ಜನವರಿಯಲ್ಲಿ ‘ಚಂದ್ರಯಾನ-2’ ಉಡಾವಣೆ: ಇಸ್ರೊ ಅಧ್ಯಕ್ಷ ಕೆ.ಶಿವನ್

Update: 2018-08-12 15:42 GMT

ಬೆಂಗಳೂರು, ಆ.12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷೆಯ ಯೋಜನೆ ’ಚಂದ್ರಯಾನ- 2’ ಉಪಗ್ರಹ 2019ರ ಜ.3ಕ್ಕೆ ಉಡಾವಣೆ ಮಾಡಲಾಗುವುದು ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ತಿಳಿಸಿದರು.

ರವಿವಾರ ಸಾರಾಭಾಯಿ ಜನ್ಮ ಶತಮಾನೋತ್ಸವದ ಅಂಗವಾಗಿ ಇಸ್ರೋ ಕೇಂದ್ರ ಕಚೇರಿಯಲ್ಲಿ ವಿಕ್ರಮ್ ಸಾರಾಭಾಯಿ ಪುತ್ಥಳಿ ಅನಾವರಣ ಮಾಡಿದ ಅವರು, ಚಂದ್ರನ ಅಂಗಳದಲ್ಲಿ ಇಳಿಯುವ ಲ್ಯಾಂಡರ್‌ನಲ್ಲಿದ್ದ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದ್ದು, ಲ್ಯಾಂಡಿಂಗ್ ಸಂಬಂಧಿಸಿದಂತೆ ಯೋಜನೆಯನ್ನು ಸಂಪೂರ್ಣ ಮರುರೂಪಿಸಲಾಗಿದೆ. ಲ್ಯಾಂಡರ್ ಮರು ವಿನ್ಯಾಸಗೊಳಿಸಲಾಗಿದೆ. ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿದ 35ನೆ ದಿನಕ್ಕೆ ಚಂದ್ರನ ಅಂಗಳಕ್ಕೆ ಇಳಿಯಲಿದೆ ಎಂದು ವಿವರಿಸಿದರು.

3 ವರ್ಷದಲ್ಲಿ 50 ನೌಕೆ ಉಡಾವಣೆ: ಇಸ್ರೊ 2018 ಸೇರಿ ಮೂರು ವರ್ಷದಲ್ಲಿ 50 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಿದೆ. ಅದರಲ್ಲಿ ಆದಿತ್ಯ1 ಎಲ್ ಕೂಡ ಸೇರಿದೆ. ಈ ವರ್ಷ 9 ವ್ಯೋಮನೌಕೆ, 2019ರಲ್ಲಿ 22 ಮತ್ತು 2020ರಲ್ಲಿ 19ನೌಕೆ ಉಡಾವಣೆ ಆಗಲಿವೆ. 2019ರಿಂದ ಪ್ರತಿ ತಿಂಗಳಿಗೆ ಎರಡು ನೌಕೆಗಳ ಉಡಾವಣೆ ಆಗಲಿವೆ ಎಂದು ಮಾಹಿತಿ ನೀಡಿದರು.

ಇಸ್ರೋದಲ್ಲಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವ ನಿರ್ಧಾರ ಮಾಡಲಾಗಿದ್ದು, ಪ್ರಧಾನಿ ಮೋದಿಯಿಂದ ಹಸಿರು ನಿಶಾನೆ ಸಿಕ್ಕಿದೆ. ಹಾಗಾಗಿ ದೇಶಾದ್ಯಂತ ವಿದ್ಯಾರ್ಥಿಗಳಿಗೆ 25-30 ದಿನ ಲ್ಯಾಬ್, ಬಾಹ್ಯಾಕಾಶದ ಬಗ್ಗೆ ತರಬೇತಿ ನೀಡಲಾಗುವುದು ಹಾಗೂ ಇಸ್ರೋದಿಂದ ಶೀಘ್ರದಲ್ಲೇ ಟಿವಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಇಸ್ರೋ ಜಗತ್ತಿನ ಪ್ರಸಿದ್ಧ ಸಂಸ್ಥೆಗಳಲ್ಲಿ ಒಂದಾಗಿದೆ. ಆದರೆ, ನಮ್ಮ ಹಳ್ಳಿ ಜನತೆಗೆ ಈ ಬಗ್ಗೆ ಮಾಹಿತಿಯೆ ಇಲ್ಲ. ಹೀಗಾಗಿ ಇಸ್ರೋ ಮೂಲಕವೆ ಟಿವಿ ಆರಂಭಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯವೈಖರಿಯ ಕುರಿತು ಮಾಹಿತಿ ನೀಡಲಾಗುವುದು. ಈ ವರ್ಷಾಂತ್ಯಕ್ಕೆ ಇಸ್ರೋ ಟಿವಿ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು. ಈ ವೇಳೆ ಮಾಜಿ ಅಧ್ಯಕ್ಷರಾದ ಕಸ್ತೂರಿ ರಂಗನ್ ಮತ್ತು ಕಿರಣ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News