ರಾಜಕಾರಣಿಗಳಿಗೆ ‘ಸಂವಿಧಾನ ಪರೀಕ್ಷೆ’ ಕಡ್ಡಾಯಗೊಳಿಸಬೇಕು: ಶಿವರುದ್ರ ಸ್ವಾಮೀಜಿ

Update: 2018-08-13 16:05 GMT

ಬೆಂಗಳೂರು, ಆ.13: ರಾಜಕಾರಣಿಗಳಿಗೆ ಸಂವಿಧಾನ ಕುರಿತ ಪರೀಕ್ಷೆ ಕಡ್ಡಾಯಗೊಳಿಸಬೇಕು. ಈ ಸಂಬಂಧ ಪ್ರಾಧಿಕಾವೊಂದನ್ನು ರಚನೆ ಮಾಡಬೇಕು ಎಂದು ಬೇಲಿಮಠ ಮಹಾಸಂಸ್ಥಾನದ ಶಿವರುದ್ರ ಸ್ವಾಮೀಜಿ ತಿಳಿಸಿದರು.

ಸೋಮವಾರ ನಗರದ ಕುಮಾರಕೃಪದಲ್ಲಿರುವ ಗಾಂಧಿ ಭವನ ಸಭಾಂಗಣದಲ್ಲಿ ಸಮಂಜಸ ಆಯೋಜಿಸಿದ್ದ, ‘ಬಹುಧರ್ಮಗಳು ಮತ್ತು ಭಾರತೀಯತೆ’ ಒಂದು ವ್ಯಾಖ್ಯಾನ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ ರಾಜಕೀಯ ಸ್ಥಾನ ಪಡೆಯುವ ಎಲ್ಲರೂ ಕಡ್ಡಾಯವಾಗಿ ಸಂವಿಧಾನ ಕುರಿತ ಪರೀಕ್ಷೆ ಬರೆದು ಉತ್ತೀರ್ಣ ಆಗಬೇಕು. ಹೀಗಾದರೆ, ಮಾತ್ರ ಸಂವಿಧಾನವನ್ನು ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾಗಲಿದೆ. ಇನ್ನು ಚುನಾವಣೆ ಆಯೋಗವು ಈ ಬಗ್ಗೆ ಕ್ರಮವಹಿಸಬೇಕು. ಜೊತೆಗೆ ಇದಕ್ಕಾಗಿಯೇ ಒಂದು ಪ್ರಾಧಿಕಾರ ರಚನೆಯಾಗಲಿ ಎಂದು ಹೇಳಿದರು.

ಪೊಲೀಸ್ ಪೇದೆ ನೇಮಕ ಮಾಡಲು ನಾವು ಮಾನಸಿಕ ಮತ್ತು ದೈಹಿಕ ಪರೀಕ್ಷೆ ನಡೆಸುತ್ತಿದ್ದೇವೆ. ಹೀಗಿರುವಾಗ, ಇಡೀ ಸಮಾಜವನ್ನು ಸುರಕ್ಷಿತವಾಗಿಡುವ ರಾಜಕಾರಣಿಗಳ ಆಯ್ಕೆಗೆ ನಾವು ಏಕೆ ಪರೀಕ್ಷೆ ನಡೆಸಬಾರದು. ಈ ಬಗ್ಗೆ ಸಾರ್ವಜನಿಕವಾಗಿಯೂ ಚರ್ಚೆಗಳು ನಡೆಯಬೇಕು ಎಂದು ಶಿವರುದ್ರ ಸ್ವಾಮೀಜಿ ನುಡಿದರು.

ವೇದಗಳನ್ನು ಜನ ಸಾಮಾನ್ಯರಿಗೆ ತಲುಪದಂತೆ ಯಾರು ನೋಡಿಕೊಂಡರೋ ಅವರೇ, ಇಂದು ಸಂವಿಧಾನದ ಆಶಯವನ್ನು ಹರಡದಂತೆ ನೋಡಿ ಕೊಳ್ಳುತ್ತಿದ್ದಾರೆ. ಆದರೆ, ಸಂವಿಧಾನವೇ ನಮ್ಮ ಧರ್ಮವಾಗಿದ್ದು, ಇದನ್ನು ಗಟ್ಟಿಯಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಭಕ್ತಿ ಎಂದರೆ ಪೂಜೆ ಎನ್ನುವುದು ಬರೀ ಬುರಡೆಯಾಗಿದೆ. ಭಕ್ತಿ ಎಂದರೆ ಮಾತು ಮತ್ತು ಮನಸ್ಸು ಒಂದಾಗಿರುವುದು ಎಂದರ್ಥ. ಈ ರೀತಿ ಇನ್ನೊಬ್ಬರಿಗೆ ಹೇಳುವವರನ್ನು ಭಕ್ತ ಎನ್ನುತ್ತಾರೆ ಎಂದ ಅವರು, ಬೆಳಕು ಒಬ್ಬರನ್ನು ಬೇರೆಯವರಿಗೆ ತೋರಿಸುತ್ತದೆ ಕತ್ತಲು ತನ್ನನ್ನು ತಾನೇ ತೋರಿಸಿಕೊಳ್ಳುತ್ತದೆ. ಅದರಂತೆ ಅಜ್ಞಾನಿಗಳು ಅಹಂಕಾರದಿಂದ ತನ್ನನ್ನು ತಾನು ತೋರಿಸಿಕೊಂಡರೆ ಉತ್ತಮರು ಮತ್ತು ಜ್ಞಾನಿಗಳು ಬೇರೆಯವರ ಪ್ರತಿಭೆ ಮತ್ತು ಸಾಧನೆಗಳನ್ನು ಲೋಕಕ್ಕೆ ತೋರಿಸುತ್ತಾರೆ ಎಂದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಮಾತನಾಡಿ, ಪಟ್ಟಭದ್ರ ಹಿತಾಸಕ್ತಿಗಳು, ಕೋಮುವಾದಿಗಳು ದೇಶಕ್ಕೆ ಒಂದೇ ಮತವಿರಬೇಕು. ಏಕ ಸಂಸ್ಕೃತಿ ಬೇಕೆಂಬ ತಪ್ಪು ವ್ಯಾಖ್ಯಾನ ಮಾಡುತ್ತಿವೆ ಎಂದ ಅವರು, ಚುನಾವಣೆ ಆಯೋಗ, ವಿಧಾನಸಭೆ, ಸಂಸತ್ತು, ಪ್ರಧಾನಿ, ಮುಖ್ಯಮಂತ್ರಿ ಸೇರಿ ಎಲ್ಲವೂ ಸಂವಿಧಾನದಡಿಯಲ್ಲಿಯೇ ಬರುತ್ತದೆ. ಆದರೆ, ರಾಜಕೀಯ ಲಾಭಕ್ಕಾಗಿ ದಿಕ್ಕು ತಪ್ಪಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿ, ಕೆಲವರು ನಾಲಗೆಯನ್ನು ಅಸ್ತ್ರವಾಗಿಟ್ಟು ಕೊಂಡು ಉದ್ದೇಶ ಪೂರ್ವಕವಾಗಿ ವಿವಾದಿತ ಮಾತುಗಳನ್ನು ಹೇಳುತ್ತಾರೆ. ಅಲ್ಲದೆ, ರಾಜಕಾರಣಿಗಳು ಜನರನ್ನು ಒಗ್ಗೂಡಿಸುವ ಬದಲು ವಿಭಜನೆಗೆ ಅವಕಾಶ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಚಾರ ಸಂಕಿರಣದಲ್ಲಿ ಸಂಸದ ಕೆ.ಸಿ.ರಾಮಮೂರ್ತಿ, ಸಮಂಜಸ ಸಲಹೆಗಾರರಾದ ಎ.ಎನ್.ನಟರಾಜ್ ಗೌಡ, ಮಂಜುನಾಥ ಅದ್ದೆ ಸೇರಿದಂತೆ ಪ್ರಮುಖರಿದ್ದರು.

ಭಾರತ ಬಹುಸಂಸ್ಕೃತಿಯ ರಾಷ್ಟ್ರವಾಗಿದೆ. ಆದರೆ, ಹಿಂದೂ ರಾಷ್ಟ್ರವಾಗಬೇಕು ಎನ್ನುವ ಪ್ರತಿಪಾದನೆ ಅಮಾನವೀಯ. ಅದೂ ಅಲ್ಲದೆ, ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎನ್ನುವುದು ನಾಚಿಕೆಗೇಡಿನ ಸಂಗತಿ.

-ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News