ಮಂಡ್ಯ: ಜಿನಿವಾ ಒಪ್ಪಂದ ದಿನಾಚರಣೆ, ಯುವ ರೆಡ್‍ಕ್ರಾಸ್ ಕಾರ್ಯಕ್ರಮಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
ಮಂಡ್ಯ, ಆ.11: ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಹಾಗೂ ಜಿಲ್ಲಾ ಶಾಖೆ ವತಿಯಿಂದ ನಗರದ ರೆಡ್‍ಕ್ರಾಸ್ ಸಂಸ್ಥೆ ಆವರಣದಲ್ಲಿ ಶನಿವಾರ ನಡೆದ ಜಿನಿವಾ ಒಪ್ಪಂದ ದಿನಾಚರಣೆ ಹಾಗೂ ಯುವ ರೆಡ್‍ಕ್ರಾಸ್ ಕಾರ್ಯಕ್ರಮಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ವಿ.ಶ್ರೀಧರ್ ಮಾತನಾಡಿ, 1863ರಲ್ಲಿ ವ್ಯಾಪಾರೋದ್ಯಮಿ ಹೆನ್ಸಿಯೂನೇಡ್ ಎಂಬಾತ ಕೃತಿಯೊಂದನ್ನು ಹೊರತಂದನು. ನಂತರ, ಸೈನಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಯೂರೋಪಿನ ಐದಾರು ದೇಶಗಳನ್ನು ಸೇರಿಸಿ ವೆಲ್ಪೇರ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ. ಅದರ ಮುಂದುವರಿದ ಭಾಗವೇ ರೆಡ್‍ಕ್ರಾಸ್ ಸಂಸ್ಥೆ. ರೆಡ್‍ಕ್ರಾಸ್ ಸಂಸ್ಥೆ ಹೊಂದಿರುವ ಮಾನವೀಯ ಮೌಲ್ಯ, ಸೇವಾಮನೋಭಾವ ಗುಣವನ್ನು ವಿದ್ಯಾರ್ಥಿಗಳಿಗೂ ಸಹ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ರಾಜ್ಯ ಯೂತ್ಸ್ ರೆಡ್‍ಕ್ರಾಸ್ ಸಲಹೆಗಾರ ಸುರೇಶ್ ಮಾತನಾಡಿ, 1864ರ ಕಾಲಘಟ್ಟದಲ್ಲಿ ದೇಶಗಳು ತನ್ನ ಗಡಿ ವಿಸ್ತರಣೆ ಮಾಡಿಕೊಳ್ಳುವ ಸಲುವಾಗಿ ಇತರೆ ದೇಶಗಳ ಮೇಲೆ ಯುದ್ಧ ಮಾಡುತ್ತಿದ್ದವು. ಅದರಲ್ಲೂ ಸಾಕಷ್ಟು ಮಂದಿ ಸೈನಿಕರು ಸಾವು-ನೋವುಗಳಿಗೆ ಗುರಿಯಾಗುತ್ತಿದ್ದರು. ಯುದ್ಧದ ಬಳಿಕ ಗಾಯಗೊಂಡ ಸೈನಿಕರನ್ನು ಕೇಳುವವರೇ ಇಲ್ಲದಂತಾಗುತ್ತಿತ್ತು. ಸತ್ತವರ ಕುಟುಂಬದವರೂ ಬೀದಿಪಾಲಾಗುತ್ತಿದ್ದರು. ಇದೆಲ್ಲವನ್ನೂ ಕಂಡು 1864ರಲ್ಲಿ ಜಿನಿವಾ ಎಂಬ ರಾಷ್ಟ್ರ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದೇ ಜಿನಿವಾ ಒಪ್ಪಂದವಾಗಿ ದಾಖಲಾಯಿತು ಎಂದರು.
ರೆಡ್‍ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಡಾ. ಶಿವಕುಮಾರ್, ಬಿ.ಸಿ. ರಾಮೇಗೌಡ, ಕೃಷಿಕ್ ಲಯನ್ಸ್ ಪೋಷಕ ಕೆ.ಟಿ.ಹನುಮಂತು, ಪ್ರಾಧ್ಯಾಪಕ ಡಾ.ಶಿವಕುಮಾರ್, ಶಿವಲಿಂಗಯ್ಯ, ಇತರರು ಉಪಸ್ಥಿತರಿದ್ದರು