ನಿಮ್ಮ ಮೂತ್ರಪಿಂಡಗಳು ಆರೋಗ್ಯವಾಗಿರಬೇಕೇ ? ಹೀಗೆ ಮಾಡಿ.....

Update: 2018-08-12 12:22 GMT

ನಮ್ಮ ಶರೀರದ ಬಹುಮುಖ್ಯ ಅಂಗಗಳಲ್ಲೊಂದಾಗಿರುವ ಮೂತ್ರಪಿಂಡಗಳು ಶರೀರದ ಚಯಾಪಚಯಕ್ಕೆ ನೆರವಾಗುತ್ತವೆ,ರಕ್ತದ ಪ್ರಮಾಣ ಮತ್ತು ಒತ್ತಡವನ್ನು ಕ್ರಮಬದ್ಧಗೊಳಿಸುತ್ತವೆ,ಕೆಂಪು ರಕ್ತಕಣಗಳನ್ನು ಉತ್ಪಾದಿಸುವ ಜೊತೆಗೆ ಮೂಳೆಗಳನ್ನು ಸದೃಢವಾಗಿರಿಸುತ್ತವೆ ಮತ್ತು ಶರೀರದಲ್ಲಿ ಸಂಗ್ರಹವಾಗಿರುವ ಎಲ್ಲ ತ್ಯಾಜ್ಯಗಳನ್ನು ಹೊರಕ್ಕೆ ಹಾಕುತ್ತವೆ. ನಮ್ಮ ಅನಾರೋಗ್ಯಕರ ಜೀವನಶೈಲಿ ಮತ್ತು ಪರಿಶ್ರಮದ ಬದುಕು ಮೂತ್ರಪಿಂಡಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದರಿಂದಾಗಿ ಮೂತ್ರಪಿಂಡ ಕಲ್ಲುಗಳು,ಸೋಂಕುಗಳು,ಗಡ್ಡೆ ಮತ್ತು ಮೂತ್ರಪಿಂಡ ವೈಫಲ್ಯದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಮೂತ್ರಪಿಂಡ ಕಾಯಿಲೆಗಳು ಹೆಚ್ಚಿನ ಸದ್ದುಗದ್ದಲ ಮಾಡುವುದಿಲ್ಲ ಮತ್ತು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಮೂತ್ರಪಿಂಡ ಕಾಯಿಲೆಗಳನ್ನು ಮೊದಲೇ ಪತ್ತೆ ಹಚ್ಚಿದರೆ ಅವುಗಳನ್ನು ಸುಸ್ಥಿತಿಗೆ ಮರಳಿಸಲು ಸಾಧ್ಯವಾಗಿಸುವ ಕೆಲವು ಮಾರ್ಗಗಳು ಖಂಡಿತ ಇವೆ.

ನೀರಿನ ಮೂಲಕ ಶರೀರವನ್ನು ನಂಜುಮುಕ್ತಗೊಳಿಸಿ

 ಕಿಡ್ನಿಗಳು ವಿಷಪದಾರ್ಥಗಳಿಂದ ಮುಕ್ತವಾಗಿರಲು ನೀರಿನ ಸೇವನೆ ಮುಖ್ಯವಾಗಿದೆ. ಸಾಕಷ್ಟು ನೀರನ್ನು ಸೇವಿಸಿದರೆ ಅದರಿಂದ ವಿಷವಸ್ತುಗಳನ್ನು ಸೋಸಿ ಹೊರಗೆ ಹಾಕಲು ನೆರವಾಗುತ್ತದೆ. ದಿನಕ್ಕೆ ಕನಿಷ್ಠ 10-12 ಗ್ಲಾಸ್ ನೀರನ್ನು ಸೇವಿಸಿ ಮತ್ತು ನಿಮ್ಮ ಮೂತ್ರವನ್ನು ಪರೀಕ್ಷಿಸುತ್ತಿರಿ. ಮೂತ್ರವು ತುಂಬ ಕಟುವಾದ ವಾಸನೆಯನ್ನು ಹೊಂದಿರಬಾರದು. ನೀರು ಮಾತ್ರ ಮೂತ್ರಪಿಂಡಗಳ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. ನೀರಿನ ಬದಲು ಕಾಫಿ,ಮೃದುಪಾನೀಯಗಳು ಮತ್ತು ಇಂಗಾಲೀಕೃತ ಪಾನೀಯಗಳಂತಹ ದ್ರವಪದಾರ್ಥಗಳನ್ನು ಸೇವಿಸುವುದರಿಂದ ಯಾವುದೇ ಲಾಭವಿಲ್ಲ. ಆದರೆ ಚಹಾ ಅಥವಾ ನೈಸರ್ಗಿಕ ಹಣ್ಣಿನ ರಸದ ಸೇವನೆಯು ಶರೀರವನ್ನು ಎಲ್ಲ ತ್ಯಾಜ್ಯಗಳಿಂದ ಮುಕ್ತಗೊಳಿಸಲು ನೆರವಾಗುತ್ತದೆ.

ಸಾಧ್ಯವಿದ್ದಷ್ಟು ಓಡಾಡುತ್ತಿರಿ

ಹೆಚ್ಚಿನ ಸಮಯ ದೈಹಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಸುದೀರ್ಘ ಸಮಯ ಕುಳಿತುಕೊಂಡೇ ಇರುವುದನ್ನು ನಿವಾರಿಸಿ. ಆದರೆ ತುಂಬ ಹೊತ್ತು ಕುಳಿತೇ ಇರಬೇಕಾದ ವೃತ್ತಿ ನಿಮ್ಮದಾಗಿದ್ದರೆ ಯೋಗ ಅಥವಾ ಜಿಮ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ನಮ್ಮಲ್ಲಿ ಹೆಚ್ಚಿನ ದೈಹಿಕ ಕ್ಷಮತೆಯಿದ್ದರೆ,ನಮ್ಮ ಚಯಾಪಚಯ ಉತ್ತಮವಾಗಿದ್ದರೆ,ರಕ್ತದೊತ್ತಡ ನಿಯಂತ್ರಣದಲ್ಲಿದ್ದರೆ ಮತ್ತು ಒಟ್ಟಾರೆ ಆರೋಗ್ಯವು ಚೆನ್ನಾಗಿದ್ದರೆ ನಮ್ಮ ಶರೀರವು ಹೆಚ್ಚು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಬಿರುಸಿನ ನಡಿಗೆ,ಜಾಗಿಂಗ್,ಸೈಕಲ್ ಸವಾರಿ ಮತ್ತು ಯಾವುದೇ ವಿಧದ ಎರೋಬಿಕ್ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.

ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ

 ಪೊಟ್ಯಾಷಿಯಂ ಶರೀರವನ್ನು ತ್ಯಾಜ್ಯಮುಕ್ತಗೊಳಿಸಲು ನೆರವಾಗುತ್ತದೆ ಮತ್ತು ಇದು ತರಕಾರಿಗಳು ಮತ್ತು ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ದ್ರಾಕ್ಷಿ, ಮೂಸುಂಬಿ,ಕಿತ್ತಳೆ,ಬಾಳೆಹಣ್ಣು,ಕಿವಿ,ಆ್ಯಪ್ರಿಕೋಟ್,ಒಣದ್ರಾಕ್ಷಿ ಇತ್ಯಾದಿಗಳು ಸಮೃದ್ಧ ಪೊಟ್ಯಾಷಿಯಂ ಅನ್ನು ಒಳಗೊಂಡಿರುತ್ತವೆ. ಹಾಲು ಮತ್ತು ಮೊಸರು ಪೊಟ್ಯಾಷಿಯಂನ ಇತರ ಮೂಲಗಳಾಗಿವೆ. ನಿಮ್ಮ ಶರೀರದಲ್ಲಿ ಎಲೆಕ್ಟ್ರೋಲೈಟ್‌ಗಳ ಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತಾಗಲು ನಿಮ್ಮ ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳು ಇರುವಂತೆ ನೋಡಿಕೊಳ್ಳಿ. ಬೆಳಿಗ್ಗೆ ಒಂದು ಗ್ಲಾಸ್ ದ್ರಾಕ್ಷಿರಸವನ್ನು ಸೇವಿಸಿದರೆ ಅದು ಮೂತ್ರಪಿಂಡಗಳ ಸೋಸುವಿಕೆ ಕಾರ್ಯದ ಉಪಉತ್ಪನ್ನವಾಗಿರುವ ಯೂರಿಕ್ ಆ್ಯಸಿಡ್‌ನ್ನು ನಿವಾರಿಸುತ್ತದೆ.

ಸಾಕಷ್ಟು ನಿದ್ರೆಯಿರಲಿ

7-8 ಗಂಟೆಗಳ ಒಳ್ಳೆಯ ನಿದ್ರೆಯಿಂದ ಮೂತ್ರಪಿಂಡಗಳು ಆರೋಗ್ಯವಾಗಿರುತ್ತವೆ. ಕೇವಲ ಐದು ಗಂಟೆ ಅಥವಾ ಅದಕ್ಕೂ ಕಡಿಮೆ ನಿದ್ರೆ ಮಾಡಿದರೆ ಮೂತ್ರಪಿಂಡಗಳ ಕಾರ್ಯಕ್ಷಮತೆ ಕುಗ್ಗುವ ಅಪಾಯವನ್ನು ನೀವೇ ಆಹ್ವಾನಿಸಿದಂತಾಗುತ್ತದೆ. ಯಾವಾಗಲೂ ನಿಗದಿತ ಸಮಯದಲ್ಲಿಯೇ ನಿದ್ರೆ ಮಾಡಿ. ಸಂಜೆಯ ವೇಳೆ ಕಾಫಿ ಸೇವನೆಯನ್ನು ನಿವಾರಿಸಿ ಮತ್ತು ನಿದ್ರೆಗೆ ತೆರಳುವ ಮುನ್ನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಸೀಮಿತಗೊಳಿಸಿ. ನಿದ್ರೆಗೆ ಮುನ್ನ ನಿಮ್ಮ ಫೋನ್ ಅಥವಾ ಇತರ ಯಾವುದೇ ಸಾಧನವನ್ನು ಬಳಸಬೇಡಿ,ಅದು ನಿಮ್ಮ ನಿದ್ರೆಗೆ ವ್ಯತ್ಯಯವನ್ನುಂಟು ಮಾಡಬಹುದು.

ಧೂಮ್ರಪಾನ ಬಿಡಿ

ಧೂಮ್ರಪಾನವು ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದರಿಂದಾಗಿ ಮೂತ್ರಪಿಂಡಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಮೂತ್ರಪಿಂಡಗಳಿಗೆ ಸಾಕಷ್ಟು ರಕ್ತ ಹರಿಯದಿದ್ದರೆ ಅವು ಸಮರ್ಪಕವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಧೂಮ್ರಪಾನವು ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡ ಕ್ಯಾನ್ಸರ್‌ನ ಅಪಾಯವನ್ನೂ ಹೆಚ್ಚಿಸುತ್ತದೆ.

ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸಲು ಈ ಟಿಪ್‌ಗಳನ್ನು ಅನುಸರಿಸಿ ಸುದೀರ್ಘ ಮತ್ತು ಆರೋಗ್ಯಯುತ ಬದುಕು ಬಾಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News