ಬಿಎಸ್‌ವೈಗೆ ಕೋರ್ಟ್‌ಗಳ ಕಪಾಳಮೋಕ್ಷ: ವಿ.ಎಸ್ ಉಗ್ರಪ್ಪ

Update: 2018-08-13 14:50 GMT

ಬೆಂಗಳೂರು, ಆ. 13: ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದ 257 ಎಕರೆ ಭೂಮಿ ಡಿ-ನೋಟಿಫೈ ಹಾಗೂ ಗೋಕರ್ಣ ದೇಗುಲ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ವಿಚಾರ ಸಂಬಂಧ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಯಡಿಯೂರಪ್ಪನವರಿಗೆ ಕಪಾಳ ಮೋಕ್ಷ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಟೀಕಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಸಿಎಂ ಆಗಿದ್ದ ಅವಧಿಯಲ್ಲಿ ಬಿಡಿಎ ಶಿವಕಾಮ ಕಾರಂತ ಬಡಾವಣೆಗೆ ಸುಮಾರು 4ಸಾವಿರ ಎಕರೆಗೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು.
ಆ ಪೈಕಿ ಏಕಾಏಕಿ 257 ಎಕರೆ ಭೂಮಿಯನ್ನು ಬಿಎಸ್‌ವೈ ಡಿ-ನೋಟಿಫೈ ಮಾಡಿದ್ದಾರೆ. ಅಲ್ಲದೆ, ಅಧಿಕಾರಿಗಳು 498 ಎಕರೆ ಭೂಮಿ ಡಿ-ನೋಟಿಫೈ ಮಾಡಿದ್ದು, ಇದೀಗ ಸುಪ್ರೀಂ ಕೋರ್ಟ್ ತನಿಖೆಗೆ ಆದೇಶಿಸಿ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ಅವರನ್ನು ನೇಮಕ ಮಾಡಿ ವರದಿ ನೀಡಲು ಸೂಚಿಸಿದೆ ಎಂದು ಉಲ್ಲೇಖಿಸಿದರು.

ಇದೇ ರೀತಿಯಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಕಾನೂನು ಉಲ್ಲಂಘಿಸಿ ಗೋಕರ್ಣ ದೇಗುಲವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಪಾಳ ಮೋಕ್ಷ ಮಾಡಿದೆ. ಆದರೂ, ಇವರೆಲ್ಲ ಯಾವ ಮುಖವಿಟ್ಟುಕೊಂಡು ತಿರುಗಾಡುತ್ತಿದ್ದಾರೆ ಎಂದು ಉಗ್ರಪ್ಪ ಪ್ರಶ್ನಿಸಿದರು.

ಕಾನೂನಿನ ಮೇಲೆ ಕನಿಷ್ಠ ಗೌರವವಿದ್ದರೆ ಕೂಡಲೇ ರೈತರು ಮತ್ತು ಸಾರ್ವಜನಿಕರ ಕ್ಷಮೆ ಕೋರಬೇಕು. ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರವನ್ನು ಕಟ್ಟಿಕೊಡಬೇಕು ಎಂದು ಆಗ್ರಹಿಸಿ ಉಗ್ರಪ್ಪ, ಬಿಎಸ್‌ವೈಗೆ ನೈತಿಕತೆ ಇದ್ದರೆ ಕೂಡಲೇ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಮಾಜಿ ಸಚಿವ ಎಚ್.ಎಂ. ರೇವಣ್ಣ ಈ ವೇಳೆ ಹಾಜರಿದ್ದರು.

‘ಏರ್ ಶೋ ನಡೆಯುವ ಪ್ರದೇಶವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಬಿಜೆಪಿ ಮುಖಂಡರಿಗೆ ರಾಜ್ಯದ ಬಗ್ಗೆ ಕನಿಷ್ಠ ಗೌರವವಿದ್ದರೆ ಲಕ್ನೋಗೆ ಸ್ಥಳಾಂತರಗೊಂಡಿರುವ ಏರೋ ಶೋವನ್ನು ಬೆಂಗಳೂರಿಗೆ ವಾಪಸ್ ತರಬೇಕು. ಇಲ್ಲವಾದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಲಿ’
-ವಿ.ಎಸ್.ಉಗ್ರಪ್ಪ ವಿಧಾನ ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News