ಕೇರಳ, ತಮಿಳುನಾಡಿನವರಂತೆ ಓದುವ ಸದಾಭಿರುಚಿ ನಮ್ಮಲ್ಲಿಯೂ ಬರಬೇಕು: ಗಂಗಾವತಿ ಪ್ರಾಣೇಶ್

Update: 2018-08-12 15:54 GMT

ಬೆಂಗಳೂರು, ಆ.12: ಕೇರಳ ಮತ್ತು ತಮಿಳುನಾಡಿನ ಜನರಲ್ಲಿರುವ ಓದುವ ಸದಾಭಿರುಚಿ ನಮ್ಮಲ್ಲಿಯೂ ಮೂಡಿಬರಬೇಕು ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅಭಿಪ್ರಾಯಪಟ್ಟರು.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ರಚಿಸಿರುವ ‘ನಕ್ಕಾಂವ ಗೆದ್ದಾಂವ’ ಲೇಖನಗಳ ಸಂಕಲನ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕನ್ನಡ ಪುಸ್ತಕಗಳನ್ನು ಪ್ರತಿಯೊಬ್ಬ ಕನ್ನಡಿಗರು ಓದಬೇಕು. ನಮ್ಮಲ್ಲಿ ಬರಹವನ್ನೇ ನಂಬಿಕೊಂಡಿರುವವರು ಇದ್ದಾರೆ. ಇಂಹತವರನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಅಲ್ಲದೆ,ನಾನು ಬರಹಗಾರ, ಭಾಷಣಕಾರ ಆಗಬೇಕೆಂದು ಎಂದು ಅಂದುಕೊಂಡವನಲ್ಲ. ಹೊಟ್ಟೆಪಾಡಿಗೆ ಬಂದವನು. ಹೊಟ್ಟೆಪಾಡು ಮಾತನಾಡುವಂತೆ ಮಾಡಿತು ಎಂದು ಮಾರ್ಮಿಕವಾಗಿ ನುಡಿದರು.

ಬರಹಗಾರ ಜೋಗಿ ಮಾತನಾಡಿ, ಲೇಖಕನಿಗೆ ಬರೆಯುವಾಗ ಇರುವಷ್ಟೇ ಖುಷಿ ಕೃತಿ ಮುದ್ರಿಸುವಾಗಲೂ ಇರುತ್ತೆ. ಕೃತಿಯನ್ನು ಅಚ್ಚುಕಟ್ಟಾಗಿ ಮುದ್ರಿಸಿರುವ ಪ್ರಕಾಶಕ ಜಮೀಲ್ ಅವರು ತಮಿಳುಗರಾದರೂ ಕನ್ನಡದ ಮೇಲಿಟ್ಟಿರುವ ಪ್ರೀತಿ ಅನುಕರಣೀಯ ಎಂದು ಹೇಳಿದರು.

ಜೀವನದಲ್ಲಾಗಿರುವ ಯಡವಟ್ಟುಗಳಿಗೆ ರಿಫೇರಿ ಮಾಡಲು ಗಂಗಾವತಿ ಪ್ರಾಣೇಶ್ ಒಳ್ಳೆ ಡಾಕ್ಟರ್. ದೇಹಕ್ಕೆ ಎಲ್ಲಿಯೂ ಚುಚ್ಚು ಮದ್ದು ಚುಚ್ಚದೇ ಸಿಹಿಗುಳಿಗಳನ್ನು ನೀಡುವ ಮೂಲಕ ಸದಾ ನಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಚಿತ್ರನಟ ಪ್ರೇಮ್ ಮಾತನಾಡಿ, ದಿನ ನಿತ್ಯದ ಜಂಜಾಟದಲ್ಲಿ ಕಳೆದುಕೊಂಡಿರುವ ಹುರುಪನ್ನು ಮರಳಿ ಪಡೆಯಬೇಕಾದರೆ ಗಂಗಾವತಿ ಪ್ರಾಣೇಶ್ ಅವರ ಹಾಸ್ಯ ಕೇಳಬೇಕು. ಹಾಸ್ಯದ ಮೂಲಕ ಸಮಾಜಕ್ಕೆ ಗುಣಾತ್ಮಕ ಸಂದೇಶ ನೀಡುತ್ತಿದ್ದಾರೆ. ಹಾಸ್ಯ ಕಾರ್ಯಕ್ರಮಗಳಿಂದ ಸಂಗ್ರಹವಾಗುವ ದೇಣಿಗೆಯನ್ನು ಸಮಾಜಮುಖಿ ಕೆಲಸಗಳಿಗೆ ವಿನಿಯೋಗಿಸುತ್ತಿರುವ ಇವರ ಗುಣ ಎಲ್ಲರಿಗೂ ಆದರ್ಶ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್, ಪ್ರಕಾಶಕ ಜಮೀಲ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News