ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಕೆಪಿಎಲ್ ತಂಡದ ಮಾಲಕ ವಶಕ್ಕೆ

Update: 2018-08-12 14:57 GMT

ಬೆಂಗಳೂರು, ಆ.12: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೆಪಿಎಲ್ ಕ್ರಿಕೆಟ್ ತಂಡದ ಮಾಲಕನನ್ನು ನಗರದ ಎಚ್‌ಎಎಲ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಬಳ್ಳಾರಿ ಟಸ್ಕರ್ಸ್ ತಂಡದ ಮಾಲಕ ಅರವಿಂದ್ ರೆಡ್ಡಿ ಎಂಬಾವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಶನಿವಾರ ಸಂಜೆ ಬಳ್ಳಾರಿ ಟಸ್ಕರ್ಸ್ ತಂಡದಿಂದ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಈಜೋನ್ ಕ್ಲಬ್‌ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಈ ಸಮಯದಲ್ಲಿ ರಾತ್ರಿ 10 ಗಂಟೆಯ ನಂತರವೂ ಸಂಗೀತ ಹಾಗೂ ಧ್ವನಿವರ್ಧಕ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರು ದೂರು ನೀಡಿದ್ದರು.
ತಡರಾತ್ರಿ 1 ಗಂಟೆವರೆಗೂ ಕಾರ್ಯಕ್ರಮ ನಡೆಸಲಾಗಿತ್ತು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಎಚ್‌ಎಎಲ್ ಪೊಲೀಸರು ನಿಯಮ ಉಲ್ಲಂಘಿಸಿದ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಬಳ್ಳಾರಿ ಟಸ್ಕರ್ಸ್ ತಂಡದ ಮಾಲಕ ಅರವಿಂದ್ ರೆಡ್ಡಿ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಎಚ್‌ಎಎಲ್ ಠಾಣಾ ಪೊಲೀಸರು, ಅರವಿಂದ್ ರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News