ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ತೆರವಿನಲ್ಲಿ ಯಾವುದೆ ವಿನಾಯಿತಿ ಇಲ್ಲ: ಹೈಕೋರ್ಟ್

Update: 2018-08-14 16:35 GMT

ಬೆಂಗಳೂರು, ಆ.14: ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಲು ಇನ್ನೂ ಎರಡು ದಿನ ಸಮಯ ಬೇಕು ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿಗೆ ಹೈಕೋರ್ಟ್ ಮತ್ತೆ ಗರಂ ಆಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವಿಗೆ ಸಂಬಂಧಿಸಿದ ಪಿಐಎಲ್‌ಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಕೂಡ ವಿಚಾರಣೆ ಮುಂದುವರಿಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಪ್ರಮಾಣ ಪತ್ರದ ಮೂಲಕ ಜಾಹೀರಾತು ನೀತಿಯ ಕರಡು ಸಲ್ಲಿಸಿದರು. ತಜ್ಞರು, ವಿವಿಧ ಇಲಾಖೆಗಳು, ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷ ಭಾಗಿಯಾದವರ ಜೊತೆ ಚರ್ಚಿಸಿ ನಿಯಮ ರೂಪಿಸಲಾಗುವುದು ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಮಾಹೇಶ್ವರಿ ಅವರು, ಒಂದು ಕೌನ್ಸಿಲ್ ಸಭೆ ನಡೆಸುವುದಕ್ಕೂ ನಾವೇ ಆದೇಶ ಮಾಡಬೇಕೆ, ನಿಮ್ಮ ಕೆಲಸ ಮಾಡೋದಕ್ಕೂ ನಾವೇ ಹೇಳಬೇಕೆ. ಹಾಗಾದರೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಫಲಕಗಳನ್ನು ತೆರವುಗೊಳಿಸಲು ನೀಡಿರುವ ಈ ತಿಂಗಳ ಅಂತ್ಯದ ಡೆಡ್‌ಲೈನ್‌ನಲ್ಲಿ ಕಿಂಚಿತ್ತೂ ವಿನಾಯಿತಿ ನೀಡೋದಿಲ್ಲ ಎಂದ ನ್ಯಾಯಪೀಠವು ಅಧಿಕಾರಿಗಳು ಸಂಬಳವನ್ನು ತೆಗೆದುಕೊಳ್ಳುತ್ತಾರೆ. ಆದರೆ, ಕೆಲಸದ ವಿಷಯ ಬಂದಾಗ ಆಲಸಿಗಳಾಗಿರುತ್ತಾರೆ ಎಂದು ಕಿಡಿಕಾರಿತು.

ಅಧಿಕಾರಿಗಳ ವರ್ತನೆಯನ್ನು ನಾವು ಸಹಿಸೋದಿಲ್ಲ. ಫಲಕಗಳನ್ನು ತೆರವುಗೊಳಿಸುವವರೆಗೂ ಸ್ವಲ್ಪವೂ ವಿನಾಯಿತಿ ನೀಡುವುದಿಲ್ಲ ಎಂದು ನ್ಯಾಯಪೀಠವು ಅಧಿಕಾರಿಗಳಿಗೆ ಎಚ್ಚರಿಸಿತು. ಬಿಬಿಎಂಪಿ ಅಧಿಕಾರಿಗಳ ಮೇಲಿನ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 13 ರಿಂದ ವಿಚಾರಣೆ ಆರಂಭವಾಗಿದ್ದು ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಲಾಗಿದೆ ಎಂದು ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೂ ಗರಂ ಆದ ಮುಖ್ಯ ನ್ಯಾಯಮೂರ್ತಿಗಳು, ಇವೆಲ್ಲಾ ದಿನನಿತ್ಯದ ವಿಚಾರಣೆ ಆಧಾರದಲ್ಲಿ ನಡೆಯಬೇಕು ಎಂದು ಹೇಳಿರಲಿಲ್ಲವೇ ಎಂದು ಕಿಡಿಕಾರಿದರು. ಇದಕ್ಕೆ ಚಂದ್ರಮೌಳಿ, ಇನ್ನೂ ಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ ಎಂದರು. ಇದಕ್ಕೆ ನ್ಯಾಯಮೂರ್ತಿಗಳು ವೆಬ್‌ಸೈಟ್‌ನಲ್ಲಿ ಅಪ್‌ಲೌಡ್ ಆಗಿದೆಯಲ್ಲಾ. ಶೀಘ್ರ ವಿಚಾರಣೆ ನಡೆಸಿ. ಇದೇ 14ರೊಳಗೆ ಎಲ್ಲಾ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಿ ಎಂದು ತಾಕೀತು ಮಾಡಿದರು.

ಅಡ್ವೊಕೇಟ್ ಜನರಲ್ ಉದಯ ಹೊಳ್ಳ ವಾದಿಸಿ, 223 ಕೇಸುಗಳಲ್ಲಿ 200ಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಲಾಗಿದೆ. 23 ಪ್ರಕರಣಗಳಲ್ಲಿ ಆರೋಪಿಗಳ ಫೋನ್ ನಂಬರ್ ಬಿಟ್ಟರೆ ಬೇರೆ ಮಾಹಿತಿ ಸಿಕ್ಕಿಲ್ಲ. ಆ ನಂಬರ್‌ಗಳೂ ಸ್ವಿಚ್ ಆಫ್ ಆಗಿವೆ. ಹೀಗಾಗಿ ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಇಂದು ಸಂಜೆಯೊಳಗೆ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ. ತೆರವುಗೊಳಿಸಿರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ವಿಲೇವಾರಿಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಮುಂದಿನ ವಿಚಾರಣೆ ವೇಳೆ ಸ್ಪಷ್ಟವಾಗಿ ನಿಖರವಾಗಿ ತಿಳಿಸಿ. ಉತ್ತಮ ಪ್ರಮಾಣಪತ್ರ ಸಲ್ಲಿಸಿ ಎಂದು ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News