47ರ ಸ್ವಾತಂತ್ರ್ಯ ಯಾರಿಗೆ ಬಂತು?

Update: 2018-08-14 18:53 GMT

ಮಾನ್ಯರೇ,

ಭಾರತ ಇಂದು ಬ್ರಿಟಿಷರಿಂದ ಸ್ವತಂತ್ರಗೊಂಡು 71 ವರ್ಷಗಳು ಕಳೆದು 72 ನೇ ವರ್ಷದೆಡೆಗೆ ಸಾಗುತ್ತಿದೆ. ದೇಶ ಸಕಲ ಸಂಪನ್ಮೂಲಗಳನ್ನು ಹೊಂದಿದ್ದರೂ ದೇಶವನ್ನಾಳುವ ಜನಪ್ರತಿನಿಧಿಗಳು ದೇಶದಲ್ಲಿನ ಜ್ವಲಂತ ಸಮಸ್ಯೆಗಳನ್ನು ಅರಿತು ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ನಿರುತ್ಸಾಹ ತೋರಿದುದರಿಂದಾಗಿ ಭಾರತದಲ್ಲಿ ಇಂದು ಭಯೋತ್ಪಾದನೆ, ಭ್ರಷ್ಟಾಚಾರ, ಕೋಮುವಾದ, ಅತ್ಯಾಚಾರ, ಲಿಂಗ ತಾರತಮ್ಯ, ವರದಕ್ಷಿಣೆ ಕಿರುಕುಳ, ಮಹಿಳಾ ದೌರ್ಜನ್ಯ, ದಲಿತರ ಶೋಷಣೆ, ನಿರುದ್ಯೋಗ ಇತ್ಯಾದಿಗಳು ರಾಷ್ಟ್ರ ಮಟ್ಟದಲ್ಲಿನ ಸವಾಲುಗಳಾಗಿವೆ. ಅಲ್ಲದೆ ಭಾರತದ ಜೀವನಾಡಿಯಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ಮತ್ತು ಅನಕ್ಷರತೆಯಿಂದಾಗಿ ಅಸ್ಪೃಶ್ಯತೆ, ಬಾಲ್ಯ ವಿವಾಹದಂತಹ ಮೌಢ್ಯಾಚರಣೆಗಳು ಇನ್ನೂ ಜೀವಂತವಾಗಿವೆ. ದೇಶ ಸ್ವತಂತ್ರಗೊಂಡು ಏಳು ದಶಕಗಳೇ ಕಳೆದರೂ ಅದೆಷ್ಟೋ ಗ್ರಾಮಗಳಿಗೆ ರಸ್ತೆ, ಸಾರಿಗೆ, ವಿದ್ಯುತ್, ಶಿಕ್ಷಣ, ಆರೋಗ್ಯ, ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳು ದೊರಕುತ್ತಿಲ್ಲ. ಸಾಲು ಸಾಲು ಸಮಸ್ಯೆಗಳು ದೇಶದಲ್ಲಿ ತಾಂಡವವಾಡುತ್ತಿದ್ದರೂ ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಜಾತಿ, ಧರ್ಮ ರಾಜಕಾರಣ ಮಾಡುತ್ತ ಧರ್ಮ ಧರ್ಮಗಳ ನಡುವೆ ವೈರತ್ವ, ದ್ವೇಷ, ಅಸೂಯೆ ಹುಟ್ಟಿಸಿ ಸಮಾಜದಲ್ಲಿನ ಸಾಮರಸ್ಯ ಹಾಳು ಮಾಡಿ ಜನರನ್ನು ಒಡೆದು ಆಳುತ್ತಿವೆ. ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ನೋಡುವಾಗ ನಲವತ್ತೇಳರ ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಮುಂದಿನ ದಿನಗಳಲ್ಲಾದರೂ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ದೊಂದಿಗೆ ನವ ಭಾರತ ನಿರ್ಮಿಸಲಿ.

Writer - -ಮೌಲಾಲಿ ಕೆ. ಬೋರಗಿ, ಸಿಂಧಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂಧಗಿ

contributor

Similar News