ಲೋಕಸಭೆ ಜೊತೆಗೆ ವಿಧಾನಸಭಾ ಚುನಾವಣೆ ಸಾಧ್ಯವಿಲ್ಲ: ಚು.ಆಯೋಗ

Update: 2018-08-14 07:32 GMT

ಬೆಂಗಳೂರು, ಆ.14: ಮುಂಬರುವ 2019ರ ಲೋಕಸಭಾ ಚುನಾವಣೆಯ ಜೊತೆಗೆ 11 ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಓ.ಪಿ. ರಾವತ್ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.

 ಬಿಜೆಪಿ ಆಡಳಿತವಿರುವ ರಾಜ್ಯಗಳ ಜೊತೆಗೆ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ರಾಜ್ಯ ಗಳ ಚುನಾವಣೆಯನ್ನು ಲೋಕಸಭಾ ಚುನಾವಣೆಯ ಒಟ್ಟಿಗೆ ನಡೆಸಬೇಕು. ಇದರಿಂದ ಹಣ ಹಾಗೂ ಸಮಯ ವ್ಯರ್ಥವಾಗುವುದನ್ನ್ನು ತಡೆಯಬಹುದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಆದರೆ, ಅಮಿತ್ ಶಾ ಮನವಿಯನ್ನು ತಿರಸ್ಕರಿಸಿರುವ ಚುನಾವಣಾ ಆಯೋಗ,‘‘ಈಗಿನ ಪರಿಸ್ಥಿತಿಯಲ್ಲಿ ಲೋಕಸಭೆಯ ಜೊತೆಗೆ ವಿಧಾನಸಭಾ ಚುನಾವಣೆಯನ್ನು ನಡೆಸಲು ಸಾಧ್ಯವಿಲ್ಲ. ಏಕಕಾಲದಲ್ಲಿ ಚುನಾವಣೆ ನಡೆಸಬೇಕಾದರೆ ಎರಡು ತಿಂಗಳೊಳಗೆ ವಿವಿ ಪ್ಯಾಟ್‌ಗಳನ್ನು ಖರೀದಿಸಲು ಆದೇಶಿಸಬೇಕಾಗುತ್ತದೆ. ಸದ್ಯ ಚುನಾವಣಾ ಆಯೋಗದ ಬಳಿಯಿರುವ ವಿವಿಪ್ಯಾಟ್ ಹಾಗೂ ಇವಿಎಂಗಳಿಂದ ಏಕಕಾಲಕ್ಕೆ ಚುನಾವಣೆ ನಡೆಸುವುದು ಅಸಾಧ್ಯ’ ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

2019ರ ಎಪ್ರಿಲ್-ಮೇನಲ್ಲಿ ಲೋಕಸಭೆ ಚುನಾವಣೆಯ ಜೊತೆಗೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಬಿಜೆಪಿ ಒಲವು ತೋರಿರುವುದಕ್ಕೆ ವಿಪಕ್ಷಗಳಾದ ಕಾಂಗ್ರೆಸ್, ಎಡಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News