ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮೇಲಿನ ದಾಳಿಗೆ ಎಸ್‌ಡಿಪಿಐ ಖಂಡನೆ

Update: 2018-08-14 16:44 GMT

ಬೆಂಗಳೂರು, ಆ.14: ದಿಲ್ಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮೇಲೆ ನಡೆದ ಗುಂಡಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ, ‘ಈ ಘಟನೆಯು ದೇಶದ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಯುನೈಟೆಡ್ ಅಗೇನ್ಸ್ ಹೇಟ್ ಸಂಘಟನೆಯು ದಿಲ್ಲಿಯ ಕಾನ್ಸ್‌ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ‘ಖೌಫ್ ಸೇ ಆಝಾದಿ (ಭಯದಿಂದ ಸ್ವಾತಂತ್ರ್ಯ)’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಸಂದರ್ಭದಲ್ಲಿ ಉಮರ್ ಖಾಲಿದ್ ಮೇಲೆ ವೈಚಾರಿಕತೆಯನ್ನು ಎದುರಿಸಲಾಗದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದು ದೇಶದಲ್ಲಿರುವ ಅಸಹಿಷ್ಣುತೆಯ ವಾತಾವರಣವನ್ನು ತೋರ್ಪಡಿಸಿದೆ ಎಂದು ಅವರು ಹೇಳಿದ್ದಾರೆ.

ಈ ದಾಳಿಯು ವಿದ್ಯಾರ್ಥಿ ಯುವ ಸಮೂಹವನ್ನು ಭಯ ಪಡಿಸಲು ಮತ್ತು ವಿದ್ಯಾರ್ಥಿಗಳು ಸಂಘಟಿತರಾಗಿ ಈ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣವನ್ನು ಸೃಷ್ಟಿಸಿರುವ ಕೋಮುವಾದಿಗಳ ವಿರುದ್ಧ ಐಕ್ಯರಾಗಬಾರದೆಂಬ ಉದ್ದೇಶದಿಂದಾಗಿದೆ. ವಿದ್ಯಾರ್ಥಿಗಳ ಮೇಲೆಯೆ ಇಂತಹ ದಾಳಿ ನಡೆದಿರುವುದು ವಿಪರ್ಯಾಸವೇ ಸರಿ. ದೇಶದಲ್ಲಿ ಸ್ವತಂತ್ರವಾಗಿ ಮಾತನಾಡುವ ಹಕ್ಕನ್ನು ಕಸಿಯಲಾಗುವುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ ಎಂದು ಅವರು ತಿಳಿಸಿದ್ದಾರೆ.

ಈ ಘಟನೆಯ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರವಿದೆ. ಘಟನೆಯ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆಳೆದು ವಿದ್ಯಾರ್ಥಿ ನಾಯಕರಿಗೆ ರಕ್ಷಣೆ ನೀಡುವಂತೆ ಎಂ.ಕೆ.ಫೈಝಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News