ಸೆಕ್ಸ್‌ಗೆ ಅಪ್ರಾಪ್ತೆ 'ಒಪ್ಪಿಗೆ' ನೀಡಿದರೂ ಸಮ್ಮತಿ ಅಲ್ಲ: ಮಧ್ಯಪ್ರದೇಶ ಹೈಕೋರ್ಟ್

Update: 2018-08-13 06:24 GMT

ಭೋಪಾಲ್, ಆ. 13: ಅಪ್ರಾಪ್ತ ವಯಸ್ಸಿನ ಬಾಲಕಿಯರು ಲೈಂಗಿಕ ಚಟುವಟಿಕೆಗೆ ಒಪ್ಪಿಗೆ ನೀಡಿದರೂ, ಇದನ್ನು ಸಮ್ಮತಿ ಎಂದು ಪರಿಗಣಿಸುವಂತಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. 

ಬಾಲಕಿಯೊಬ್ಬಳ ಅತ್ಯಾಚಾರ ಪ್ರಕರಣದಲ್ಲಿ 'ಸಮ್ಮತಿಯ ಸೆಕ್ಸ್' ಎಂಬ ಆಧಾರದಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಿದ ಸಿಯೋನಿ ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್ ತಳ್ಳಿಹಾಕಿದೆ.

ಸಿಯೋನಿ ಜಿಲ್ಲೆಯ ವಿಶೇಷ ನ್ಯಾಯಾಧೀಶ 2016 ಏಪ್ರಿಲ್ 16ರಂದು ತೀರ್ಪು ನೀಡಿ, ಸೂರಜ್ ಪ್ರಸಾದ್ ದೆಹಾರಿಯಾ ಎಂಬ ಆರೋಪಿಯನ್ನು ಅತ್ಯಾಚಾರ ಪ್ರಕರಣ ಮತ್ತು ಪೋಕ್ಸೊ ಕಾಯ್ದೆಯಡಿ ಆರೋಪ ಮುಕ್ತಗೊಳಿಸಿದ್ದರು.

ವೈದ್ಯಕೀಯ ವರದಿ ಆಧಾರದಲ್ಲಿ ಸೆಷನ್ಸ್ ಕೋರ್ಟ್ ತೀರ್ಪು ನೀಡಿ, ಸಂತ್ರಸ್ತೆಯ ಗುಪ್ತಾಂಗದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ ಮತ್ತು ಅತ್ಯಾಚಾರ ನಡೆದಿದೆ ಎಂಬ ಅವಧಿಯಲ್ಲಿ ಸಂತ್ರಸ್ತೆ ಕೂಗಿಕೊಂಡಿಲ್ಲ. ಇದರಿಂದ ಇದನ್ನು ಸಮ್ಮತಿಯ ಸೆಕ್ಸ್ ಎಂದು ಪರಿಗಣಿಸಬೇಕಾಗುತ್ತದೆ ಎಂದಿತ್ತು.

ರಾಜ್ಯ ಸರ್ಕಾರ ಈ ಬಗ್ಗೆ ಸಲ್ಲಿಸಿದ ಮೇಲ್ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಮಂತ್ ಗುಪ್ತ ಮತ್ತು ನ್ಯಾಯಮೂರ್ತಿ ವಿ.ಕೆ.ಶುಕ್ಲ ಅವರಿದ್ದ ವಿಭಾಗೀಯ ಪೀಠ ಈ ತೀರ್ಪನ್ನು ತಳ್ಳಿಹಾಕಿದೆ.

ಶಾಲಾ ದಾಖಲಾತಿ ವರದಿ ಮತ್ತು ರೇಡಿಯಾಲಜಿ ವರದಿಯ ಪ್ರಕಾರ ಬಾಲಕಿ 14 ವರ್ಷಕ್ಕಿಂತ ಕೆಳಗಿನವಳು. ಆಕೆ ಒಂದು ವೇಳೆ ಒಪ್ಪಿಗೆ ನೀಡಿದ್ದರೂ, ಅದನ್ನು ಸಮ್ಮತಿ ಎಂದು ಪರಿಗಣಿಸುವಂತಿಲ್ಲ. ಆದ್ದರಿಂದ ಭಾರತೀಯ ದಂಡಸಂಹಿತೆಯ ಸೆಕ್ಷನ್ 376ರ ಅನ್ವಯ ಇದು ಅಪರಾಧ ಎಂದು ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News