ಕಂಪನಿಗಳ ನಿರಖು ಠೇವಣಿಗಳಲ್ಲಿ ಹೂಡಿಕೆ ಮಾಡುವ ಮುನ್ನ ಈ ಎಚ್ಚರಿಕೆಯನ್ನು ಮರೆಯಬೇಡಿ.....

Update: 2018-08-13 12:05 GMT

ಕಾರ್ಪೊರೇಟ್ ಫಿಕ್ಸಡ್ ಡೆಪಾಸಿಟ್(ಸಿಎಫ್‌ಡಿ)ಅಥವಾ ಕಂಪನಿಗಳ ನಿರಖು ಠೇವಣಿಗಳು ಬ್ಯಾಂಕ್ ಎಫ್‌ಡಿಗಳಂತೆ ಚಿಲ್ಲರೆ ಹೂಡಿಕೆದಾರರ ಮೆಚ್ಚಿನ ಆಯ್ಕೆಯಾಗಿವೆ. ಸಿಎಫ್‌ಡಿಗಳು ಖಚಿತ ಪ್ರತಿಫಲ ಮಾತ್ರವಲ್ಲ,ಬ್ಯಾಂಕ್ ಎಫ್‌ಡಿಗಳಿಗಿಂತ ಹೆಚ್ಚಿನ ಪ್ರತಿಫಲವನ್ನು ನೀಡುತ್ತವೆ. ಆದರೆ ಅವು ಹೆಚ್ಚಿನ ಅಪಾಯಗಳನ್ನೂ ಹೊಂದಿರುತ್ತವೆ ಎನ್ನುವುದನ್ನು ಕಡೆಗಣಿಸುವಂತಿಲ್ಲ. ನೀವು ಹೂಡಿಕೆದಾರರಾಗಿ ಸಿಎಫ್‌ಡಿಗಳಲ್ಲಿ ನೀವು ಕಷ್ಟಪಟ್ಟು ದುಡಿದ ಹಣವನ್ನು ತೊಡಗಿಸಲು ಬಯಸಿದ್ದರೆ ಈ ಕೆಲವು ಅಂಶಗಳು ಖಂಡಿತವಾಗಿಯೂ ನಿಮ್ಮ ಗಮನದಲ್ಲಿರಬೇಕು.

ಯಾವುದೇ ಕಂಪನಿಯು ಸಾರ್ವಜನಿಕ ಠೇವಣಿಗಳನ್ನು ಸಂಗ್ರಹಿಸಲು ಬಯಸಿದರೆ ಅದಕ್ಕಾಗಿ ಹೊರಡಿಸುವ ಸುತ್ತೋಲೆ ಅಥವಾ ಜಾಹೀರಾತುಗಳಲ್ಲಿ ಶಾಸನಬದ್ಧ ಲೆಕ್ಕ ಪರಿಶೋಧಕರ ಪ್ರಮಾಣಪತ್ರವನ್ನು ಲಗತ್ತಿಸುವುದನ್ನು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಕಡ್ಡಾಯಗೊಳಿಸಿದೆ. ಕಂಪನಿಯು ಹಿಂದೆ ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸಿತ್ತೇ ಎಂಬಂತಹ ಹಲವಾರು ವಿಷಯಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸುತ್ತಾರೆ. ಠೇವಣಿಗಳನ್ನು ಸ್ವೀಕರಿಸಿದ್ದರೆ ಸಕಾಲದಲ್ಲಿ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಸಿದೆಯೇ? ಸುಸ್ತಿದಾರನಾಗಿದ್ದರೆ ಯಾವಾಗ ಅವುಗಳನ್ನು ಮರುಪಾವತಿಸಿ ಆ ಹಣೆಪಟ್ಟಿಯನ್ನು ಕಳಚಿಕೊಂಡಿದೆ? ಅಂತಿಮವಾಗಿ,ಈ ಹಣೆಪಟ್ಟಿಯನ್ನು ಕಳಚಿಕೊಂಡು ಐದು ವರ್ಷಗಳಾಗಿವೆಯೇ ಎಂಬ ಅಂಶಗಳನ್ನು ಲೆಕ್ಕ ಪರಿಶೋಧಕರು ನೋಡುತ್ತಾರೆ.

ಕಂಪನಿಯ ವಾರ್ಷಿಕ ಹಣಕಾಸು ವರದಿಯ ಭಾಗವಾಗಿರುವ ಕಂಪನಿ ಆಡಿಟರ್ ರಿಪೋರ್ಟ್ ಆರ್ಡರ್(ಸಿಎಆರ್‌ಒ)ನಲ್ಲಿಯೂ ಲೆಕ್ಕ ಪರಿಶೋಧಕರು ಕಂಪನಿಯ ಮರುಪಾವತಿ ವೈಫಲ್ಯದ ಬಗ್ಗೆ ವರದಿ ಮಾಡುತ್ತಾರೆ. ಠೇವಣಿಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಂಪನಿಗಳು ಕಂಪನಿಗಳ ಕಾಯ್ದೆಯ ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ.

ಬ್ಯಾಂಕ್ ಎಫ್‌ಡಿಗಿಂತ ಸಿಎಫ್‌ಡಿಗಳು ಹೆಚ್ಚಿನ ಪ್ರತಿಫಲ ನೀಡುತ್ತವೆ ಎಂಬ ಕಾರಣದಿಂದ ಚಿಲ್ಲರೆ ಹೂಡಿಕೆದಾರರು ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ಹಿಂದೆ ಹಲವಾರು ಕಂಪನಿಗಳು ಸಾರ್ವಜನಿಕರ ಠೇವಣಿಗಳನ್ನು ಮರಳಿಸುವಲ್ಲಿ ವಿಫಲಗೊಂಡಿವೆ. ಈ ಠೇವಣಿಗಳಲ್ಲಿ ಹಣವನ್ನು ತೊಡಗಿಸುವ ಹೆಚ್ಚಿನ ಸಣ್ಣ ಹೂಡಿಕೆದಾರರಿಗೆ ಕಂಪನಿಯು ಹಿಂದೆ ಠೇವಣಿಗಳನ್ನು ಮರಳಿಸುವಲ್ಲಿ ಸುಸ್ತಿದಾರನಾಗಿತ್ತೇ ಎನ್ನುವುದನ್ನು ಪರಿಶೀಲಿಸುವ ಅನುಕೂಲಗಳಿರುವುದಿಲ್ಲ. ಕಂಪನಿಗಳು ತಮ್ಮ ಹಿಂದಿನ ನಿರ್ವಹಣೆಯ ನಿಜವಾದ ಚಿತ್ರಣವನ್ನು ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸಿದರೆ ಹೂಡಿಕೆದಾರರ ಹಕ್ಕುಗಳು ಮತ್ತು ಆಸಕ್ತಿಗಳನ್ನು ರಕ್ಷಿಸುವುದು ಸಾಧ್ಯವಾಗುತ್ತದೆ.

 ಯಾವುದೇ ಕಂಪನಿಯಲ್ಲಿ ಹಣ ತೊಡಗಿಸುವ ಮುನ್ನ ಅದರ ಪ್ರವರ್ತಕರು, ನಿರ್ದೇಶಕರು ಯಾರು, ಅವರ ಹಿನ್ನೆಲೆಗಳೇನು ಇತ್ಯಾದಿಗಳ ಬಗ್ಗೆಯೂ ಹೂಡಿಕೆದಾರರು ತಿಳಿದುಕೊಳ್ಳಬೇಕು ಎನ್ನುತ್ತಾರೆ ಹಣಕಾಸು ಯೋಜಕರು. ಜೊತೆಗೆ ಕಂಪನಿಯ ಕ್ರೆಡಿಟ್ ರೇಟಿಂಗ್‌ನ್ನೂ ತಿಳಿದುಕೊಳ್ಳಬೇಕು. ಕಂಪನಿಯು ಡಿಬೆಂಚರ್‌ಳಂತಹ ಇತರ ಸಾಲಪತ್ರಗಳನ್ನು ವಿತರಿಸಿದ್ದರೆ ಅದನ್ನೂ ಪರಿಶೀಲಿಸಬೇಕು. ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವ ಮುನ್ನ ಸೆಬಿ-ನೋಂದಾಯಿತ ಹೂಡಿಕೆ ಸಲಹೆಗಾರರೊಂದಿಗೆ ಸಮಾಲೋಚಿಸಿದರೆ ಒಳ್ಳೆಯದು.

ಕಂಪನಿಗಳಲ್ಲಿ ಹಣ ತೊಡಗಿಸುವ ಹೂಡಿಕೆದಾರರು ದೀರ್ಘಾವಧಿಯ ಠೇವಣಿಗಳ ಗೋಜಿಗೆ ಹೋಗಬಾರದು. ಓರ್ವ ಹೂಡಿಕೆದಾರನಾಗಿ ಠೇವಣಿಗಳು ಪಕ್ವಗೊಂಡಾಗ ಅವುಗಳನ್ನು ನವೀಕರಿಸುವುದೂ ಬೇಡ.

ನಿಮಗೆ ಹೂಡಿಕೆಗಳನ್ನು ಮಾಡಿ ಅನುಭವವಿದ್ದರೆ ಮತ್ತು ಆಯವ್ಯಯ ಪಟ್ಟಿ ಹಾಗೂ ಲಾಭ-ನಷ್ಟದಂತಹ ಹಣಕಾಸು ವರದಿಗಳ ಬಗ್ಗೆ ತಿಳಿದಿದ್ದರೆ ಕಂಪನಿಯಲ್ಲಿ ಹೂಡಿಕೆಯ ಮೊದಲು ಅವುಗಳನ್ನು ನೀವು ಪರಿಶೀಲಿಸಲೇಬೇಕು. ಡೆಟ್ ಟು ಈಕ್ವಿಟಿ ರೇಷಿಯೊ,ಇಂಟರೆಸ್ಟ್ ಕವರೇಜ್ ರೇಷಿಯೊ ,ಆ್ಯಸಿಡ್ ಟೆಸ್ಟ್ ರೇಷಿಯೊದಂತಹ ಪ್ರಮುಖ ಅನುಪಾತಗಳನ್ನು ಗಮನಿಸಬೇಕು. ಇವು ಕಂಪನಿಯ ಆರ್ಥಿಕ ಸಾಮರ್ಥ್ಯವನ್ನು ಸೂಚಿಸುವ ಪ್ರಮುಖ ಮಾನದಂಡಗಳಾಗಿವೆ ಎನ್ನುವುದು ಗೊತ್ತಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News