೆ ಎಂದು ಅವರು ಹೇಳಿದರು.

ಕೆಲ ಜಿಲ್ಲೆಗಳಲ್ಲಿ ಮಳೆಯಾಗಿಲ್ಲ. ಹೀಗಾಗಿ ಬರ ಘೋಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಅಲ್ಲದೆ, ಮೇವಿನ ಸಮಸ್ಯೆ ತೀವ್ರವಾಗಿದೆ, ಬೆಳೆ ಹಾಳಾಗಿದೆ. ಗುಳೇ ಹೋಗುವ ಪರಿಸ್ಥಿತಿ ಇದೆ. ಪರಿಹಾರ ಕಾಮಗಾರಿ ಶೀಘ್ರ ಕೈಗೊಳ್ಳಬೇಕಿದೆ. ನಾಳೆ ಸಿಎಂ ಕುಮಾರಸ್ವಾಮಿ ಜೊತೆ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ರಾಜಧರ್ಮ ಪಾಲನೆ: ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ಮತ ಕ್ಷೇತ್ರಕ್ಕೆ, ಜಿಲ್ಲೆಗೆ ಸೀಮಿತವಾಗಿ ಮೈತ್ರಿ ಆಗಬೇಕಾಗುತ್ತದೆ. ಈ ವಿಚಾರದಲ್ಲಿ ರಾಜಧರ್ಮ ಪಾಲನೆ ಮಾಡಬೇಕು ಎಂದು ದೇವೇಗೌಡ ಹೇಳಿದ್ದಾರೆ. ಸ್ಥಳೀಯವಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳಲಿದ್ದಾರೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದರು.

‘ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೂರ್ನಾಲ್ಕು ದಿನಗಳಲ್ಲಿ ತೀರ್ಪು ನೀಡಲಿದೆ. ಏನು ನಿರ್ಣಯ ಬರಲಿದೆ ಎಂದು ನೋಡಬೇಕು. ಈ ವಿವಾದ ಇತ್ಯರ್ಥಕ್ಕೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲಿಲ್ಲ. ಕುಡಿಯುವ ನೀರು ನೀಡುವುದಿಲ್ಲ ಎಂಬ ಗೋವಾ ರಾಜ್ಯದ ವಾದ ಸಲ್ಲ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ನಮ್ಮ ಪರ ತೀರ್ಪು ಬರುವ ನಿರೀಕ್ಷೆ ಇದೆ’
-ಎಂ.ಬಿ.ಪಾಟೀಲ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News