ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆದೇ ಇಲ್ಲ ಎಂದು ಪತ್ರಕರ್ತ ಹೇಳಿದ್ದು ನಿಜವೇ ?

Update: 2018-08-13 18:40 GMT

ಆಗಸ್ಟ್ 13ರಂದು ಮಧ್ಯಾಹ್ನ ಜೆಎನ್‍ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮೇಲೆ ಅಪರಿಚಿತ ಆಕ್ರಮಣಕಾರರು ಗುಂಡುಹಾರಿಸಿದ್ದಾರೆ ಎಂಬ ವರದಿ ಹರಡಿತು. ವರದಿಗಳ ಪ್ರಕಾರ, ಕಾನ್‍ಸ್ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯಾದ ಹೊರಗೆ ಈ ದಾಳಿ ನಡೆಯಿತು. ಖಾಲಿದ್ ಯಾವುದೇ ಗಾಯಗಳಿಲ್ಲದೇ ಪಾರಾದರೆ, ಆಕ್ರಮಣಕಾರರು ಶಸ್ತ್ರಾಸ್ತ್ರಗಳು ಎಸೆದು ಪರಾರಿಯಾದರು.
ಸಾಮಾಜಿಕ ಜಾಲತಾಣಗಳಲ್ಲಿ ಈ ದಿಢೀರ್ ಬೆಳವಣಿಗೆಗೆ ಕ್ಷಿಪ್ರ ಪ್ರತಿಕ್ರಿಯೆ ಬಂತು. ತಕ್ಷಣ ಹರಿದಾಡಲಾರಂಭಿಸಿದ ವೀಡಿಯೊ ಒಂದರಲ್ಲಿ, ದೈನಿಕ್ ಭಾಸ್ಕರ್ ಪತ್ರಕರ್ತ ಸಂತೋಷ್ ಕುಮಾರ್, ಕಾನ್‍ಸ್ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯಾದ ಹೊರಗೆ ಗುಂಡಿನ ದಾಳಿ ನಡೆದರೂ, ಉಮರ್ ಖಾಲಿದ್ ಈ ಸಂದರ್ಭದಲ್ಲಿ ಘಟನೆ ನಡೆದ ಸ್ಥಳದಲ್ಲಿರಲಿಲ್ಲ ಎಂದು ಹೇಳಿಕೊಂಡರು.

ಸಂತೋಷ್ ಹೇಳಿಕೊಂಡಂತೆ, ಕಾನ್‍ಸ್ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯಾ ಪ್ರವೇಶದ್ವಾರದ ಬಳಿ ಚಹಾ ಅಂಗಡಿಯ ಎದುರು ಇಬ್ಬರು ವ್ಯಕ್ತಿಗಳ ನಡುವಿನ ಹೊಡೆದಾಟಕ್ಕೆ ಅವರು ಸಾಕ್ಷಿಯಾಗಿದ್ದರು. ದಾಳಿಕೋರನ ಕೈಯಲ್ಲಿ ಬಂದೂಕು ಇತ್ತು. ಆತ ಮತ್ತೊಬ್ಬನನ್ನು ನೆಲಕ್ಕೆ ಬೀಳಿಸಿ, ಆತನಿಗೆ ಇನ್ನೇನು ಗುಂಡು ಹೊಡೆಯುವುದರಲ್ಲಿದ್ದ. ಆದರೆ ಇತರರು ಅದನ್ನು ತಡೆದರು. ಸ್ವಲ್ಪದೂರದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಆತ ಪರಾರಿಯಾದ. ಈ ಹೊಡೆದಾಟ ನಡೆದಾಗ ಉಮರ್ ಖಾಲಿದ್ ಸ್ಥಳದಲ್ಲಿರಲಿಲ್ಲ. ಖಾಲಿದ್ ಕಾನ್‍ಸ್ಟಿಟ್ಯೂಶನ್ ಕ್ಲಬ್ ಕಟ್ಟಡದಿಂದ ಆ ಬಳಿಕ ಬಂದರು ಎನ್ನುವುದು ಅವರ ಪ್ರತಿಪಾದನೆ.

ಈ ವೀಡಿಯೊ ಪೋಸ್ಟ್ ಮಾಡಿದ ವಿಕಾಸ್ ಭಡೌರಿಯಾ, ಎಬಿಪಿ ನ್ಯೂಸ್‍ನ ಪತ್ರಕರ್ತ. ಕಣ್ಣೆವೆಯಿಕ್ಕುವಷ್ಟರಲ್ಲಿ ಭಡೌರಿಯಾ ಅವರ ಟ್ವೀಟ್ 1600 ಬಾರಿ ಮರುಟ್ವೀಟ್ ಆಗಿತ್ತು ಹಾಗು ಪ್ರಮುಖ ಬಲಪಂಥೀಯ ಸೋಶಿಯಲ್ ಮೀಡಿಯಾ ಬಳಕೆದಾರರು "ಪ್ರತ್ಯಕ್ಷದರ್ಶಿಗಳ ಹೇಳಿಕೆ" ಆಧಾರದಲ್ಲಿ ಖಾಲಿದ್ ದಾಳಿಯ ನಾಟಕವಾಡಿದ್ದಾರೆ ಎಂದು ದೃಢವಾಗಿ ಹೇಳಿದರು. ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಕೂಡಾ ಸಂತೋಷ್ ಕುಮಾರ್ ವೀಡಿಯೊವನ್ನು ಶೇರ್ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರ್‍ನಲ್ಲಿ ಅನುಸರಿಸುವವರು ಕೂಡಾ ಹಾಗೆಯೇ ಮಾಡಿದರು. ದಾಳಿ ನಡೆದ ಸ್ಥಳದಲ್ಲಿ ಖಾಲಿದ್ ಇರಲೇ ಇಲ್ಲ ಎಂಬ ವಾದಸರಣಿ ಫೇಸ್‍ಬುಕ್‍ನಲ್ಲೂ ಹರಡಲಾರಂಭಿಸಿತು.

ಉಲ್ಟಾ ಹೊಡೆದ ಸಂತೋಷ್ ಕುಮಾರ್
ಘಟನಾ ಸ್ಥಳದಲ್ಲಿದ್ದ ಪತ್ರಕರ್ತ ಸಂತೋಷ್ ಕುಮಾರ್ ಹಾಗು ಅವರ ಕ್ಯಾಮೆರಾದಲ್ಲಿ ಸೆರೆಹಿಡಿದ ಪುರಾವೆಯನ್ನು ಬಲಪಂಥೀಯ ಸೋಶಿಯಲ್ ಮೀಡಿಯಾ ಬಳಕೆದಾರರು ಜನಪ್ರಿಯಗೊಳಿಸಿ, ಖಾಲಿದ್ ನಾಟಕವಾಡಿದ್ದಾರೆ ಎಂದು ಬಿಂಬಿಸಿದರು. ಆದರೆ ಬಳಿಕ ಉಲ್ಟಾ ಹೊಡೆದ ಸಂತೋಷ್ ಕುಮಾರ್, ಆಕ್ರಮಣಕಾರ ಗುರಿ ಮಾಡಿದ್ದ ವ್ಯಕ್ತಿ ಉಮರ್ ಖಾಲಿದ್ ಹೌದೇ ಅಲ್ಲವೇ ಎಂಬ ಬಗ್ಗೆ ನನಗೆ ಖಾತ್ರಿ ಇಲ್ಲ ಎಂದು ಹೇಳಿಕೊಂಡರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮೊದಲು ಕುಮಾರ್ ಹೇಳಿದಂತೆ ಘಟನೆ ನಡೆದಾಗ ಖಾಲಿದ್ ಸ್ಥಳದಲ್ಲಿರಲಿಲ್ಲ. ಕಾನ್‍ಸ್ಟಿಟ್ಯೂಷನ್ ಕ್ಲಬ್‍ನ ಹೊರಗೆ ನಡೆದ ಘಟನಾವಳಿಯ ಬಗ್ಗೆ ಉಮರ್ ಖಾಲಿದ್ ಏನು ಹೇಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಆಲ್ಟ್ ನ್ಯೂಸ್ ಅವರನ್ನು ಸಂಪರ್ಕಿಸಿತು. "ಕಾನ್‍ಸ್ಟಿಟ್ಯೂಷನ್ ಕ್ಲಬ್ ಹೊರಗಿನ ಚಹಾ ಅಂಗಡಿ ಪಕ್ಕದಲ್ಲಿ ಈ ಘಟನೆ ನಡೆಯಿತು. ನಾವು ಹೊರಡಲು ಅನುವಾಗುತ್ತಿದ್ದಾಗ, ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ನನ್ನ ಕುತ್ತಿಗೆ ಹಿಡಿದು ಹೊಡೆದ. ನಾನು ಕೆಳಕ್ಕೆ ಬಿದ್ದೆ. ಆತ ಪಿಸ್ತೂಲ್ ಹೊರತೆಗೆದು ನನ್ನತ್ತ ಗುರಿ ಮಾಡಲು ಪ್ರಯತ್ನಿಸಿದ. ನನ್ನ ತಕ್ಷಣದ ಪ್ರತಿಕ್ರಿಯೆ, ಆತ ಗುರಿ ಮಾಡಲು ಅವಕಾಶ ನೀಡದಿರುವುದು ಮತ್ತು ಆತನ ಕೈಯನ್ನು ಎಳೆಯುವುದು. ನನ್ನ ಸ್ನೇಹಿತರು ಕೂಡಾ ಪ್ರತಿರೋಧ ಒಡ್ಡಿ ಆತನನ್ನು ಪಕ್ಕಕ್ಕೆ ತಳ್ಳಿದರು. ಆತ ಬಳಿಕ ಸ್ಥಳದಿಂದ ಓಡಿಹೋದ" ಎಂದು ಖಾಲಿದ್ ವಿವರ ನೀಡಿದರು. ಸುದ್ದಿಗಾರರೊಂದಿಗೆ ಉಮರ್ ಖಾಲಿದ್ ಮಾತನಾಡಿ, ಘಟನೆಯನ್ನು ವಿವರಿಸುವ ವೀಡಿಯೊ ಕೂಡಾ ಬಳಿಕ ಪತ್ತೆಯಾಯಿತು.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಖಾಲಿದ್ ಹೇಳಿದ ಘಟನಾವಳಿ ವಿವರ, ಸಂತೋಷ್ ಕುಮಾರ್ ಹೇಳಿಕೊಂಡ ವಾದಸರಣಿಗೆ ತಾಳೆಯಾಗುತ್ತದೆ. ಆದರೆ ಒಂದು ಪ್ರಮುಖ ವ್ಯತ್ಯಾಸವೆಂದರೆ, ಖಾಲಿದ್ ಅವರ ಪ್ರಕಾರ, ದಾಳಿಗೊಳಗಾದ ವ್ಯಕ್ತಿ ಸ್ವತಃ ಅವರು. ಆದರೆ ಸಂತೊಷ್ ಮೊದಲು ಹೇಳಿದಂತೆ ಖಾಲಿದ್ ಸ್ಥಳದಲ್ಲೇ ಇರಲಿಲ್ಲ. ಆದರೆ ಬಳಿಕ ಆ ವ್ಯಕ್ತಿ ಯಾರೆಂಬುದು ಖಚಿತವಾಗಿ ತಿಳಿಯದು ಎಂದು ಸಂದೇಹ ವ್ಯಕ್ತಪಡಿಸಿದ್ದರು.

ಕಾನ್‍ಸ್ಟಿಟ್ಯೂಷನ್ ಕ್ಲಬ್ ಬಳಿ ಘಟನೆ ನಡೆದಾಗ ಖಾಲಿದ್ ಜತೆಗಿದ್ದ ಬಾನೋಜ್ಯೋತ್ನ್ಸಾ ಲಹಿರಿ ಅವರನ್ನೂ ಆಲ್ಟ್ ನ್ಯೂಸ್ ಮಾತನಾಡಿಸಿತು. "ಆ ಸ್ಥಳದ ಹೊರಗೆ ನಾವು ಚಹಾ ಕುಡಿಯುತ್ತಿದ್ದೆವು. ನಾನು ಹೋಗುತ್ತಿದ್ದಾಗ, ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಉಮರ್ ನನ್ನು ಹಿಡಿದುಕೊಂಡ. ಆತನ ಸ್ನೇಹಿತ ಇರಬೇಕು ಅಂದುಕೊಂಡೆ. ಆತ ಉಮರ್ ನನ್ನು ಕೆಳಕ್ಕೆ ಬೀಳಿಸಿದ. ನಾನು ಉಮರ್ ಅವರ ಎಡಕ್ಕೆ ನಿಂತಿದ್ದೆ. ಆತ ಬಲಗೈಯಲ್ಲಿ ಬಂದೂಕು ಹಿಡಿದಿದ್ದನ್ನು ಮೊದಲು ನಾನು ಗಮನಿಸಿರಲಿಲ್ಲ. ಆತನನ್ನು ತಳ್ಳಲು ಪ್ರಯತ್ನಿಸಿದೆ. ಆತ ಎರಡು ಹೆಜ್ಜೆ ಹಿಂದಕ್ಕೆ ಹೋಗಿ ಬಂದೂಕು ಝಳಪಿಸಿದ. ಆತ ಹಿಂದೆ ಹೋಗುತ್ತಿದ್ದಾಗ, ಆತನ ಕೈಯಲ್ಲಿ ಬಂದೂಕು ಇದ್ದುದು ಗೊತ್ತಾಯಿತು. ಬಳಿಕ ಆತ ಓಡಲಾರಂಭಿಸಿದ. ಉಮರ್ ಅವರನ್ನು ಸುರಕ್ಷಿತವಾಗಿ ಕಾನ್‍ಸ್ಟಿಟ್ಯೂಷನ್ ಕ್ಲಬ್ ಗೇಟ್ ಒಳಕ್ಕೆ ಕರೆದೊಯ್ದೆವು. ಆ ಬಳಿಕ ನಾವು ಮೂವರು ದಾಳಿಕೋರನ ಹಿಂದೆ ಓಡಿದೆವು. ಆದರೆ ಆ ವೇಳೆಗಾಗಲೇ ಆತ ದೂರ ಕ್ರಮಿಸಿದ್ದ. ಗಾಳಿಯಲ್ಲಿ ಗುಂಡು ಹಾರಿಸಿದ್ದು ಕೇಳಿಸಿತು. ಆತ ತಪ್ಪಿಸಿಕೊಂಡ. ಆದರೆ ದಾರಿಯಲ್ಲಿ ಬಂದೂಕು ಬಿದ್ದಿದ್ದನ್ನು ನಾವು ನೋಡಿದೆವು" ಎಂದು ಅವರು ವಿವರ ಬಿಚ್ಚಿಟ್ಟರು.

ಘಟನಾ ಸ್ಥಳದಲ್ಲಿ ಉಮರ್ ಖಾಲಿದ್ ಜತೆಗಿದ್ದ ಮತ್ತೊಬ್ಬ ಪ್ರತ್ಯಕ್ಷದರ್ಶಿ ಶಾರಿಕ್ ಹುಸೇನ್ ಆಲ್ಟ್‍ನ್ಯೂಸ್ ಜತೆಗೆ ಮಾತನಾಡಿ, "ನಾವು ಚಹಾ ಸೇವಿಸಿ ಹೊರಡುತ್ತಿದ್ದಾಗ, ಒಬ್ಬ ವ್ಯಕ್ತಿ ಖಾಲಿದ್‍ನ ಕತ್ತು ಹಿಡಿದು, ಆತನನ್ನು ಕೆಳಕ್ಕೆ ಬೀಳಿಸಿದ. ಕೈಯಲ್ಲಿದ್ದ ಬಂದೂಕಿನಿಂದ ಖಾಲಿದ್‍ನ ಹೊಟ್ಟೆಗೆ ಒತ್ತಿದ. ತಕ್ಷಣ ನಾನು ಆಕ್ರಮಣಕಾರನ ಕೈಗೆ ಒದೆದೆ. ತಕ್ಷಣ ಆತ ಅಲ್ಲಿಂದ ಕಾಲು ಕಿತ್ತ. ಸ್ವಲ್ಪದೂರದವರೆಗೂ ಆತನನ್ನು ಅಟ್ಟಿಸಿಕೊಂಡು ಹೋದೆ. ಆತ ನನ್ನತ್ತ ತಿರುಗಿ ಗುಂಡು ಹಾರಿಸಿದ. ಆ ಬಳಿಕ ಬಲಕ್ಕೆ ಬಂದೂಕು ಎಸೆದು ಸ್ಥಳದಿಂದ ಪರಾರಿಯಾದ" ಎಂದು ಹೇಳಿದರು.

ಉಮರ್ ಖಾಲಿದ್ ಸೇರಿದಂತೆ ಘಟನಾ ಸ್ಥಳದಲ್ಲಿದ್ದ ಎಲ್ಲ ಮೂವರ ಹೇಳಿಕೆಗಳು ಕೂಡಾ ಒಂದಕ್ಕೊಂದು ಹೊಂದಿಕೆಯಾಗುತ್ತವೆ. ಘಟನಾವಳಿಗಳ ಅನುಕ್ರಮಣಿಕೆ ಕೂಡಾ ಬಹುತೇಕ ಸಂತೋಷ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಹೇಳಿಕೆಯನ್ನು ಹೋಲುತ್ತದೆ. ಆದರೆ ಖಾಲಿದ್ ಸ್ಥಳದಲ್ಲಿರಲಿಲ್ಲ. ಆ ಬಳಿಕ ಸ್ಥಳಕ್ಕೆ ಬಂದರು ಎನ್ನುವುದು ಕುಮಾರ್ ಹೇಳಿಕೆ. ಆದರೆ ಇದು ಪ್ರತ್ಯಕ್ಷದರ್ಶಿಗಳ ಹೇಳಿಕೆಗೆ ತದ್ವಿರುದ್ಧ. ಅವರ ಪ್ರಕಾರ, ದಾಳಿಯ ಪ್ರಮುಖ ಗುರಿಯೇ ಖಾಲಿದ್. ಬಳಿಕ ಸಂತೋಷ್ ಕುಮಾರ್ ಟ್ವೀಟ್ ಮಾಡಿ, ದಾಳಿಗೊಳಗಾದ ವ್ಯಕ್ತಿ ಉಮರ್ ಖಾಲಿದ್ ಹೌದೇ ಅಥವಾ ಇಲ್ಲವೇ ಎಂಬ ಬಗ್ಗೆ ನನಗೆ ಖಾತ್ರಿ ಇಲ್ಲ ಎಂದು ಹೇಳಿದ್ದರು.

ಘಟನೆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ನಿಜಕ್ಕೂ ಕಳವಳಕಾರಿ ಅಂಶವೆಂದರೆ, ಘಟನೆಯ ಗಂಭೀರತೆಯನ್ನು ಮರೆಮಾಚುವ ಸಲುವಾಗಿ ಮತ್ತು ತನ್ನ ಮೇಲೆ ದಾಳಿ ನಡೆದಿದೆ ಎಂಬ ಉಮರ್ ಪ್ರತಿಪಾದನೆಯನ್ನು ತಳ್ಳಿಹಾಕುವ ಪ್ರಯತ್ನ ಎಷ್ಟು ಬೇಗ ಸಮಾಜ ಮಾಧ್ಯಮಗಳಲ್ಲಿ ನಡೆಯಿತು ಎನ್ನುವುದು. ಅದು ಕೂಡಾ ಒಬ್ಬ ವರದಿಗಾರನ ಸಾಕ್ಷಿಯ ಮೂಲಕ. ಆದರೆ ಕೊನೆಗೆ ಆ ವರದಿಗಾರ ತನ್ನ ಮೂಲ ಹೇಳಿಕೆಯನ್ನೇ ಅಲ್ಲಗಳೆದಿದ್ದಾರೆ.

ಕೃಪೆ :altnews.in

Writer - ಅರ್ಜುನ್ ಸಿದ್ಧಾರ್ಥ್

contributor

Editor - ಅರ್ಜುನ್ ಸಿದ್ಧಾರ್ಥ್

contributor

Similar News