×
Ad

ಹುತ್ತಕ್ಕೆ ಹಾಲೆರೆಯುವ ಬದಲು ಅನಾಥ ಮಕ್ಕಳಿಗೆ ಹಾಲು ವಿತರಿಸಿ: ನಾಗರಪಂಚಮಿ ಬದಲಿಗೆ ಬಸವಪಂಚಮಿ ಅಭಿಯಾನ

Update: 2018-08-12 21:28 IST

ಬೆಂಗಳೂರು, ಆ.12: ನಾಗರ ಪಂಚಮಿ ಹೆಸರಿನಲ್ಲಿ ಹುತ್ತಕ್ಕೆ ಹಾಲೆರೆಯುವ ಬದಲು ಅನಾಥ ಮಕ್ಕಳಿಗೆ ಹಾಲು ವಿತರಿಸಿ ಎಂಬ ಬಸವ ಪಂಚಮಿ ಅಭಿಯಾನವನ್ನು ಮಾನವ ಬಂಧುತ್ವ ವೇದಿಕೆ ಇಂದಿನಿಂದ ಆಯೋಜಿಸಿದೆ.

ರವಿವಾರ ಮಾನವ ಬಂಧುತ್ವ ವೇದಿಕೆಯ ನಗರದ ವಲ್ಲಭ ನೀಡಂ ಆನಾಥಾಲಯದಲ್ಲಿ ನಾಗರ ಪಂಚಮಿ ಬದಲಾಗಿ ಬಸವ ಪಂಚಮಿ ಆಚರಿಸುವ ಮೂಲಕ ಅನಾಥ ಮಕ್ಕಳಿಗೆ ಕುಡಿಯಲು ಹಾಲನ್ನು ನೀಡಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕ್ರಾಂತಿಜ್ಯೋತಿ ಬಸವಣ್ಣನವರ ಲಿಂಗೈಕ್ಯರಾದ ದಿನವೇ ಹುತ್ತಕ್ಕೆ ಹಾಲು ಸುರಿಯುವುದರ ಹಿಂದೆ ಮನುವಾದಿಗಳ ಕುತಂತ್ರವಿದೆ. ನಾಗರ ಪಂಚಮಿ ಹೆಸರಲ್ಲಿ ರಾಜ್ಯವ್ಯಾಪಿ ಲಕ್ಷಾಂತರ ಲೀಟರ್ ಹಾಲನ್ನು ಪೋಲು ಮಾಡಲಾಗುತ್ತಿದೆ. ಪೌಷ್ಟಿಕ ಆಹಾರವನ್ನು ಮೌಡ್ಯದ ಹೆಸರಲ್ಲಿ ಚೆಲ್ಲುತ್ತಿರುವ ದೇಶ ನಮ್ಮದೆನ್ನುವುದು ಅವಮಾನದ ಸಂಗತಿ ಎಂದು ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಅನಂತ ನಾಯಕ್ ತಿಳಿಸಿದರು.

ಹಾವುಗಳು ಹಾಲು ಕುಡಿಯುವುದಿಲ್ಲ ಎಂಬ ಸತ್ಯದ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ನಲವತ್ತು ಲಕ್ಷಕ್ಕೂ ಹೆಚ್ಚು ಅಪೌಷ್ಟಿಕ ಮಕ್ಕಳಿದ್ದಾರೆ. ಲಕ್ಷಾಂತರ ವೃದ್ಧರು ಅಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಮಾನವ ಬಂಧುತ್ವ ವೇದಿಕೆಯು ಕಳೆದ ವರ್ಷ ಎರಡು ಸಾವಿರ ಕೇಂದ್ರ ಗಳಲ್ಲಿ ಬಸವ ಪಂಚಮಿ ಆಚರಿಸುವ ಮೂಲಕ ಮಕ್ಕಳಿಗೆ, ವೃದ್ಧರಿಗೆ ಹಾಲು ವಿತರಿಸಿ ಜಾಗೃತಿ ಮೂಡಿಸಲಾಯಿತು. ಈ ಬಾರಿ ಕನಿಷ್ಠ ಮೂರು ಸಾವಿರ ಕೇಂದ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಸೇರಿದಂತೆ ನಾಡಿನ ಪ್ರಗತಿಪರ ಸ್ವಾಮೀಜಿಗಳು, ಚಿಂತಕರು, ಹೋರಾಟಗಾರರು ರಾಜ್ಯವ್ಯಾಪಿ ನಡೆಯುವ ಬಸವ ಪಂಚಮಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಈ ವೇಳೆ ವೇದಿಕೆಯ ಎನ್.ಜಯಕುಮಾರ್, ಜಿಲ್ಲಾ ಸಂಚಾಲಕ ಕನಕಚಲ, ನಾರಾಯಣ ಸ್ವಾಮಿ, ಟಿಪ್ಪು ಹುಲಿಹೈದರ್, ನಾಗರಾಜ್ ಮೂಡನಹಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News