ಈ ಸಾಮಾನ್ಯ ತರಕಾರಿ ಅಲ್ಸರ್‌ಗೂ ಚಿಕಿತ್ಸೆ ನೀಡುತ್ತದೆ, ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ

Update: 2018-08-14 11:11 GMT

ಬದನೆ ಭಾರತೀಯ ಅಡುಗೆಮನೆಯಲ್ಲಿ ಸಾಮಾನ್ಯವಾಗಿರುವ ತರಕಾರಿಯಾಗಿದೆ. ಆದರೆ ಬದನೆಯನ್ನು ಇಷ್ಟಪಟ್ಟು ತಿನ್ನುವ ಹೆಚ್ಚಿನವರಿಗೂ ಅದರ ಆರೋಗ್ಯಲಾಭಗಳು ತಿಳಿದಂತಿಲ್ಲ. ತುಂಬ ಪೌಷ್ಟಿಕವಾಗಿರುವ ಅದರಲ್ಲಿರುವ ಆ್ಯಂಥೋಸೈನಿನ್‌ಗಳು ಹೃದಯದ ಆರೋಗ್ಯವನ್ನು ರಕ್ಷಿಸುತ್ತವೆ. ಇನ್ನೊಂದು ಸಂಯುಕ್ತ ನಾಸುನಿನ್ ಮಿದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.

ಬದನೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದು ನೈಸರ್ಗಿಕ ಮೂತ್ರವರ್ಧಕ ಮತ್ತು ವಿರೇಚಕವಾಗಿ ಪರಿಗಣಿಸಲ್ಪಟ್ಟಿದೆ.

ಸತುವು,ರಂಜಕ,ಕಬ್ಬಿಣ,ಕ್ಯಾಲ್ಸಿಯಂ ಹಾಗೂ ಬಿ1,ಬಿ2,ಬ3 ಮತ್ತು ಬಿ6 ಇತ್ಯಾದಿ ಬಿ ಕಾಂಪ್ಲೆಕ್ಸ್ ವಿಟಾಮಿನ್‌ಗಳಂತಹ ಹಲವಾರು ಪೌಷ್ಟಿಕಾಂಶಗಳು ಬದನೆಯಲ್ಲಿವೆ. ಸುಮಾರು 99 ಗ್ರಾಮ್‌ಗಳಷ್ಟು ತೂಗುವ ಒಂದು ಕಪ್ ಬೇಯಿಸಿದ ಬದನೆಯಲ್ಲಿ 35 ಕ್ಯಾಲರಿಗಳು,0.82 ಮಿ.ಗ್ರಾಂ ಪ್ರೋಟಿನ್,8.54 ಗ್ರಾಂ ಕಾರ್ಬೊಹೈಡ್ರೇಟ್‌ಗಳು,0.23 ಗ್ರಾಂ ಕೊಬ್ಬು,2.5 ಗ್ರಾಂ ನಾರು,6 ಮಿ.ಗ್ರಾಂ ಕ್ಯಾಲ್ಸಿಯಂ,1 ಮಿ.ಗ್ರಾಂ ಸೋಡಿಯಂ,188 ಮಿ.ಗ್ರಾಂ ಪೊಟ್ಯಾಷಿಯಂ,0.12 ಮಿ.ಗ್ರಾಂ ಸತುವು,1.3 ಮಿ.ಗ್ರಾಂ ವಿಟಾಮನ್ ಸಿ,0.25 ಮಿ.ಗ್ರಾಂ ಕಬ್ಬಿಣ,11 ಮಿ.ಗ್ರಾಂ ಮ್ಯಾಗ್ನೀಷಿಯಂ,14 ಮೈಕ್ರೋಗ್ರಾಂ ಫಾಲೇಟ್,15 ಮಿ.ಗ್ರಾಂ ರಂಜಕ,85 ಮೈಕ್ರೋಗ್ರಾಂ ವಿಟಾಮಿನ್ ಬಿ6 ಮತ್ತು 2.9 ಮೈಕ್ರೋಗ್ರಾಂ ವಿಟಾಮಿನ್ ಕೆ ಇರುತ್ತವೆ.

ಬದನೆಯ ಸಿಪ್ಪೆಯಲ್ಲಿ ನಾರು,ಪೊಟ್ಯಾಷಿಯಂ,ಮ್ಯಾಗ್ನೀಷಿಯಂ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ.

ಬದನೆಯ ಆರೋಗ್ಯಲಾಭಗಳು

►ಹೃದ್ರೋಗಗಳ ಅಪಾಯವನ್ನು ತಗ್ಗಿಸುತ್ತದೆ

ಬದನೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕೆಲವು ಅಧ್ಯಯನ ವರದಿಗಳು ತಿಳಿಸಿವೆ. ಅದನ್ನು ಸೇವಿಸುವುದರಿಂದ ಹೃದ್ರೋಗಕ್ಕೆ ಪ್ರಮುಖ ಕಾರಣಗಳಾಗಿರುವ ಕೆಟ್ಟ ಕೊಲೆಸ್ಟ್ರಾಲ್(ಎಲ್‌ಡಿಎಲ್) ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟಗಳು ಕಡಿಮೆಯಾಗುತ್ತವೆ. ಹೀಗಾಗಿ ಹೆಚ್ಚೆಚ್ಚು ಬದನೆಯನ್ನು ತಿನ್ನುವುದರಿಂದ ಹೃದಯದ ಆರೋಗ್ಯವೂ ಹೆಚ್ಚುತ್ತದೆ.

►ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ

ಬದನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರು ಪಚನಕ್ರಿಯೆ ಮತ್ತು ಶರೀರದಲ್ಲಿ ಸಕ್ಕರೆಯ ಹೀರುವಿಕೆಯನ್ನು ನಿಧಾನಗೊಳಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ನಿಧಾನ ಹೀರುವಿಕೆಯು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಸ್ಥಿರವಾಗಿಸುತ್ತದೆ ಮತ್ತು ಅದು ಹೆಚ್ಚುವುದನ್ನು ತಡೆಯುತ್ತದೆ. ಅಲ್ಲದೆ ಬದನೆಯಲ್ಲಿರುವ ಪಾಲಿಫಿನಾಲ್‌ಗಳೂ ಸಕ್ಕರೆಯ ಹೀರುವಿಕೆಯನ್ನು ಕಡಿಮೆ ಮಾಡುತ್ತವೆ ಮತ್ತು ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತವೆ ಎನ್ನುವುದನ್ನು ಅಧ್ಯಯನಗಳು ಸೂಚಿಸಿವೆ.

►ದೇಹತೂಕ ಇಳಿಸಲು ನೆರವಾಗುತ್ತದೆ

ಬದನೆಯು ಅಧಿಕ ಪ್ರಮಾಣದಲ್ಲಿ ನಾರು ಮತ್ತು ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿರುವುದರಿಂದ ದೇಹತೂಕವನ್ನು ಇಳಿಸಿಕೊಳ್ಳಲು ಬಯಸುವವರಿಗೆ ಇದು ಪರಿಪೂರ್ಣ ಆಹಾರವಾಗಿದೆ. ನಾರು ಹೊಟ್ಟೆ ತುಂಬಿದ ಅನುಭವ ನೀಡುವುದರೊಂದಿಗೆ ಮತ್ತು ಸಂತೃಪ್ತಿಯನ್ನುಂಟು ಮಾಡುವುದರಿಂದ ಮಧ್ಯೆ ಮಧ್ಯೆ ತಿನ್ನಬೇಕೆನಿಸುವುದಿಲ್ಲ ಮತ್ತು ಇದರಿಂದ ಶರೀರದಲ್ಲಿ ಕ್ಯಾಲರಿಗಳು ಸೇರುವುದು ಕಡಿಮೆಯಾಗುತ್ತದೆ.

►ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ನೆರವಾಗುತ್ತದೆ

ಬದನೆಯಲ್ಲಿ 13 ವಿಧದ ಫೆನಾಲಿಕ್ ಸಂಯುಕ್ತಗಳಿದ್ದು,ಇವು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಅದರಲ್ಲಿರುವ ಸೋಲಾಸೊಡೈನ್ ರಾಮ್ನಾಸಿಲ್ ಗ್ಲೈಕೊಸೈಡ್‌ಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೆರವಾಗುತ್ತವೆ. ಜೊತೆಗೆ ಅದರಲ್ಲಿರುವ ನಾಸುನಿನ್ ಕೂಡ ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ಪೂರಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News