ಅನುಮೋದನೆಗೊಳ್ಳದ ಕಾಲೇಜುಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ
ಬೆಂಗಳೂರು, ಆ.13: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಅಖಿತ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆಯಿಂದ(ಎಐಸಿಟಿಇ) ಅನುಮೋದನೆಗೊಳ್ಳದಿರುವ ಅತಿ ಹೆಚ್ಚು ಕಾಲೇಜುಗಳಿವೆ ಎಂದು ತಿಳಿದುಬಂದಿದೆ.
ಆಗಸ್ಟ್ ಆರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆ ಮಾಡಿದ ದಾಖಲೆ ಪ್ರಕಾರ, ಕರ್ನಾಟಕದಲ್ಲಿ 23 ಉನ್ನತ ಶಿಕ್ಷಣ ಸಂಸ್ಥೆಗಳು ಎಐಸಿಟಿಇಯಿಂದ ಅನುಮೋದನೆಗೊಂಡಿಲ್ಲ. ದೇಶದಲ್ಲಿ ಒಟ್ಟಾರೆ ಒಟ್ಟು 277 ಅನುಮೋದನೆಯಾಗದಿರುವ ಕಾಲೇಜುಗಳಿವೆ.
ಎಐಸಿಟಿಇ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅನುಮೋದನೆಗೊಳ್ಳದಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದಾಖಲಾತಿ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ ಮತ್ತು ಇಂತಹ ಶಿಕ್ಷಣ ಸಂಸ್ಥೆಗಳನ್ನು ಪರೀಕ್ಷಿಸುವಂತೆ ಮತ್ತು ಅನುಮೋದನೆಗೊಳ್ಳದಿರುವ ಸಂಸ್ಥೆಗಳನ್ನು ಮುಚ್ಚಿ ಹೊಸ ಪಟ್ಟಿ ಬಿಡುಗಡೆ ಮಾಡುವಂತೆ ಕೇಂದ್ರ ತನಿಖಾ ಸಂಸ್ಥೆ ಕರ್ನಾಟಕ ಸರಕಾರಕ್ಕೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಈ ಸಂಬಂಧ ರಾಜ್ಯ ಸರಕಾರ ಇದುವರೆಗೂ ಯಾವುದೇ ತನಿಖೆ ಕೈಗೆತ್ತಿಕೊಂಡಿಲ್ಲ ಹಾಗೂ ಪಟ್ಟಿಯಲ್ಲಿ ಸೂಚಿಸಿರುವ ಕೆಲವು ಇತ್ತೀಚಿನ ಕಾಲೇಜುಗಳಲ್ಲಿ ಹೆಸರು ಮತ್ತು ವಿಳಾಸಗಳನ್ನು ಬದಲಿಸಿದ್ದರೆ, ಮತ್ತೊಂದಿಷ್ಟು ಕಾಲೇಜುಗಳಿಗೆ ಬೀಗ ಜಡಿಯಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚನೆ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ, ಅನುಮೋದನೆ ಪಡೆಯದಿರುವ ಶಿಕ್ಷಣ ಸಂಸ್ಥೆಗಳನ್ನು ಆಧರಿಸಿ ಪಟ್ಟಿ ತಯಾರಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಾವಿದನ್ನು ಘೋಷಿಸುತ್ತಿದ್ದೇವೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ತಿಳಿಸಿ ಅವುಗಳನ್ನು ಮುಚ್ಚುವಂತೆ ಹೇಳುತ್ತೇವೆ ಎಂದು ಹೇಳಿದ್ದಾರೆ.
ಪಟ್ಟಿಯಲ್ಲಿರುವ ಕಾಲೇಜುಗಳಲ್ಲಿ ಕೆಲವು ಸ್ವಯಂಪ್ರೇರಿತವಾಗಿ ಮುಚ್ಚಿಕೊಂಡಿವೆ. ಮತ್ತೊಂದಿಷ್ಟು ಕಾಲೇಜುಗಳು ಬೇರೆ ಕೋರ್ಸ್‌ಗಳಿಗೆ ಬದಲಿಸಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ. ಅನುಮೋದನೆಗೊಳ್ಳದ ಕಾಲೇಜು ವಿವರಗಳಿಗಾಗಿ ಆಸಕ್ತರು www.aicte-india.org ಇಲ್ಲಿಗೆ ಭೇಟಿ ನೀಡಬಹುದು.