ಒಬಿಸಿ ಆಯೋಗಕ್ಕೆ ಮಾನ್ಯತೆ ಬಗ್ಗೆ ಜನ ಜಾಗೃತಿ ಮೂಡಿಸಬೇಕು: ಕೇಂದ್ರ ಸಚಿವ ಅನಂತಕುಮಾರ್

Update: 2018-08-12 13:36 GMT

ಬೆಂಗಳೂರು, ಆ. 12: ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ, ಎಸ್ಸಿ-ಎಸ್ಟಿ ವರ್ಗದ ಹಿತರಕ್ಷಣೆಯ ಮಸೂದೆಗೆ ಅಂಗಿಕಾರ ನೀಡಿರುವಂತಹ ಐತಿಹಾಸಿಕ ಸಾಮಾಜಿಕ ನ್ಯಾಯದ ಮುಂಗಾರು ಅಧಿವೇಶನದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದ್ದಾರೆ.

ರವಿವಾರ ಇಲ್ಲಿನ ಶಂಕರಪುರಂನಲ್ಲಿ ನಡೆದ ನಗರದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಈಗಾಗಲೇ ಎರಡನೆ ಬಾರಿಯ ಪರಿವರ್ತನಾ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಅವರೊಬ್ಬ ಅವಿಶ್ರಾಂತ ಚೇತನ ಎಂದು ಶ್ಲಾಘಿಸಿದರು.

ಅವಿಶ್ವಾಸ ಗೊತ್ತುವಳಿ ಎಂಬ ಬಂಡವಾಳ ಇಲ್ಲದ ಬಡಾಯಿಯನ್ನು ಪ್ರಾರಂಭಿಸಿದ ಕಾಂಗ್ರೆಸ್ಸಿಗೆ ಸರಿಯಾದ ಉತ್ತರವನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಅವಿಶ್ವಾಸ ಗೊತ್ತುವಳಿಯನ್ನು ಸೋಲಿಸುವ ಮೋದಿಯವರ ಭಾಷಣ ಇಡೀ ದೇಶದಲ್ಲಿ ವಿದ್ಯುತ್ ಸಂಚಾರವನ್ನು ಉಂಟುಮಾಡಿದೆ ಎಂದರು.

ರಾಹುಲ್ ಗಾಂಧಿ ಭಾಷಣ ಮಾಡಿದ ನಂತರ ಮೋದಿಯವರನ್ನು ತಬ್ಬಿಕೊಳ್ಳುವ ಮೂಲಕ ಸದನದ ಇತಿಹಾಸದಲ್ಲಿ ಕಂಡರಿಯದ ಘಟನೆಗೆ ಕಾರಣೀಭೂತರಾದರು. ಆ ನಂತರ ತಮ್ಮ ಸದಸ್ಯರಿಗೆ ಕಣ್ಣು ಮಿಟಕಿಸುವ ಮೂಲಕ ತಾವು ಹೇಳಿದ್ದೆಲ್ಲಾ ಸುಳ್ಳು ಎಂಬುದನ್ನು ಸಾಬೀತು ಮಾಡಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಕಣ್ಣು ಮಿಟುಕಿಸುವ ಮೂಲಕ ಸೋಲಿನ ರುಚಿಯನ್ನು ತೋರಿಸಲಿದ್ದಾರೆ ಎಂದರು.

ದೇಶದಲ್ಲಿ ಅಕ್ರಮ ವಲಸಿಗರ ಬಗ್ಗೆ ನಿಖರವಾದ ಮಾಹಿತಿ ತಿಳಿಯಲು ಅಸ್ಸಾಂ ಒಪ್ಪಂದದ ಅಂತಿಮ ಕರಡು ಪ್ರತಿಯ ವಿಷಯದ ಬಗ್ಗೆ ಕಾಂಗ್ರೆಸ್ ತನ್ನ ವ್ಯತಿರಿಕ್ತ ಧೋರಣೆಯನ್ನು ತೋರಿಸಿದೆ. ಅಸ್ಸಾಂ, ಪೂರ್ವೋತ್ತರ ಭಾರತ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ದಿಲ್ಲಿ, ಹೈದರಾಬಾದ್, ಮುಂಬೈ ಅಲ್ಲದೆ ಬೆಂಗಳೂರಿನಲ್ಲೂ ಈ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿರುವುದು ವಿಷಾದನೀಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News