ಸುಸಜ್ಜಿತ ಗ್ರಂಥಾಲಯಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಲಿ: ಸಚಿವ ಎನ್.ಮಹೇಶ್

Update: 2018-08-12 13:24 GMT

ಬೆಂಗಳೂರು, ಆ.12: ರಾಜ್ಯದಲ್ಲಿರುವ ಶಾಲಾ-ಕಾಲೇಜುಗಳು ಹಾಗೂ ಸುಸಜ್ಜಿತ ಗ್ರಂಥಾಲಯಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಹಾಗೂ ದಾನಿಗಳಿಂದಲೂ ಹಣ ಸಂಗ್ರಹಿಸಿ ನೆರವಾಗಬೇಕೆಂದು ಶಾಸಕರು ಹಾಗೂ ರಾಜ್ಯದ ಸಂಸತ್ ಸದಸ್ಯರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಮನವಿ ಮಾಡಿದ್ದಾರೆ.

ರವಿವಾರ ಹಂಪಿ ನಗರದಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಗ್ರಂಥ ಪಾಲಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಪೊರೇಟ್ ಸಂಸ್ಥೆಗಳಿಂದಲೂ ಹಣದ ನೆರವು ಪಡೆಯಲು ತಾವು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದರು. ಶಾಲಾ, ಕಾಲೇಜುಗಳಲ್ಲಿ ಅಗತ್ಯ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಲ್ಲದೆ, ಗ್ರಂಥಾಲಯಗಳಿಗೂ ಅಗತ್ಯ ಸಹಾಯ ಮಾಡುವಂತೆ ಎಲ್ಲ ಶಾಸಕರು ಹಾಗೂ ಸಂಸತ್ ಸದಸ್ಯರಿಗೆ ಈಗಾಗಲೇ ಪತ್ರ ಬರೆದು ಮನವಿ ಮಾಡಿರುವುದಾಗಿ ತಿಳಿಸಿದರು. 

ನಗರದ ಶಾಲಾ, ಕಾಲೇಜುಗಳಲ್ಲಿ ಹಾಗೂ ಗ್ರಂಥಾಲಯಗಳಲ್ಲಿ ಕಲಿಕೆಯ ವಾತಾವರಣ ನಿರ್ಮಾಣವಾಗಬೇಕು. ಅದಕ್ಕಾಗಿ ಎಲ್ಲ ಅಗತ್ಯವಿರುವ ಕಡೆಗಳಿಂದ ಹಣದ ಸಹಾಯ ಪಡೆಯಲಾಗುವುದು. ರಾಜ್ಯದಲ್ಲಿ ಶಿಥಿಲವಾಗಿರುವ ಕಟ್ಟಡಗಳನ್ನು ನೆಲಸಮ ಮಾಡುವುದು, ಹೆಚ್ಚುವರಿ ಕೊಠಡಿಗಳನ್ನು ಕಟ್ಟುವುದು ಮತ್ತು ದುರಸ್ತಿಗೊಳಿಸುವುದಲ್ಲದೆ, ಕಾಂಪೌಂಡ್‌ಗಳ ನಿರ್ಮಾಣಕ್ಕಾಗಿ 4,568 ಕೋಟಿ ರೂ.ಗಳು ಬೇಕು. ಆದರೆ ಆಯವ್ಯಯದಲ್ಲಿ ಇಲಾಖೆಗೆ ಮೀಸಲಿಟ್ಟಿರುವ ಹಣ ಕೇವಲ 480 ಕೋಟಿ ರೂ.ಮಾತ್ರ ಎಂದು ಸಚಿವ ಮಹೇಶ್ ತಿಳಿಸಿದರು.

ಅಲ್ಲದೆ, 70 ಕೋಟಿ ರೂ.ವೇತನಕ್ಕಾಗಿಯೇ ಬಳಕೆಯಾಗುತ್ತಿದೆ. 6,798 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಗ್ರಂಥಾಲಯಗಳಿಗೆ ಸುಸಜ್ಜಿತ ಕಟ್ಟಡಗಳು, ಪೀಠೋಪಕರಣಗಳು, ಅಗತ್ಯ ಪುಸ್ತಕಗಳು ಇಲ್ಲ. ಗ್ರಾಪಂ ಮಟ್ಟದಲ್ಲೂ ಪ್ರತಿಷ್ಠಿತ ಕಟ್ಟಡಗಳು ನಿರ್ಮಾಣವಾಗಬೇಕಿದೆ. ಈ ವರ್ಷ ಡಿಜಿಟಲ್ ಗ್ರಂಥಾಲಯಗಳಿಗಾಗಿ 5 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಸುಮಾರು 10 ಲಕ್ಷ ಓದುಗರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಸಚಿವರ ಆದೇಶ: ಸಮಾರಂಭಕ್ಕೂ ಮುನ್ನ ಹಂಪಿನಗರದಲ್ಲಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಕೆಎಎಸ್, ಕೆಪಿಎಸ್‌ಸಿ, ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಅಗತ್ಯ ಪುಸ್ತಕಗಳಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದರು. ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವ ಮಹೇಶ್ ಅವರು, ವಿದ್ಯಾರ್ಥಿಗಳು ಪುಸ್ತಕಗಳ ಪಟ್ಟಿ ನೀಡಿದ್ದಾರೆ. ಎಲ್ಲ ಪುಸ್ತಕಗಳನ್ನು ಕೂಡಲೇ ಒದಗಿಸುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಎಸ್.ಹೊಸಮನಿ ಅವರಿಗೆ ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News