ಬೆಂಗಳೂರು: 72 ನೆ ಸ್ವಾತಂತ್ರೋತ್ಸವಕ್ಕೆ ಸಕಲ ಸಿದ್ಧತೆ

Update: 2018-08-13 16:12 GMT

ಬೆಂಗಳೂರು, ಆ.13: ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಆ.15ರಂದು ನಡೆಯಲಿರುವ ದೇಶದ 72ನೆ ಸ್ವಾತಂತ್ರ ದಿನಾಚರಣೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿರುವ ಹಸಿರು ಕರ್ನಾಟಕ ಯೋಜನೆಗೆ ಚಾಲನೆ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸೋಮವಾರ ನಗರದ ಪರೇಡ್ ಮೈದಾನದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮದ ಪೂರ್ವ ತಯಾರಿಯ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ ಶಂಕರ್, ಮುಖ್ಯಮಂತ್ರಿ ಕುಮಾರಸ್ವಾಮಿ ಜುಲೈ ನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಹಸಿರು ಕರ್ನಾಟಕ ಯೋಜನೆ ಘೋಷಿಸಿದ್ದು, ಬುಧವಾರ ನಡೆಯುವ ಸ್ವಾತಂತ್ರ ದಿನಾಚರಣೆಯಲ್ಲಿ ಸಸಿ ನೆಡುವ ಮತ್ತು ವಿತರಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

72 ನೆ ಸ್ವಾತಂತ್ರ ದಿನಾಚರಣೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು, ಎಚ್‌ಐವಿ ಪೀಡಿತರು, ಅನಾಥ ಮಕ್ಕಳು, ವಯೋವೃದ್ಧರು, ಬುದ್ಧಿಮಾಂದ್ಯರು, ವಿಶೇಷ ಚೇತನರು ಹಾಗೂ ವಿವಿಧ ಜಿಲ್ಲೆಗಳಿಂದ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಸ್ವಾತಂತ್ರೋತ್ಸವ ವೀಕ್ಷಿಸಲು ಆಹ್ವಾನ ನೀಡಿರುವುದು ವಿಶೇಷವಾಗಿದೆ.

ಅಂದು 9 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಂದರ್ಭ ಭಾರತೀಯ ವಾಯುಸೇನೆ ವತಿಯಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಯುತ್ತದೆ. ಅನಂತರ ಮುಖ್ಯಮಂತ್ರಿಯಿಂದ ಪರೇಡ್ ವೀಕ್ಷಿಸಿ, ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನರಿಗೆ ಸ್ವಾತಂತ್ರೋತ್ಸವದ ಸಂದೇಶ ನೀಡಲಿದ್ದಾರೆ. ಈ ವರ್ಷದ ಪಥ ಸಂಚಲನದಲ್ಲಿ ಗೋವಾ ಪೊಲೀಸ್, ಸ್ಕೌಟ್ಸ್ ಅಂಡ್ ಗೈಡ್ಸ್, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳಿಂದ ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನಡೆಸಿದರು.

ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ: ನಗರದ ವಿವಿಧ ಶಾಲೆಗಳಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ. ಆರಂಭದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ನಾಡಗೀತೆ ಹಾಗೂ ರೈತ ಗೀತೆಯನ್ನು ಪ್ರಸ್ತುತ ಪಡಿಸುತ್ತಾರೆ. ಅನಂತರ ಬೆಂಗಳೂರು ಉತ್ತರ ಜಿಲ್ಲೆಯ ನೆಲಗದರನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 650 ವಿದ್ಯಾರ್ಥಿಗಳಿಂದ ಕ್ರಾಂತಿವೀರ ಮುಂಡರಗಿ ಭೀಮರಾಮ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸುತ್ತಾರೆ.

ಮಾನ್ವಿ ಗುಲಾಟ ಅವರಿಂದ ಯೋಗ ಪ್ರದರ್ಶನ ನಡೆಯಲಿದ್ದು, ಬೈರವೇಶ್ವರ ನಗರದ ಬಿಬಿಎಂಪಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತ ಮೈಲಾರ ಮಹಾದೇವ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಬನ್ನೇರು ಘಟ್ಟದ ರೋಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಜೈ ಹಿಂದ್ ಜೈ ಭಾರತ್ ನೃತ್ಯ ಪ್ರದರ್ಶಿಸಲಿದ್ದು, ಮಿಲಿಟರಿ ಎನ್‌ಎಸ್‌ಸಿ ಸೆಂಟರ್ ಸೌತ್‌ನ 39 ಸದಸ್ಯರು ಎಎಸ್‌ಟಿ ಟಾರ್ನೋಟೋಸ್ ಎಂಬ ಸಾಹಸಮಯ ಪ್ರದರ್ಶನ ನೀಡಲಿದ್ದಾರೆ ಎಂದು ಅವರು ವಿವರಿಸಿದರು.

ಭದ್ರತೆಗೆ 1500 ಪೊಲೀಸ್ ಸಿಬ್ಬಂದಿ: ಸ್ವಾತಂತ್ರೋತ್ಸವ ಸಮಾರಂಭದ ಭದ್ರತೆಗಾಗಿ 9 ಡಿಸಿಪಿ, 16 ಎಸಿಪಿ, 46 ಸಬ್‌ಇನ್ಸ್‌ಪೆಕ್ಟರ್, 102 ಪಿಎಸ್‌ಐ, ಇಬ್ಬರು ಡಿಸಿಪಿ, 7 ಎಸಿಪಿ, 77 ಎಎಸ್‌ಐ, 75 ಮಹಿಳಾ ಸಿಬ್ಬಂದಿ ಸೇರಿದಂತೆ 1,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 50 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 4 ಸ್ಕಾನರ್, ಸಂಚಾರ ನಿಯಂತ್ರಣ ವ್ಯವಸ್ಥೆಯನ್ನೂ ಮಾಡಲಾಗಿದೆ. ವೈದ್ಯಕೀಯ, ಅಗ್ನಿಶಾಮಕದಳ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ. ಸುನೀಲ್‌ಕುಮಾರ್ ಮಾಹಿತಿ ನೀಡಿದರು.

ಅಲ್ಲದೆ, ನಗರದ ಹಲವು ಆಸ್ಪತ್ರೆಗಳನ್ನು ಗುರುತಿಸಿ ಸಾಕಷ್ಟು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಆಕಸ್ಮಿಕ ಬೆಂಕಿ ಅವಗಡಗಳನ್ನು ತಡೆಯಲು ಅಗ್ನಿಶಾಮಕ ದಳದೊಂದಿಗೆ ಅಗತ್ಯ ಸಿಬ್ಬಂದಿ ಸೌಲಭ್ಯ ಕಲ್ಪಿಸಲಾಗಿದೆ ಗಣ್ಯ ವ್ಯಕ್ತಿಗಳು, ಅತಿ ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಸೇರಿದಂತೆ ಮೈದಾನದಲ್ಲಿ 10 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು. ಮೈದಾನದ ಭದ್ರತೆಯ ಸಲುವಾಗಿ ಕಳೆದ 15 ದಿನಗಳಿಂದ ನಗರದ ಎಲ್ಲ ಹೊಟೇಲ್, ಲಾಡ್ಜ್‌ಗಳು, ತಂಗುದಾಣಗಳು ಹಾಗೂ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡಿರುವವರ ಮೇಲೆ ಸೂಕ್ತ ನಿಗಾ ವಹಿಸಲಾಗಿದೆ ಎಂದು ಹೇಳಿದರು.

ನಿಷೇಧಿತ ವಸ್ತುಗಳು: ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರಗಳು, ಬಣ್ಣದ ದ್ರಾವಣಗಳು, ವಿಡಿಯೋ ಮತ್ತು ಸ್ಟಿಲ್ ಕ್ಯಾಮರಾಗಳು, ನೀರಿನ ಬಾಟಲ್‌ಗಳು ಹಾಗೂ ಕ್ಯಾನ್‌ಗಳು, ಶಸ್ತ್ರಾಸ್ತಗಳು, ಹರಿತವಾದ ವಸ್ತುಗಳು ಹಾಗೂ ಚಾಕು-ಚೂರಿಗಳು, ಕಪ್ಪು ಕರವಸ್ತ್ರಗಳು, ತಿಂಡಿ- ತಿನಿಸುಗಳು, ಮದ್ಯದ ಬಾಟಲ್‌ಗಳು, ಮಾದಕ ವಸ್ತುಗಳು, ಬಾವುಟಗಳು, ಪಟಾಕಿ ಮತ್ತು ಸ್ಫೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

ಪ್ರವೇಶ ದ್ವಾರದ ಮಾಹಿತಿ: ಗೇಟ್-1ರಲ್ಲಿ ಗಣ್ಯ ವ್ಯಕ್ತಿಗಳು, ಸ್ವಾತಂತ್ರ ಹೋರಾಟಗಾರರು, ರಕ್ಷಣಾ ಇಲಾಖೆ ಅಧಿಕಾರಿಗಳು, ಪತ್ರಿಕಾ ಪ್ರತಿನಿಧಿಗಳು. ಗೇಟ್-2ರಲ್ಲಿ ಅತಿ ಗಣ್ಯ ವ್ಯಕ್ತಿಗಳು. ಗೇಟ್-3ರಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್ ಅಧಿಕಾರಿಗಳು ಮತ್ತು ಗೇಟ್-4ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ನಿರ್ದಿಷ್ಟ ಬೆದರಿಕೆ ಇಲ್ಲ
72 ನೆ ಸ್ವಾತಂತ್ರೋತ್ಸವಕ್ಕೆ ಬಾಂಬ್ ದಾಳಿ ಇದೆ ಎಂಬ ನಿರ್ದಿಷ್ಟವಾದ ಬೆದರಿಕೆ ಇಲ್ಲ. ಆದುದರಿಂದ ಯಾರೂ ಆತಂಕ, ಭಯ ಪಡಬೇಕಾದ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತಮುತ್ತಲು ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ
-ಸುನೀಲ್ ಕುಮಾರ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News