ನೆಹರೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ ಪಿತಾಮಹ: ಮಾಜಿ ಪ್ರಧಾನಿ ದೇವೇಗೌಡ

Update: 2018-08-12 12:42 GMT

ಬೆಂಗಳೂರು, ಆ.12: ದೇಶದ ಪ್ರಥಮ ಪ್ರಧಾನ ಮಂತ್ರಿ ಜವಹಾರಲಾಲ್ ನೆಹರೂ ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದೆ ಪಿತಾಮಹ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಅಂಕಿತ ಪ್ರಕಾಶನ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬಿ.ಎಲ್.ಶಂಕರ್ ಹಾಗೂ ಪ್ರೊ.ವಲೇರಿಯನ್ ರೊಡ್ರಿಗಸ್‌ರವರ ಇಂಗ್ಲಿಷ್ ಆವೃತ್ತಿಯ ಕನ್ನಡ ಅನುವಾದ ‘ಭಾರತದ ಸಂಸತ್ತು’ ಒಂದು ಕಾರ್ಯನಿರತ ಪ್ರಜಾಪ್ರಭುತ್ವ ಕುರಿತ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಾಜಿ ಪ್ರಧಾನಿ ಜವಹಾರಲಾಲ್ ನೆಹರೂ ಬಗ್ಗೆ ಅವಹೇಳನವಾಗಿ ಮಾತನಾಡುವುದನ್ನು ಕೇಳುತ್ತಿದ್ದೇವೆ. ಇಂತಹ ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತವಷ್ಟೆ. ಸ್ವಾತಂತ್ರ ನಂತರದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಬಲಗೊಳಿಸುವಲ್ಲಿ, ನೆಹರೂರವರ ಕೊಡಗೆಯನ್ನು ಯಾರು ಅಲ್ಲಗೆಳೆಯಲು ಸಾಧ್ಯವಿಲ್ಲವೆಂದು ಅವರು ಹೇಳಿದರು.

ಸ್ವಾತಂತ್ರ ನಂತರದ ಪ್ರಾರಂಭದ ಚುನಾವಣೆಯಲ್ಲಿ ಜಾತಿ, ಹಣದ ಪ್ರಾಬಲ್ಯವಿರಲಿಲ್ಲ. ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧೆ ಮಾಡಿದರೂ ಸುಲಭವಾಗಿ ಜಯಗಳಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಕೈಗೊಂಡ ಜನಪರ ಕಾರ್ಯಕ್ರಮವನ್ನು ವಿರೋಧಿಸಿ ಪಕ್ಷದ ಒಳಗಡೆಯೆ ವಿರೋಧ ವ್ಯಕ್ತವಾಗಿ, ಕೆಲವು ಮುಖಂಡರು ಪಕ್ಷದಿಂದ ಹೊರಬಂದರು. ಆ ನಂತರದ ದಿನಗಳಲ್ಲಿ ಕಾಂಗ್ರೆಸ್ ಶಕ್ತಿ ದುರ್ಬಲಗೊಳ್ಳುತ್ತಾ ಸಾಗಿತು ಎಂದು ಅವರು ಹೇಳಿದರು.

ದೇವರಾಜು ಅರಸು ಅಪ್ರತಿಮನಾಯಕ: ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ವಿರೋಧ ಪಕ್ಷಗಳ ನಾಯಕನಾಗಿದ್ದೆ. ಕೇವಲ 22ಮಂದಿ ಮಾತ್ರ ವಿರೋಧ ಪಕ್ಷದ ಸದಸ್ಯರಿದ್ದರು. ಆದರೂ, ವಿರೋಧ ಪಕ್ಷದ ಪ್ರತಿ ಪ್ರಶ್ನೆಗೂ ದೇವರಾಜು ಅರಸು ಪ್ರಾಮುಖ್ಯತೆ ಕೊಟ್ಟು, ಸಾವಧಾನವಾಗಿ ಉತ್ತರಿಸುತ್ತಿದ್ದರು. ಆ ಮೂಲಕ ಇಡೀ ಸದನವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು ಎಂದು ಅವರು ಸ್ಮರಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದು 71 ವರ್ಷ ಕಳೆದಿದ್ದರೂ ಜಾತಿಯತೆ, ಅಸ್ಪಶ್ಯತೆ ಜೀವಂತವಾಗಿದೆ. ಹಾಗೆಯೆ ದೇಶದ ಎಲ್ಲ ಜನತೆಗೂ ವಸತಿ ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ. ಇಂತಹ ಸಮಸ್ಯೆಗಳನ್ನು ನಿವಾರಿಸದ ಹೊರತು ಪ್ರಜಾಪ್ರಭುತ್ವಕ್ಕೆ ಅರ್ಥವೆ ಇಲ್ಲವೆಂದು ತಿಳಿಸಿದರು.

ನಿವೃತ್ತ ನ್ಯಾ.ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, ದೇಶದ ಸಂಸತ್ ಇಡೀ ಜನತೆಯ ಪ್ರತಿನಿಧಿಯಾಗಿದ್ದು, ಜನಪರವಾಗಿ ಯೋಜನೆಗಳ ಕುರಿತು ಚರ್ಚಿಸಿ ಮಸೂದೆಗಳನ್ನು ರೂಪಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಅನಗತ್ಯ ವಿಷಯಗಳೆ ಹೆಚ್ಚು ಚರ್ಚೆಗಳಾಗುತ್ತಿವೆ ಎಂದು ವಿಷಾದಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಮಾತನಾಡಿ, ಬ್ರಿಟಿಷ್ ಆಡಳಿತ ವ್ಯವಸ್ಥೆ ದೇಶದಲ್ಲಿ ಇಂಗ್ಲೀಷ್ ವ್ಯಾಮೋಹ ಭಿತ್ತುವ ಮೂಲಕ ನಮ್ಮ ಭಾಷೆ, ಸಂಸ್ಕೃತಿಯನ್ನು ನಾಶ ಮಾಡಲು ಹೊಂಚು ಹಾಕಿತ್ತು. ಅದರ ಪರಿಣಾಮವಾಗಿ ಸ್ವಾತಂತ್ರ ಬಂದು 7ದಶಕಗಳು ಕಳೆದಿದ್ದರೂ ಎಲ್ಲವನ್ನು ಇಂಗ್ಲೀಷ್ ಕಣ್ಣಿನಿಂದಲೆ ನೋಡುವಂತಹ ಪರಿಪಾಟ ದೂರವಾಗಿಲ್ಲ. ಈ ವ್ಯವಸ್ಥೆ ಅಮೂಲಾಗ್ರವಾಗಿ ಬದಲಾಗಿ, ಸ್ಥಳೀಯ ಭಾಷೆಗಳಲ್ಲಿ ಎಲ್ಲವು ಸಿಗುವಂತಾಗಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಕೃತಿಕಾರ ಬಿ.ಎಲ್.ಶಂಕರ್, ಪ್ರೊ.ವಲೇರಿಯನ್ ರೊಡ್ರಿಗಸ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News