ರಾಷ್ಟ್ರೀಯ ಹಬ್ಬಗಳ ಆಚರಣೆ ಹೇಗಿರಬೇಕು?

Update: 2018-08-14 05:03 GMT

ದೇಶವೆಂದರೆ ಅದು ಬರೀ ಮಣ್ಣಲ್ಲ, ಗಡಿರೇಖೆಗಳಲ್ಲ, ದೇಶವೆಂದರೆ ಮನುಷ್ಯರು. ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನ ಅಭಿವೃದ್ಧ್ದಿಯಾಗದೇ ದೇಶದ ಅಭಿವೃದ್ಧಿಯಾಗದು. ನಿಜವಾದ ದೇಶ ಪ್ರೇಮವೆಂದರೆ ಒಬ್ಬ ನಾಗರಿಕ ತನ್ನ ದೇಶದ ಎಲ್ಲಾ ಜನರಿಗೆ ತೋರುವ ಪ್ರೀತಿಯ ಮತ್ತು ಗೌರವದ ಭಾವ. ಭಾರತದ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ ದಿನಾಚರಣೆ ಮತ್ತು ಗಣರಾಜೋತ್ಸವವನ್ನು ಪ್ರತಿ ವರ್ಷ ಬಹಳ ಹೆಮ್ಮೆಯಿಂದ ಮತ್ತು ವಿಜೃಂಭಣೆಯಾಗಿ ಆಚರಿಸಲಾಗುತ್ತದೆ. ಈ ದಿನಗಳು ಪ್ರತಿಯೊಬ್ಬ ನಾಗರಿಕನೂ ದೇಶ ಮತ್ತು ಸಮಾಜಕ್ಕೆ ಸೇವೆಗೈದ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವ ಮತ್ತು ಅವರ ಶ್ರದ್ಧೆಗೆ ಭಾವ ಪೂರ್ವಕ ನಮನಗಳನ್ನು ಸಲ್ಲಿಸುವಂತಹ ಮಹತ್ವದ ದಿನಗಳು.

ಸರಕಾರಿ ಮತ್ತು ಖಾಸಗಿ ಸ್ವಾಮ್ಯದ ಹಾಗೂ ಇತರ ಸಂಸ್ಥೆಗಳ ಎಲ್ಲಾ ವರ್ಗದ ನೌಕರರು ಮತ್ತು ಸಿಬ್ಬಂದಿ ಈ ದಿನವನ್ನು ಗೌರವಪೂರ್ವಕವಾಗಿ ಮತ್ತು ಆದರ್ಶವಾಗಿ ಆಚರಿಸಲೇಬೇಕೆನ್ನುವ ನಿಯಮವಿದೆ. ಆದರೆ ಕೆಲವೊಂದು ಸಂಸ್ಥೆಯ ಕೆಲವು ವ್ಯಕ್ತಿಗಳು ಅಥವಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ನೌಕರವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಇದು ರಾಷ್ಟ್ರೀಯತೆಗೆ ಮತ್ತು ದೇಶಭಕ್ತಿಗೆ ಇರಬೇಕಾದ ಧನಾತ್ಮಕ ಮನೋಭಾವನೆ ಈ ವ್ಯಕ್ತಿಗಳಲ್ಲಿ ಇಲ್ಲದಿರುವುದನ್ನು ಕಾಣಿಸುತ್ತದೆ. ಹಾಗಾಗಿ ರಾಷ್ಟ್ರೀಯ ಹಬ್ಬಗಳನ್ನು ಪ್ರಾಮಾಣಿಕವಾಗಿ ದುಡಿಯುವ ಪ್ರಮಾಣಗಳನ್ನು ಮಾಡುವುದರ ಜೊತೆಗೆ, ದೇಶ ರಕ್ಷಿಸುವ ದೃಢ ನಿರ್ಧಾರಗಳನ್ನು ಕೈಗೊಳ್ಳುವುದರೊಂದಿಗೆ ಎಲ್ಲಾ ಸರಕಾರಿ, ಖಾಸಗಿ ಮತ್ತು ಅರೆಸರಕಾರಿ ಹೀಗೆ ಎಲ್ಲಾ ಸಂಘಸಂಸ್ಥೆಗಳ ಕಚೇರಿಗಳಲ್ಲಿ ಹಾಗೂ ಎಲ್ಲಾ ಧಾರ್ಮಿಕ ಸಂಸ್ಥೆಗಳಲ್ಲಿಯೂ ಈ ಆಚರಣೆಗಳು ಮಾಡುವುದು ಅವಶ್ಯಕವೆನಿಸುತ್ತದೆ. ಏಕೆಂದರೆ ದೇಶಪ್ರೇಮ ಮತ್ತು ದೇಶಭಕ್ತಿಯೂ ದೇಶದ ಎಲ್ಲಾ ನಾಗರಿಕರ ಸರ್ವೋಚ್ಚ ಧಾರ್ಮಿಕತೆಯ ಮೂಲ. ಅದರ ಜೊತೆಗೆ ಎಲ್ಲಾ ಕಚೇರಿಗಳು ಮತ್ತು ಸಂಘಸಂಸ್ಥೆಗಳು ರಜೆ ಘೋಷಿಸದೆ ಒಂದು ಗಂಟೆ ಹೆಚ್ಚಿನ ಕೆಲಸ ಮಾಡುವುದು ನಿಜವಾದ ದೇಶ ಪ್ರೇಮವಾದೀತು, ಈಗಾಗಲೇ ಕೆಲವು ದೇಶಗಳು ಈ ಪ್ರವೃತ್ತಿಯನ್ನು ರೂಢಿಸಿಕೊಂಡಿವೆ. ಕೆಲವು ಮುಂದುವರಿದ ದೇಶಗಳಲ್ಲಿ ತಮ್ಮ ರಾಷ್ಟ್ರೀಯ ಹಬ್ಬಗಳಂದು ನವೀನ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಾಗುತ್ತದೆ. ಇದೇ ರೀತಿಯಾಗಿ ನಮ್ಮಲ್ಲಿಯೂ ಹೊಸ ಕಾರ್ಯಕ್ರಮಗಳ ಚಾಲನೆ, ವಿವಿಧ ವಿಭಾಗಗಳಲ್ಲಿ ಮತ್ತು ಸ್ತರಗಳಲ್ಲಿ ದೇಶ ಸಾಧನೆಗೈದ ಅಂಶಗಳ ಪಟ್ಟಿ ಬಿಡುಗಡೆ ಮಾಡುವುದು, ದೇಶಕ್ಕಿರುವ ಸವಾಲುಗಳು ಮತ್ತು ಅವಕಾಶಗಳು, ಹಿಂದಿನ ವರ್ಷದಲ್ಲಿ ಸಾಧಿಸಿದ ದಾರಿ, ಮಟ್ಟ ಹೀಗೆ ಎಲ್ಲವನ್ನು ವ್ಯವಸ್ಥಿತವಾದ ಪಟ್ಟಿ ಬಿಡುಗಡೆ ಮಾಡುವ ಸಂಪ್ರದಾಯ ನಮ್ಮಲ್ಲಿ ಬೆಳೆಯಬೇಕಿದೆ. ನಿರ್ದಿಷ್ಟ ಅಂಕಿ ಅಂಶಗಳ ಆಧಾರದ ಮೇಲೆ ಮುಂದಿನ ವರ್ಷಕ್ಕೆ ಮತ್ತು ಮುಂದಿನ ಪೀಳಿಗೆಗೆ ಯಾವ ಉದ್ದೇಶಗಳನ್ನು ಹಾಕಿಕೊಳ್ಳಬೇಕಾಗಿದೆ ಎನ್ನುವ ಅಂಶಗಳನ್ನು ತಿಳಿಸುತ್ತಾ ದೇಶದ ನಾಗರಿಕರಿಗೆ ತಮ್ಮ ಕೊಡುಗೆ ಮತ್ತು ಪಾತ್ರದ ಬಗ್ಗೆ ಮನವರಿಕೆ ಮಾಡಬೇಕಿದೆ.

ಪ್ರತಿ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಹಾಗೂ ಇತರ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಆಚರಿಸಲಾಗುವ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳ ಭಾಷಣದ ಸಾರವೇ ಪ್ರಸ್ತುತ ಸ್ಥಿತಿಗತಿಗಳ ಅವಲೋಕನ ಮತ್ತು ಭವಿಷ್ಯದ ದೃಷ್ಟಿಕೋನದ ಚಿಂತನೆಯ ಕುರಿತಾಗಿರಬೇಕು.

ಆ ದಿನದಂದು ಜನರಿಂದ ಮತ್ತು ಸಂಘಸಂಸ್ಥೆಗಳಿಂದ ದೇಶದ ಅಭಿವೃದ್ಧಿಗೆ ಪೂರಕವಾಗಿ ತಮ್ಮ ಕೈಲಾಗುವಷ್ಟು ಸಹಾಯ ನೀಡುವಂತಹ ಕಾರ್ಯಕ್ರಮಗಳಾದ ಶಾಲೆಯನ್ನು ದತ್ತು ಪಡೆದುಕೊಳ್ಳುವುದು, ಸರಕಾರಿ ಸಂಸ್ಥೆಗಳಿಗೆ ಭೂದಾನ ನೀಡುವಂತಹದು, ಇತರ ಅಭಿವೃದ್ಧಿ ಕಾರ್ಯಗಳಿಗೆ ಅವಶ್ಯಕವಿರುವ ಹಣ ಸಂಗ್ರಹಣೆ, ಒಂದು ದಿನದ ಸಂಬಳ ನೀಡುವ ಮತ್ತು ವಿಶೇಷ ಜ್ಞಾನ, ಕೌಶಲಗಳನ್ನು ಹೊಂದಿದ ವ್ಯಕ್ತಿಗಳು ಮುಕ್ತವಾಗಿ ಇತರರಿಗೆ ಅವುಗಳನ್ನು ಹೇಳಿಕೊಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು. ಪ್ರತಿ ಗ್ರಾಮ, ತಾಲೂಕು, ಜಿಲ್ಲೆ ಮತ್ತು ರಾಜ್ಯವಾರು ಅಭಿವೃದ್ಧ್ದಿಯನ್ನು ಅವಲೋಕನ ಮಾಡಿಕೊಳ್ಳುವ ಸೂಕ್ತ ಸಮಯವೇ ರಾಷ್ಟ್ರೀಯ ಹಬ್ಬಗಳ ದಿನಾಚರಣೆಗಳಾಗಬೇಕು. ಪ್ರಪಂಚದ ವಿದ್ಯಮಾನಗಳಿಗೆ ಹೋಲಿಕೆ ಮಾಡಿಕೊಳ್ಳುತ್ತಾ ಜನರಲ್ಲಿ ದೇಶದ ಬೆಳವಣಿಗೆಯ ಕುರಿತು ಅರಿವನ್ನು ಮೂಡಿಸುವುದು ಮತ್ತು ಆ ಅಭಿವೃದ್ಧಿಯೆಡೆಗೆ ಕಾರ್ಯ ಪ್ರವೃತ್ತರಾಗಲು ಕಿಚ್ಚನ್ನು ಹಚ್ಚಬೇಕಿದೆ ಹಾಗೂ ಹಿಂದಿನ ವರ್ಷದಲ್ಲುಂಟಾದ ತಪ್ಪುಗಳ ಬಗ್ಗೆ ಮನವರಿಕೆಯೂ ಮಾಡಿಕೊಡಬೇಕಿದೆ. ಜಾತೀಯತೆ ತೊಲಗಿಸುವ, ಧರ್ಮಾಂಧತೆ ಕೊನೆಗೊಳಿಸುವ, ಭ್ರಷ್ಟತೆಯನ್ನು ಕಿತ್ತುಹಾಕುವ, ಸರ್ವರನ್ನು ಸಮಾನವಾಗಿ ಕಾಣುವ ಮತ್ತು ಭ್ರಾತೃತ್ವಭಾವದಿಂದ ಜೀವನ ನಡೆಸುವ ಸಂಕಲ್ಪಗಳನ್ನು ಮಾಡುವ ಅವಶ್ಯಕತೆ ಎದ್ದು ಕಾಣುತ್ತದೆ.

ಇದನ್ನು ಬಿಟ್ಟು ಕೇವಲ ತೋರಿಕೆಗೆ ರಾಷ್ಟ್ರ ಧ್ವಜವನ್ನು ವಾಹನಗಳಿಗೆ ಸಿಕ್ಕಿಸಿಕೊಂಡು ಮನಸ್ಸಿನ ಭಾವದಲ್ಲಿ ದೇಶ ಪ್ರೇಮ ಮೂಡಿಸಿಕೊಳ್ಳದೆ, ದೇಶಭಕ್ತಿಯ ತೋರಿಕೆಯ ಹೇಳಿಕೆಗಳನ್ನು ಕೂಗುವುದರಿಂದ ಏನೇನು ಪ್ರಯೋಜನವಿಲ್ಲ. ದೇಶದ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದ ಎಷ್ಟೋ ವಿದ್ಯಾವಂತರು ಹಾಗೂ ಉದ್ಯೋಗವಂತರು ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳದೆ ರಜಾ ದಿನಗಳಾಗಿ ಪರಿಗಣಿಸಿ ಮನರಂಜನಾತ್ಮಕವಾಗಿ ಕಳೆಯುತ್ತಿದ್ದಾರೆ, ಹಾಗಾದರೆ ಇವರು ದೇಶಕ್ಕೆ ನೀಡುವ ಗೌರವದ ಕುರಿತಾದ ಬದ್ಧತೆಯ ಪ್ರಶ್ನೆ ಎದುರಾಗುತ್ತದೆ ಹಾಗೂ ಬದ್ಧತೆಯಿಲ್ಲದೆ ದೇಶಕ್ಕೆ ಕೊಡುಗೆ ಕೊಡುವುದಾದರೂ ಹೇಗೆ? ಸ್ವಾತಂತ್ರ ಬಂದು 71 ವರ್ಷಗಳಾದರೂ ಆಚರಿಸುವ ಪರಿ ಇನ್ನೂ ಬದಲಾಗಿಲ್ಲ, ಅದು ಬದಲಾಗಬೇಕಿದೆ. ಪ್ರತಿ ಬಾರಿ ರಾಷ್ಟ್ರಧ್ವಜವನ್ನು ನೋಡುವಾಗ, ರಾಷ್ಟ್ರಗೀತೆ ಕೇಳುವಾಗ ಮತ್ತು ಹೇಳುವಾಗ ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಒಂದೇ ಪ್ರಶ್ನೆಯೆಂದರೆ, ನಾನು ದೇಶಕ್ಕೆ ಏನು ಕೊಡುಗೆ ನೀಡಿದೆ? ಎಂಬುದು. ಈ ಕುರಿತು ಮಾನ್ಯ ಪ್ರಧಾನ ಮಂತ್ರಿಗಳಿಗೆ ಮತ್ತು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ನಿಯಮ ರೂಪಿಸಿ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಬದಲಾವಣೆಯನ್ನು ತರಲು ಕೋರಲಾಗಿದೆ. ಗೌರವಾನ್ವಿತ ರಾಷ್ಟ್ರಪತಿಗಳು ಸದರಿ ಮನವಿಯನ್ನು ರಾಜ್ಯಗಳಿಗೆ ರವಾನಿಸಿದ್ದು ಸೂಕ್ತ ನಿಯಮ ರೂಪಿಸಲು ಆದೇಶಿಸಲಾಗಿರುವ ಮಾಹಿತಿ ಕೂಡ ದೊರೆತಿದ್ದು ಅದಕ್ಕೆ ಎಲ್ಲರ ಸಮ್ಮತಿಯ ಅವಶ್ಯಕತೆಯೂ ಕೂಡ ಇದೆ.

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News