ವಕ್ಫ್ ಆಸ್ತಿ ಕಬಳಿಕೆ ಪ್ರಕರಣ: ಸಿಬಿಐಗೆ ವಹಿಸಲು ಬಿಜೆಪಿ ಆಗ್ರಹ

Update: 2018-08-13 13:28 GMT

ಬೆಂಗಳೂರು, ಆ.13: ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸಚಿವ ಝಮೀರ್‌ ಅಹ್ಮದ್‌ ಖಾನ್ ಸಿಬಿಐಗೆ ವಹಿಸುವುದಾಗಿ ಸದನದಲ್ಲಿ ಹೇಳಿದ್ದರು. ಅದರಂತೆ, ಸರಕಾರ ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ ಆಗ್ರಹಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ವಕ್ಫ್ ಆಸ್ತಿ ಕಬಳಿಕೆ ಪ್ರಕರಣದ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಇದೊಂದು ಬಹುಕೋಟಿ ಹಗರಣದ ಪ್ರಕರಣವಾಗಿದೆ ಎಂದರು.

ರಾಜ್ಯ ಸರಕಾರವು ಸೆ.5 ರೊಳಗೆ ಅನ್ವರ್ ಮಾಣಿಪ್ಪಾಡಿ ವರದಿ ಆಧರಿಸಿ ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ ಸೆ.6ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಎದುರು ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ರಾಜ್ಯದಲ್ಲಿ ಸುಮಾರು 2.5 ಲಕ್ಷ ಕೋಟಿ ರೂ.ಮೌಲ್ಯದ 27 ಸಾವಿರ ಎಕರೆ ವಕ್ಫ್ ಭೂಮಿ ಕಬಳಿಕೆಯಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬೀದರ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರದ ಕುರಿತು ಪ್ರಸ್ತಾಪಿಸಿ, ರಾಹುಲ್‌ಗಾಂಧಿ ಒಬ್ಬ ಅಪ್ರಬುದ್ಧ. ಉತ್ತರ ಪ್ರದೇಶದಲ್ಲಿ ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡದೆ, ಬೀದರ್‌ಗೆ ಬರುತ್ತಾರೆ ಎಂದರೆ ಅವರಿಗೆ ಭವಿಷ್ಯವಿಲ್ಲ ಎಂದರ್ಥ ಎಂದರು.

ಏರ್ ಶೋ ಸ್ಥಳಾಂತರ ವಿಚಾರವನ್ನು ಬಿಡಿ. ಆಗಬೇಕಾದ ಅಭಿವೃದ್ಧಿ ಕೆಲಸಗಳು ಸಾಕಷ್ಟಿವೆ. ಕಾಂಗ್ರೆಸ್‌ನವರು ಅದರ ಬಗ್ಗೆ ಯೋಚನೆ ಮಾಡಲಿ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದಲ್ಲಿ ಭತ್ತ ನಾಟಿ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಗೆ ಆಲಮಟ್ಟಿಗೆ ಭಾಗಿನ ಅರ್ಪಿಸಲು ಸಮಯವಿಲ್ಲ. ಉತ್ತರ ಕರ್ನಾಟಕದ ಬಹುತೇಕ ಭಾಗಗಳು ಬರಪೀಡಿತವಾಗಿವೆ. ಆದರೆ, ಕೇವಲ ಮಂಡ್ಯದಲ್ಲಿ ಹೋಗಿ ನಾಟಿ ಮಾಡಿದರೆ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.

94 ಸಿ ಮತ್ತು 94ಸಿಸಿ ಅಡಿಯಲ್ಲಿ ಸರಕಾರ ಹಕ್ಕುಪತ್ರ ವಿತರಿಸುವಲ್ಲಿ ವಿಫಲವಾಗಿದೆ. ಈ ಕೂಡಲೇ ಹಕ್ಕು ಪತ್ರ ವಿತರಣೆ ಮಾಡಬೇಕು. 94ಸಿ ಅಡಿಯಲ್ಲಿ 5ಲಕ್ಷ 88 ಸಾವಿರ ಅರ್ಜಿ ಬಂದಿತ್ತು. 3 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸರ್ಕಾರ ತಿರಸ್ಕಾರ ಮಾಡಿದೆ. 94ಸಿಸಿ ಅಡಿ 2.14 ಲಕ್ಷ ಅರ್ಜಿ ಬಂದಿದೆ. ಇದರಲ್ಲಿ 86 ಸಾವಿರ ಅರ್ಜಿ ತಿರಸ್ಕಾರಗೊಂಡಿದೆ. ಈ ಸರಕಾರಕ್ಕೆ ಬಡವರ ಮೇಲೆ ಕಾಳಜಿ ಇಲ್ಲ ಎಂದು ಶ್ರೀನಿವಾಸ್‌ಪೂಜಾರಿ ಆರೋಪಿಸಿದರು.

ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಹುಟ್ಟುವ ಮೊದಲೇ ಶಿವರಾಮಕಾರಂತರು ಅನ್ಯ ಜಾತಿ ಹುಡುಗಿಯನ್ನು ಮದುವೆಯಾಗಿದ್ದರು. ಆ ಮೂಲಕ ಅವರು ಜಾತ್ಯತೀತರಾಗಿದ್ದರು. ಆದರೆ, ತ್ರಿವರ್ಣ ಧ್ವಜ ಹಾರಿಸಿದಾಗಲೇ ಅವರು ತಮ್ಮ ಬದುಕನ್ನು ಅಂತ್ಯ ಮಾಡಬೇಕಾಗಿತ್ತು ಎಂದು ದಿನೇಶ್ ಅಮೀನ್ ಮಟ್ಟು ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆ ನೀಡುವವರಿಗೆ ಸಮಾಜದಲ್ಲಿ ಬದುಕುವ ಹಕ್ಕಿಲ್ಲ.
-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News