ಬಿಜೆಪಿ ಮುಖಂಡರು ಹೋರಾಟವನ್ನೇ ಮರೆತಿದ್ದಾರೆ: ಯಡಿಯೂರಪ್ಪ

Update: 2018-08-12 13:19 GMT

ಬೆಂಗಳೂರು, ಆ. 12: ರಾಜ್ಯದಲ್ಲಿನ ಮೈತ್ರಿ ಸರಕಾರ ಬದುಕಿದೆಯೋ ಅಥವಾ ಇಲ್ಲವೋ ಎಂಬ ಸ್ಥಿತಿಯಲ್ಲಿದೆ. ಆದರೂ, ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಮುಖಂಡರು ಹೋರಾಟವನ್ನೆ ಮರೆತವರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ಶಂಕರಪುರದಲ್ಲಿನ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ಶಕ್ತಿ ಕೇಂದ್ರದ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಪಕ್ಷವಾಗಿ ಸರಕಾರದ ಕಿವಿ ಹಿಂಡುವ ಪ್ರಯತ್ನ ಆಗುತ್ತಿಲ್ಲ. ಬೆಂಗಳೂರು ನಗರದ ಬಿಜೆಪಿ ನಾಯಕರು ಹೋರಾಟ ಮರೆತಂತೆ ಕುಳಿತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ನೈತಿಕತೆ ಕಳೆದುಕೊಂಡಿದೆ. ಕಾಂಗ್ರೆಸ್ ಅವ್ಯವಹಾರ ಬಯಲು ಮಾಡಲು ಜೆಡಿಎಸ್ ಸಿದ್ಧವಿಲ್ಲ. ಜೆಡಿಎಸ್ ಅವ್ಯವಹಾರ ಬಯಲು ಮಾಡಲು ಕಾಂಗ್ರೆಸ್ ಸಿದ್ದವಿಲ್ಲ. ಹೀಗಾಗಿ ಹೊಂದಾಣಿಕೆ ಮೂಲಕ ಆಡಳಿತ ನಡೆಸುತ್ತಿದ್ದಾರೆ. ಈ ಎರಡೂ ಪಕ್ಷಗಳ ವಿರುದ್ಧ ಬಿಜೆಪಿ ದೊಡ್ಡಮಟ್ಟದ ಹೋರಾಟ ನಡೆಸಿದರೆ ಈ ಸರಕಾರ ಇರುವುದಿಲ್ಲ ಎಂದು ಅವರು ನುಡಿದರು.

ರಾಜ್ಯದ ಯಾವುದೋ ಒಂದು ಮೂಲೆಯಲ್ಲಿ ಪ್ರತಿಭಟನೆ ನಡೆಸುವುದಿಕ್ಕಿಂತ ಬೆಂಗಳೂರಿನಲ್ಲಿ ಹೋರಾಟ ಮಾಡುವುದು ಬಹಳ ಮುಖ್ಯ. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದರೆ ಎಲ್ಲ ಜಿಲ್ಲೆಗಳಿಗೂ ಸಂದೇಶ ನೀಡಿದಂತಾಗುತ್ತದೆ. ಹೀಗಾಗಿ ಇಲ್ಲಿನ ಬಿಜೆಪಿ ನಾಯಕರು ಹೋರಾಟಕ್ಕೆ ಮುಂದಾಗಬೇಕೆಂದು ಬಿಎಸ್‌ವೈ ಕರೆ ನೀಡಿದರು.

ಬಿಬಿಎಂಪಿ ಬಿಜೆಪಿಯ ಸದಸ್ಯರು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ. ಕಾರ್ಪೋರೇಟರ್‌ಗಳಾಗುವುದು ಕೇವಲ ಶ್ರೀಮಂತರಾಗುವುದಕ್ಕಷ್ಟೇ ಎಂಬಂತಿದೆ ಅವರ ನಡವಳಿಕೆ ಎಂದು ವಾಗ್ದಾಳಿ ನಡೆಸಿದ ಬಿಎಸ್‌ವೈ, ಬಿಬಿಎಂಪಿ ಸದಸ್ಯರ ಸಭೆ ಕರೆಯಿರಿ, ಅವರಿಗೆ ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳುವಂತೆ ಬುದ್ಧಿವಾದ ಹೇಳಬೇಕಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ರೈತನ ಗದ್ದೆಯಲ್ಲಿ ಭತ್ತದ ಪೈರು ನಾಟಿ ಮಾಡಿದ ತಕ್ಷಣ ರೈತರ ಸಮಸ್ಯೆ ಪರಿಹಾರ ಆಗುವುದಿಲ್ಲ. ರಾಜ್ಯದ 14 ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆ ಭಾಗಕ್ಕೆ ಯಾವೊಬ್ಬ ಸಚಿವರೂ ಭೇಟಿ ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿನ ಮೈತ್ರಿ ಸರಕಾರದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಈ ಸರಕಾರ ಯಾವಾಗ ಬೀಳತ್ತದೋ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಉಭಯ ಪಕ್ಷಗಳ ನಾಯಕರೇ ಬಡಿದಾಡಿ ಸರಕಾರ ಉರುಳಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

ಸಭೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ತಾರಾ, ಲೆಹರ್ ಸಿಂಗ್, ತೇಜಸ್ವಿನಿ ಗೌಡ, ಅಬ್ದುಲ್ ಅಜೀಂ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News