ಏಕಕಾಲಕ್ಕೆ ರೈತರಿಗೆ ‘ಋಣಮುಕ್ತ ಪತ್ರ’: ಸಚಿವ ಬಂಡೆಪ್ಪ ಕಾಶಂಪೂರ್

Update: 2018-08-13 13:35 GMT

ಬೆಂಗಳೂರು, ಆ. 13: ರಾಜ್ಯದ ಸಹಕಾರ ಸಂಘಗಳ ಮೂಲಕ ರೈತರು ಪಡೆದಿದ್ದ 9,448 ಕೋಟಿ ರೂ.ಮೊತ್ತದ ಬೆಳೆ ಸಾಲಮನ್ನಾ ಮಾಡಿದ್ದು, ಏಕಕಾಲಕ್ಕೆ ರೈತರಿಗೆ ಋಣಮುಕ್ತ ಪತ್ರ ನೀಡಲು ಉದ್ದೇಶಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಜು.10ರ ವರೆಗೆ ಹೊಂದಿರುವ 1ಲಕ್ಷ ರೂ.ವರೆಗಿನ ಕೃಷಿ ಸಾಲಮನ್ನಾ ಮಾಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕುಗಳು ನೀಡಿದ್ದ ಅಲ್ಪಾವಧಿ ಬೆಳೆ ಸಾಲ 1 ಲಕ್ಷ ರೂ.ವರೆಗೆ ಮನ್ನಾ ಘೋಷಣೆ ಮಾಡಲಾಗಿದೆ.

ಒಂದು ರೈತ ಕುಟುಂಬಕ್ಕೆ 1ಲಕ್ಷ ರೂ.ಮಾತ್ರ ಸಾಲಮನ್ನಾ ಆಗಲಿದೆ. ಸಾಲ ಪಡೆದ ರೈತರು ಮೃತಪಟ್ಟಿದ್ದರೆ, ಅವರ ವಾರಸುದಾರರಿಗೆ ಮನ್ನಾ ಸೌಲಭ್ಯ ದೊರೆಯಲಿದೆ. ಸಾಲ ಮರುಪಾವತಿ ಗಡುವು ಮುಗಿಯುವ ದಿನಾಂಕಕ್ಕೆ ಬ್ಯಾಂಕುಗಳಿಗೆ ರೈತ ಪಡೆದ ಸಾಲವನ್ನು ಪಾವತಿಸಲಾಗುವುದು ಎಂದರು.
ಒಂದು ವೇಳೆ ಸಾಲ ಸಂಪೂರ್ಣ ಮರುಪಾವತಿಯಾಗಿದ್ದರೆ, ರೈತ ಪಡೆದ ಸಾಲ ಆತನ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ. ಸಾಲಮನ್ನಾ ಅನುದಾನವನ್ನು ನೇರ ನಗದು ವರ್ಗಾವಣೆ(ಡಿಬಿಟಿ) ರೈತರ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿನ 78 ಲಕ್ಷ ಮಂದಿ ರೈತರ ಪೈಕಿ 22 ಲಕ್ಷ ರೈತರು ಸಹಕಾರ ಬ್ಯಾಂಕುಗಳ ಮೂಲಕ ಸಾಲ ಪಡೆದಿದ್ದು, 26 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆಯುತ್ತಿದ್ದಾರೆ. ಉಳಿದವರಿಗೆ ಸಾಲಸೌಲಭ್ಯ ಸಿಗುತ್ತಿಲ್ಲ ಎಂದ ಅವರು, ಈ ರೈತರಿಗೆ ಸರಕಾರಿ ಸಾಲಸೌಲಭ್ಯ ಕಲ್ಪಿಸಲು ಉದ್ದೇಶಿಸಿದೆ ಎಂದರು.

ನೆರವಿಗೆ ಕೋರಿಕೆ: ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲು ನಬಾರ್ಡ್‌ನಿಂದ ಆರ್ಥಿಕ ನೆರವನ್ನು ಕೋರಿದ್ದೇವೆ. ಈವರೆಗೂ ಶೇ.40ರಷ್ಟು ಆರ್ಥಿಕ ನೆರವು ಪಡೆಯಲಾಗುತ್ತಿದೆ. ಅದನ್ನು ಶೇ.75ಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಶೇ.60ರಷ್ಟು ನೆರವು ದೊರೆಯುವ ನಿರೀಕ್ಷೆ ಇದೆ ಎಂದು ಹೇಳಿದರು.
ಸಹಕಾರಿ ಸಂಸ್ಥೆಗಳು ರೈತರಿಗೆ 10,700 ಕೋಟಿ ರೂ. ಬೆಲೆ ಸಾಲ ನೀಡಿದ್ದು, ಆ ಪೈಕಿ 9,448ಕೋಟಿ ರೂ.ಸಾಲಮನ್ನಾ ಮಾಡಲಾಗಿದೆ. ಬಾಕಿ 1,500 ಕೋಟಿ ರೂ.ಉಳಿಯಲಿದೆ ಎಂದ ಅವರು, ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆದವರ ಪಟ್ಟಿ ಪ್ರದರ್ಶಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದರು.

ಬೇನಾಮಿ ಖಾತೆ: ಸಹಕಾರ ಸಂಘಗಳ ವ್ಯವಹಾರಕ್ಕೆ ಆಧಾರ್ ಸಂಖ್ಯೆ ಜೋಡಣೆ ಹಿನ್ನೆಲೆಯಲ್ಲಿ ಸುಮಾರು 6 ಸಾವಿರ ಬೇನಾಮಿ ಖಾತೆಗಳಲ್ಲಿ 50ಕೋಟಿ ರೂ.ಹಣ ಪತ್ತೆಯಾಗಿದೆ ಎಂದ ಅವರು, ಹೀಗಾಗಿ ಖಾತೆದಾರರ ಪಟ್ಟಿಯನ್ನು ಪ್ರಕಟಿಸಲಿದ್ದು, ಬೇನಾಮಿ ಖಾತೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

‘ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯದಲ್ಲಿ ಭತ್ತದ ಪೈರು ನಾಟಿ ಮಾಡಿದ ಮಾದರಿಯಲ್ಲೆ ಉತ್ತರ ಕರ್ನಾಟಕದಲ್ಲಿ ಉದ್ದು, ಹೆಸರು, ತೊಗರಿ ರಾಶಿ ಪೂಜೆಗೆ ಸಿಎಂ ಕುಮಾರಸ್ವಾಮಿಯವರನ್ನು ಆಹ್ವಾನಿಸಲಾಗುವುದು. ಅಲ್ಲದೆ, ಬೀದರ್ ಭಾಗದಲ್ಲಿನ ಕೃಷಿ ಚಟುವಟಿಕೆಗಳಲ್ಲಿ ಸಿಎಂ ಪಾಲೊಳ್ಳಲಿದ್ದಾರೆ’
-ಬಂಡೆಪ್ಪ ಕಾಶಂಪೂರ್ ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News