ಮಂಗಳೂರು ಪಾಸ್‌ಪೋರ್ಟ್ ಸೇವಾ ಕೇಂದ್ರ: ಸಿಬ್ಬಂದಿಯ ತರಾತುರಿ-ಗ್ರಾಹಕರು ತಬ್ಬಿಬ್ಬು

Update: 2018-08-13 08:05 GMT

ಮಂಗಳೂರು, ಆ.12: ಭಾರತ ಸರಕಾರದ ವಿದೇಶಾಂಗ ಸಚಿವಾಲಯದ ಅೀನದಲ್ಲಿರುವ ಮಂಗಳೂರು ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಸಿಬ್ಬಂದಿ ವರ್ಗವು ತೋರುತ್ತಿರುವ ತರಾತುರಿಯಿಂದ ಗ್ರಾಹಕರು ತಬ್ಬಿಬ್ಬಾಗುತ್ತಿರುವ ವಿದ್ಯಮಾನ ಬೆಳಕಿಗೆ ಬರುತ್ತಿವೆ. ಈ ಮಧ್ಯೆ ಪಾಸ್‌ಪೋರ್ಟ್ ಲಗತ್ತಿಸುವ 'ಕವರ್ ಬ್ಯಾಗ್' ಪಡೆಯುವಂತೆ ಸಿಬ್ಬಂದಿ ವರ್ಗವು ಒತ್ತಡ ಹೇರಿ ಗ್ರಾಹಕರಿಗೆ ಇರಿಸುಮುರಿಸು ಉಂಟು ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ದಿನನಿತ್ಯ ಇಂತಹ ಘಟನೆ ನಡೆಯುತ್ತಿದ್ದರೂ ಈ ಬಗ್ಗೆ ಜನಸಾಮಾನ್ಯರು ದನಿ ಎತ್ತುವ ಧೈರ್ಯ ತೋರದಿರುವುದು ವಿಪರ್ಯಾಸ.

ಸಾಮಾನ್ಯವಾಗಿ ಜನರು ಏಜೆಂಟರ ಮೂಲಕವೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಾರೆ. ಪಾಸ್‌ಪೋರ್ಟ್‌ಗೆ 1,500ರೂ. ಶುಲ್ಕ ಪಾವತಿಸಬೇಕಾಗಿದ್ದರೂ ಏಜೆಂಟರು ಅರ್ಜಿದಾರರಿಂದ 2,000 2,500, 3,000 ಹೀಗೆ ಒಂದೊಂದು ರೀತಿಯ ಹಣ ವಸೂಲಿ ಮಾಡುತ್ತಾರೆ. ಆನ್‌ಲೈನ್ ಬಗ್ಗೆ ಮಾಹಿತಿ ಇಲ್ಲದ ಗ್ರಾಹಕರು ಏಜೆಂಟರು ಕೇಳಿದಷ್ಟು ಹಣವನ್ನು ತೆತ್ತು, ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಚೆಯೇ ಸೇವಾ ಕೇಂದ್ರದೊಳಗೆ ಪ್ರವೇಶಿಸಿದೊಡನೆಯೇ ಸಿಬ್ಬಂದಿ ವರ್ಗದ ತರಾತುರಿ ಶುರುವಾಗುತ್ತದೆ ಎಂದು ಗ್ರಾಹಕರು ಆರೋಪಿಸುತ್ತಾರೆ.

ಮೊದಲ ಬಾರಿಗೆ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ ಗ್ರಾಹಕರಿಗೆ ಮೊದಲು ಎಲ್ಲಿಗೆ ಹೋಗಬೇಕು, ಯಾರನ್ನು ಭೇಟಿ ಮಾಡಬೇಕು, ಯಾವ ಮೇಜಿನ ಮುಂದೆ ಹೋಗಿ ನಿಲ್ಲಬೇಕು ಎಂದು ತಿಳಿಯುವುದಿಲ್ಲ. ಅಲ್ಲದೆ, ಹೆಸರು ಅಥವಾ ಊರನ್ನು ಕೂಗಿ ಕರೆಯುವ ಬದಲು ಟೋಕನ್ ಸಂಖ್ಯೆಯನ್ನು ಹೇಳುವ ಕಾರಣ ಯಾರನ್ನು ಕರೆಯಲಾಗುತ್ತದೆ, ಯಾರು, ಯಾರ ಬಳಿ ಹೋಗಬೇಕು ಎಂದು ತಿಳಿಯದೆ ಗೊಂದಲ ಸೃಷ್ಟಿಯಾಗುತ್ತದೆ. ಅನಕ್ಷರಸ್ಥರು, ಮಹಿಳೆಯರು, ಹಿರಿಯ ನಾಗರಿಕರಂತೂ ಸಹಾಯಕರ ನೆರವಿಲ್ಲದೆ ಈ ಕೇಂದ್ರದಲ್ಲಿ ವ್ಯವಹರಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ಸಿಬ್ಬಂದಿ ವರ್ಗವು ಕ್ಷಣಕ್ಷಣಕ್ಕೂ ತರಾತುರಿ ತೋರುತ್ತಾರೆ. ಕಂಪ್ಯೂಟರ್‌ನಲ್ಲಿ ದಾಖಲಿಸಿದ್ದನ್ನೂ ಸಮರ್ಪಕವಾಗಿ ನೋಡಿ ತಪ್ಪುಗಳನ್ನು ಹುಡುಕುವ ಸಮಯವಕಾಶವನ್ನೂ ಸಿಬ್ಬಂದಿ ವರ್ಗ ನೀಡುತ್ತಿಲ್ಲ. ಫೋಟೊ ಚೆನ್ನಾಗಿ ಬಂದಿದೆಯೋ ಇಲ್ಲವೋ ಎಂದು ತಿಳಿಯುವ ಅಥವಾ ಚೆನ್ನಾಗಿಲ್ಲದಿದ್ದರೆ ಮತ್ತೊಮ್ಮೆ ೆಟೊ ತೆಗಿಸುವ ಅವಕಾಶವನ್ನೂ ನೀಡುತ್ತಿಲ್ಲ ಎಂದು ಗ್ರಾಹಕರು ಆರೋಪಿಸುತ್ತಾರೆ.

ಕವರ್ ಬ್ಯಾಗ್ ಪಡೆಯಲು ಒತ್ತಡ

ಈ ಮಧ್ಯೆ ಪಾಸ್‌ಪೋರ್ಟ್ ಲಗತ್ತಿಸಲು 'ಕವರ್ ಬ್ಯಾಗ್' ಪಡೆಯುವಂತೆ ಸಿಬ್ಬಂದಿ ವರ್ಗವು ಒತ್ತಡ ಹಾಕುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ. ಒಂದು ಚಾರ್ಟನ್ನು ತೋರಿಸಿ 350 ರೂ. ಅಥವಾ 400ರೂ. ಪಾವತಿಸಿ ಎನ್ನುತ್ತಾರೆ. ಯಾಕೆ ಎಂದು ಕೇಳಿದರೆ ಸಮರ್ಪಕ ಉತ್ತರ ನೀಡದೆ, ನೀಡಿದರೂ ಉಪಪ್ರಶ್ನೆ ಕೇಳಲು ಅವಕಾಶ ನೀಡದೆ ತರಾತುರಿ ಮಾಡುತ್ತಾರೆ. ನಾವು ಹಣವನ್ನು ಏಜೆಂಟರ ಬಳಿ ಕೊಟ್ಟಿದ್ದೇವೆ ಎಂದರೂ ಇಲ್ಲಿ 50ರೂ. ಮೊಬೈಲ್ ಮೆಸೇಜ್ ಚಾರ್ಜ್ ಅಲ್ಲದೆ, 350 ಅಥವಾ 400ರೂ. ಪಾವತಿಸಿ ಎನ್ನುತ್ತಾರೆ. ಹಣ ಕೊಡಲು ವಿಳಂಬಿಸಿದರೆ ಎಲ್ಲಿ ತನ್ನ ಅರ್ಜಿಯನ್ನು ಈ ಸಿಬ್ಬಂದಿಯು ವಿವಿಧ ನೆಪವೊಡ್ಡಿ ತಿರಸ್ಕರಿಸುತ್ತಾರೋ ಎಂಬ ಭಯದಿಂದ ಅಮಾಯಕರು ಏಜೆಂಟರಿಂದ ಏನೋ ಎಡವಟ್ಟು ಆಗಿರಬೇಕು ಎಂದು ಭಾವಿಸಿ ಹಣ ತೆತ್ತು ಬಿಡುತ್ತಾರೆ. ಹೆಚ್ಚಿನವರಿಗೆ ಈ ಹಣವನ್ನು ಯಾಕಾಗಿ ತೆರಲಾಗುತ್ತಿದೆ ಎಂಬುದರ ಬಗ್ಗೆಯೂ ಸ್ಪಷ್ಟ ಮಾಹಿತಿ ಇರುವುದಿಲ್ಲ. ಅಲ್ಲದೆ, ಆ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡುವ ವ್ಯವಧಾನವನ್ನೂ ಸಿಬ್ಬಂದಿ ವರ್ಗ ತೋರುತ್ತಿಲ್ಲ. ಅಲ್ಲದೆ 'ಕವರ್ ಬ್ಯಾಗ್' ಬೇಕು ಅಥವಾ ಬೇಡ ಎಂಬುದರ ಆಯ್ಕೆ ಮಾಡುವ ಸ್ವಾತಂತ್ರವನ್ನೂ ಸಿಬ್ಬಂದಿ ವರ್ಗ ನೀಡುತ್ತಿಲ್ಲ. ಬದಲಾಗಿ ಅಪೂರ್ಣ ಮಾಹಿತಿಯೊಂದಿಗೆ ಹಗಲು ದರೋಡೆ ಮಾಡುತ್ತಾರೆ ಎಂದು ಗ್ರಾಹಕರು ಆರೋಪಿಸುತ್ತಾರೆ.

ಮಂಗಳೂರು ನಗರವಲ್ಲದೆ ದ.ಕ.ಜಿಲ್ಲೆಯ ಗ್ರಾಮಾಂತರ ಪ್ರದೇಶದ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಸ್‌ಪೋರ್ಟ್ ಮಾಡಿಸಲು ಈ ಸೇವಾ ಕೇಂದ್ರಕ್ಕೆ ಬರುತ್ತಿದ್ದು, ಅಕಾರಿ-ಸಿಬ್ಬಂದಿ ವರ್ಗದ ಮುನಿಸಿಗೆ ಸಿಲುಕಿ ಬರಿಗೈಯಲ್ಲಿ ಮರಳುವ ಬದಲು 'ಕವರ್ ಬ್ಯಾಗ್' ಬಗ್ಗೆ ಏನೇನೂ ಮಾಹಿತಿ ಇಲ್ಲದೆ ಹಣ ತೆತ್ತು ಮರಳುವುದು ಸಾಮಾನ್ಯವಾಗಿದೆ. ಮೂಲವೊಂದರ ಪ್ರಕಾರ ಈ 'ಕವರ್ ಬ್ಯಾಗ್'ಗಾಗಿ ಪಡೆದ ಶುಲ್ಕದಲ್ಲಿ ಸಿಬ್ಬಂದಿ ವರ್ಗಕ್ಕೆ ಕಮಿಷನ್ ಇದೆ ಎನ್ನಲಾಗುತ್ತಿದ್ದು, ಅದಕ್ಕಾಗಿಯೇ ಸಿಬ್ಬಂದಿ ವರ್ಗವು ಸೂಕ್ತ ಮಾಹಿತಿ ನೀಡದೆ 'ಕವರ್ ಬ್ಯಾಗ್' ಪಡೆಯಲು ಒತ್ತಡ ಹೇರುತ್ತಿವೆ ಎಂದು ಗ್ರಾಹಕರು ಆರೋಪಿಸುತ್ತಾರೆ.

ಇಕ್ಕಟ್ಟಾದ ಬ್ಲಾಕ್

ಇನ್ನು ಸೇವಾ ಕೇಂದ್ರದೊಳಗಿನ ಎ,ಬಿ,ಸಿ ಬ್ಲಾಕ್ ತೀರಾ ಇಕ್ಕಟ್ಟಾಗಿದ್ದು ಗ್ರಾಹಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಯೂ ಇಲ್ಲ. ಅದರಲ್ಲೂ ಹಿರಿಯ ನಾಗರಿಕರು ತಮ್ಮ ಟೋಕನ್ ಸಂಖ್ಯೆಯನ್ನು ಹೇಳಿದಾಗ ಯಾವ ಬ್ಲಾಕ್‌ಗೆ ಹೋಗಬೇಕು ಎಂದು ತಿಳಿಯದೆ ತಡಕಾಡುವುದು ಸಾಮಾನ್ಯವಾಗಿದೆ. ಕ್ಷಣಾರ್ಧ ತಡವಾದರೆ ಟೋಕನ್ ಸಂಖ್ಯೆಯೂ ಬದಲಾಗುತ್ತಿದ್ದು, ಮತ್ತೆ ತನ್ನ ಸರದಿ ಬರುವುದಕ್ಕಾಗಿ ಅರ್ಧ ಗಂಟೆ ಕಾಯುವುದು ಅನಿವಾರ್ಯವಾಗಿದೆ. ಹಾಗಾಗಿ ಎದ್ದೆನೋ ಬಿದ್ದೆನೋ ಎಂಬಂತೆ ಹಿರಿಯ ನಾಗರಿಕರು, ಮಹಿಳೆಯರ ಸಹಿತ ಗ್ರಾಹಕರು ಎ,ಬಿ,ಸಿ ಬ್ಲಾಕ್ ಮಧ್ಯೆ ಓಡಿ ಹೋಗುವ ದೃಶ್ಯ ಕಾಣಬಹುದಾಗಿದೆ.

ರಸ್ತೆಯಲ್ಲೇ ನಿಲ್ಲಬೇಕಾದ ಸ್ಥಿತಿ

 ಪಾಸ್‌ಪೋರ್ಟ್ ಸೇವಾ ಕೇಂದ್ರದ ಪ್ರವೇಶ ದ್ವಾರದ ಬಳಿ ಅರ್ಜಿದಾರರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಸೇವಾ ಕೇಂದ್ರದ ಕಟ್ಟಡದಲ್ಲಿ ರ್ನಿಚರ್ ಶಾಪ್‌ವೊಂದಿದ್ದು, ಅದರ ಬಗ್ಗೆ ಮಾಹಿತಿ ಇಲ್ಲದ ಗ್ರಾಹಕರು ಅಲ್ಲೇ ಕೂರುವುದು ಸಹಜವಾಗಿದೆ. ಹೀಗೆ ಕೂರುವುದರಿಂದ ತಮ್ಮ ವ್ಯಾಪಾರಕ್ಕೆ ಅಡ್ಡಿಯಾಗಲಿದೆ ಎನ್ನುತ್ತಾ ರ್ನಿಚರ್ ಶಾಪ್‌ನವರು ಪಾಸ್‌ಪೋರ್ಟ್ ಗ್ರಾಹಕರನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಾರೆ. ಇದರ ಬಗ್ಗೆ ಮಾಹಿತಿ ಇಲ್ಲದ ಆಗಷ್ಟೇ ಬಂದ ಗ್ರಾಹಕರು ಅಲ್ಲಿ ಕೂರುವುದು ಮತ್ತು ಅವರನ್ನು ರ್ನಿಚರ್ ಶಾಪ್‌ನ ಮಾಲಕ/ಸಿಬ್ಬಂದಿ ವರ್ಗವು ಎಬ್ಬಿಸುವುದು ಸಾಮಾನ್ಯವಾಗಿದೆ. ಹೀಗೆ ಅರ್ಜಿದಾರರನ್ನು ಎಬ್ಬಿಸಿ ರೋಸಿಹೋದ ರ್ನಿಚರ್ ಶಾಪ್‌ನವರು ಇದೀಗ ತಮ್ಮ ಶಾಪ್‌ನ ಮುಂದೆ 'ಇಲ್ಲಿ ಯಾರೂ ಕುಳಿತುಕೊಳ್ಳಬಾರದು' ಎಂದು ಬೋರ್ಡ್ ಹಾಕಿದ್ದಾರೆ. ಆದರೂ, ಕುಳಿತುಕೊಳ್ಳುವವರಿಗೆ ಕೊರತೆ ಇಲ್ಲ. ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಸಂಬಂಸಿದ ಅಕಾರಿಗಳು ಗ್ರಾಹಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರೆ ಈ ಸಮಸ್ಯೆಗೆ ಕಡಿವಾಣ ಹಾಕಬಹುದಾಗಿದೆ.

ಪ್ರತಿಭಟನೆ ನಡೆದಿತ್ತು

ಪಾಸ್‌ಪೋರ್ಟ್ ಸೇವಾ ಕೇಂದ್ರದ ಅವ್ಯವಸ್ಥೆ, ಅಕಾರಿ-ಸಿಬ್ಬಂದಿ ವರ್ಗದ ದರ್ಪತನ ಇತ್ಯಾದಿಯ ವಿರುದ್ಧ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿತ್ತು. ಜನಪ್ರತಿನಿಗಳು ಕೂಡ ಸಾರ್ವಜನಿಕರ ದೂರಿನ ಮೇರೆಗೆ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಪ್ರಯೋಜನ ಮಾತ್ರ ಶೂನ್ಯವಾಗಿದೆ.

ಒತ್ತಡ ಹಾಕಿದರು...

ನಾನು ಮೊದಲ ಬಾರಿಗೆ ಪಾಸ್‌ಪೋರ್ಟ್‌ಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಿಸಿ ಸೇವಾ ಕೇಂದ್ರಕ್ಕೆ ತೆರಳಿದ್ದೆ. ಅಲ್ಲಿನ ಸಿಬ್ಬಂದಿ ವರ್ಗದ ತರಾತುರಿಯು ನಮ್ಮನ್ನು ತಬ್ಬಿಬ್ಬು ಮಾಡಿಸಿತು. ಹೆಸರು, ವಿಳಾಸ ಇತ್ಯಾದಿ ಸರಿ ಇದೆಯೋ, ೆಟೊ ಚೆನ್ನಾಗಿ ಬಂದಿದೆಯೋ ಎಂದು ಸರಿಯಾಗಿ ನೋಡುವ ಅವಕಾಶವನ್ನೂ ನೀಡಲಿಲ್ಲ. ಒಂದು ಚಾರ್ಟ್ ತೋರಿಸಿ ಏನೋ ಹೇಳಿ ಹಣ ಕೇಳಿದರು. ಏಜೆಂಟರಲ್ಲಿ ಹಣ ಕೊಡಲಾಗಿದೆ ಎಂದಾಗ, 'ಇಲ್ಲಿ ಹಣ ಕೊಡಲೇಬೇಕಾಗುತ್ತದೆ' ಎಂದರು. ಹಳೆಯ ಮಾದರಿಯ ಪಾಸ್‌ಪೋರ್ಟ್‌ಗೆ 350 ರೂ. ಕೊಡಬೇಕು. ಹೊಸ ಮಾದರಿಯ ಪಾಸ್‌ಪೋರ್ಟ್‌ಗೆ 400ರೂ. ಕೊಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಮೊಬೈಲ್ ಸಂದೇಶದ ಶುಲ್ಕ 50ರೂ.ಕೊಡಬೇಕು ಎಂದರು. ಉಪಾಯವಿಲ್ಲದೆ 400ರೂ. ಪಾವತಿಸಿದೆ.

ಫಾತಿಮಾ ಫೌಝಿಯ, ಮಂಗಳೂರು

ಉತ್ತಮ ಸೇವೆ ನೀಡಲಿ

ಹೊಸಬರಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಪಾಸ್‌ಪೋರ್ಟ್ ಸೇವೆಯ ಕುರಿತು ಸೂಕ್ತ ಮಾಹಿತಿ ಇರುವುದಿಲ್ಲ. ಅದರಲ್ಲೂ ನಿರ್ದಿಷ್ಟ ಸಮುದಾಯದ ಅರ್ಜಿದಾರರನ್ನು ವಕ್ರದೃಷ್ಟಿಯಿಂದ ನೋಡುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ. ಸೇವಾ ಕೇಂದ್ರವು ಭಾರತ ಸರಕಾರದ ಸ್ವಾಮ್ಯದಲ್ಲಿದೆ ಎಂಬ ಹುಂಬತನವೂ ಇಲ್ಲಿನ ಅಕಾರಿ-ಸಿಬ್ಬಂದಿ ವರ್ಗಕ್ಕಿದೆ. ಇದು ಪಾಸ್‌ಪೋರ್ಟ್ ಸೇವಾ ಕೇಂದ್ರವಾಗಬೇಕೇ ವಿನಃ ಜನರನ್ನು ವಂಚಿಸುವ ಕೇಂದ್ರವಾಗಬಾರದು. ಇಲ್ಲಿನ ಅವ್ಯವಸ್ಥೆ, ಅನ್ಯಾಯದ ವಿರುದ್ಧ ಸಾಕಷ್ಟು ದೂರುಗಳು ಬಂದಿದ್ದು, ಅಕಾರಿ-ಸಿಬ್ಬಂದಿ ವರ್ಗವು ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡಿ ಉತ್ತಮ ಸೇವೆ ನೀಡಲಿ.

ಅಲಿ ಹಸನ್, ಅಧ್ಯಕ್ಷರು, ಮಂಗಳೂರು ಸೆಂಟ್ರಲ್ ಕಮಿಟಿ

ಮಾಹಿತಿ ಕೊಡಲಿ

 ನಾವು ಅರ್ಜಿದಾರರಿಂದ ಪಾಸ್‌ಪೋರ್ಟ್ ಶುಲ್ಕದೊಂದಿಗೆ ಕನಿಷ್ಠ ಸೇವಾ ಶುಲ್ಕವನ್ನು ಪಡೆದು ಸೇವೆ ನೀಡುತ್ತೇವೆ. ಆದರೆ, ಕೆಲವು ಸಿಬ್ಬಂದಿಯು ಸೇವಾ ಕೇಂದ್ರದೊಳಗೆ ಪ್ರವೇಶಿಸಿದ ಅರ್ಜಿದಾರರೊಂದಿಗೆ ತರಾತುರಿ ಮಾಡುವುದು, ಕವರ್ ಬ್ಯಾಗ್ ಪಡೆಯಲು ಒತ್ತಾಯಿಸುವುದು ಇತ್ಯಾದಿಯ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇದರಿಂದ ನಮ್ಮ ಮೇಲೆ ಗ್ರಾಹಕರಿಗೆ ವಿಶ್ವಾಸ ಹೊರಟು ಹೋಗಬಹುದು. ಅಕಾರಿ-ಸಿಬ್ಬಂದಿ ವರ್ಗವು ಸೂಕ್ತ ಮಾಹಿತಿ ನೀಡಿ ಗ್ರಾಹಕರು ವಿವೇಚಿಸುವಷ್ಟು ಸಮಯಾವಕಾಶ ನೀಡುವ ಅಗತ್ಯವಿದೆ.

ರಫೀಕ್, ಪಾಸ್‌ಪೋರ್ಟ್ ಏಜೆಂಟ್, ಉಪ್ಪಿನಂಗಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News