ಬಿಬಿಎಂಪಿ ವ್ಯಾಪ್ತಿಯ ಅನಧಿಕೃತ ಓಎಫ್‌ಸಿ ಕೇಬಲ್: ಪರಿಶೀಲನಾ ಸಮಿತಿ ರಚನೆ
ಬೆಂಗಳೂರು, ಆ.13: ಬಿಬಿಎಂಪಿ ವ್ಯಾಪ್ತಿಯ ಅನಧಿಕೃತ ಓಎಫ್‌ಸಿ ಕೇಬಲ್‌ಗಳ ಅಳವಡಿಕೆಯಿಂದ ಆಗುತ್ತಿರುವ ನಷ್ಟ ತಪ್ಪಿಸಿ, ಆದಾಯ ಕ್ರೋಡೀಕರಣಕ್ಕಾಗಿ ಪರಿಶೀಲನಾ ಸಮಿತಿ ರಚಿಸುವುದಾಗಿ ಮೇಯರ್ ಆರ್.ಸಂಪತ್ ರಾಜ್ ತಿಳಿಸಿದರು.
ಸೋಮವಾರ ಬಿಬಿಎಂಪಿ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಅಧಿಕಾರಿಗಳ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳು ಓಎಫ್‌ಸಿ ಕೇಬಲ್ ಅಳವಡಿಕೆಗೆ ಅವಕಾಶ ನೀಡುತ್ತಿದ್ದಾರೆ. ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸುತ್ತಿರುವ ರಸ್ತೆಗಳು ಹಾಳಾಗುವುದಕ್ಕೆ ಓಎಫ್‌ಸಿ ಕೇಬಲ್ ಅಳವಡಿಕೆಯಾಗಿದೆ. ಮರ, ವಿದ್ಯುತ್ ಕಂಬ ಸೇರಿದಂತೆ ಎಲ್ಲಂದರಲ್ಲಿ ಓಎಫ್‌ಸಿ ಕೇಬಲ್‌ಗಳನ್ನು ಬಿಡಲಾಗಿದೆ. ಇದರಿಂದ ಸಾರ್ವಜನಿಕರ ಪ್ರಾಣಕ್ಕೂ ಅಪಾಯಕಾರಿ ಎಂದರು.
ಪಾಲಿಕೆ ಅಧಿಕಾರಿಗಳು ನಿಗದಿತ ಪ್ರಮಾಣದಲ್ಲಿ ಓಎಫ್‌ಸಿ ಶುಲ್ಕ ನಿಗದಿ ಪಡಿಸಿಲ್ಲ. ಬೇರೆ ರಾಜ್ಯದ ಮಹಾನಗರ ಪಾಲಿಕೆಗೆ ಹೋಲಿಕೆ ಮಾಡಿಕೊಂಡರೆ ನಮ್ಮ ಶುಲ್ಕ ಪ್ರಮಾಣ ಅತಿ ಕಡಿಮೆಯಾಗಿದೆ. ಈ ಹಿಂದೆ ಎನ್.ಆರ್. ರಮೇಶ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು ಎಂದು ಗಮನಕ್ಕೆ ತಂದರು. ತದನಂತರ ಸಂಪತ್ ರಾಜ್, ಆಡಳಿತ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕರ ನೇತೃತ್ವ ದಲ್ಲಿ ಸಮಿತಿ ರಚನೆ ಮಾಡಲಾಗುವುದು. ಸಮಿತಿ ಓಎಫ್‌ಸಿಯಿಂದ ಬಿಬಿಎಂಪಿಗೆ ಆಗುತ್ತಿರುವ ಆದಾಯ ನಷ್ಟದ ಬಗ್ಗೆ ಪರಿಶೀಲನೆ ನಡೆಸಿ ಶುಲ್ಕ ಪರಿಸ್ಕರಣೆ, ನೀತಿ ನಿಯಮ ರೂಪಿಸಲಿದೆ ಎಂದು ಹೇಳಿದರು.
ಮಾಜಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್, ನಗರದ 300 ಕಿ.ಮೀ ರಸ್ತೆಯಲ್ಲಿ ಮಾತ್ರ ಓಎಫ್‌ಸಿ ಅಳವಡಿಕೆಗೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸದಸ್ಯರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಮೊಬೈಲ್ ಟವರ್‌ಗಳಿಗೆ 50 ಸಾವಿರ ರು. ಶುಲ್ಕ ವಿಧಿಸಲಾಗಿದೆ. ಅದರಲ್ಲಿ ಎಷ್ಟು ಶುಲ್ಕ ವಸೂಲಿ ಮಾಡಿದ್ದಾರೆ. ಎಷ್ಟು ಟವರ್‌ಗಳಿವೆ ಎಂಬದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. 15 ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಇಲ್ಲವಾದರೆ ಪಾಲಿಕೆ ಮುಂದೆ ಧರಣಿ ಮಾಡುವುದಾಗಿ ಎಂದರು.
ಸಂತಾಪ ಸೂಚನೆ
ಪಾಲಿಕೆ ಸಭೆಯ ಆರಂಭದಲ್ಲಿಯೇ ಇತ್ತೀಚೆಗೆ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಆತ್ಮಕ್ಕೆ ಶಾಂತಿ ಶಾಂತಿ ಕೋರಲಾಯಿತು.
‘ಏರ್ ಶೋ’ ಸ್ಥಳಾಂತರ ಬೇಡ
ಹಲವು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ಪ್ರಸಕ್ತ ಸಾಲಿನಲ್ಲಿ ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರಿಸದಂತೆ ಕೋರುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೋಮವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪಾಲಿಕೆ ಮೇಯರ್ ಸಂಪತ್‌ರಾಜ್, ಏರೋ ಇಂಡಿಯಾ ಬೆಂಗಳೂರಿನ ಹೆಮ್ಮೆಯಾಗಿದ್ದು, ಬೇರೆಡೆಗೆ ಸ್ಥಳಾಂತರ ಮಾಡದಂತೆ ನಿಮ್ಮ ಸಂಸದರಲ್ಲಿ ಮನವಿ ಮಾಡುವಂತೆ ಬಿಜೆಪಿ ಪಾಲಿಕೆ ಸದಸ್ಯರಿಗೆ ಹೇಳಿದರು. ಜೊತೆಗೆ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗುವುದೆಂದರು.
ಗಣೇಶನಿಗೆ ಶುಲ್ಕ; ಸುಳ್ಳು ವದಂತಿ
ಸಾರ್ವಜನಿಕರ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ಬಿಬಿಎಂಪಿ ಯಾವುದೇ ರೀತಿಯಲ್ಲಿ ತೆರಿಗೆ ಅಥವಾ ಶುಲ್ಕ ವಸೂಲಿ ಮಾಡುತ್ತಿಲ್ಲ. ಈ ಬಗ್ಗೆ ಸುಳ್ಳು ವದಂತಿಗಳಿಗೆ ಕಿವಿಗೂಡಬೇಡಿ. ಯಾವುದೇ ಸಂಘ ಸಂಸ್ಥೆಗಳು ಗಣೇಶ ಪ್ರತಿಷ್ಠಾಪನೆ ಹಾಗೂ ಉತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವು ಸಹ ಮುಕ್ತವಾಗಿ ಆಚರಿಸಬಹುದಾಗಿದೆ.
-ಆರ್.ಸಂಪತ್ ರಾಜ್ ಬಿಬಿಎಂಪಿ ಮೇಯರ್