ಓದಿದ್ದಕ್ಕಿಂತ ಲಾಠಿ ಏಟು ತಿಂದಿದ್ದೇ ಹೆಚ್ಚು

Update: 2018-08-15 06:07 GMT

ಇಡೀ ದೇಶ 72ನೇ ಸ್ವಾತಂತ್ರ ದಿನಾಚರಣೆಯ ಹೊಸ್ತಿಲಲ್ಲಿದ್ದು, ಬ್ರಿಟಿಷರ ದಾಸ್ಯದ ಸಂಕೋಲೆ ಕಳಚಿಕೊಳ್ಳಲು ಸ್ವಾತಂತ್ರ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿ ಅವರ ನೇತೃತ್ವದಲ್ಲಿ ಲಕ್ಷಾಂತರ ಹೋರಾಟಗಾರರು ಸ್ವಾತಂತ್ರದ ಕಿಚ್ಚು ಹಬ್ಬಿಸಿ ತ್ಯಾಗ, ಬಲಿದಾನ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ನೂರಾರು ದೇಶಭಕ್ತರು ಗಾಂಧೀಜಿ ಅವರ ಸ್ವಾತಂತ್ರ ಚಳವಳಿಯಿಂದ ಪ್ರೇರಣೆಗೊಂಡು ಬಲಿದಾನ ಮಾಡಿದ್ದಾರೆ. ಕೆಲವರು ಸೆರೆಮನೆ ವಾಸವನ್ನೂ ಅನುಭವಿಸಿದ್ದಾರೆ. ಈ ಪೈಕಿ ಜಿಲ್ಲೆಯ ಸ್ವಾತಂತ್ರ ಹೋರಾಟಗಾರರಲ್ಲೊಬ್ಬರಾದ ಮೂಡಿಗೆರೆಯ ಗಂಗಯ್ಯ ಹೆಗ್ಡೆ ಅವರ ಸ್ವಾತಂತ್ರ ಚಳವಳಿಯ ರೋಚಕ ಕಥನದ ಕಿರು ಪರಿಚಯ ಇಲ್ಲಿದೆ.

ಚಿಕ್ಕಮಗಳೂರು: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದ ಚಳವಳಿ ಅಂದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಸ್ವಾತಂತ್ರ ಘೋಷಣೆಗೂ ಮುನ್ನ ಈ ಪುಟ್ಟ ಗ್ರಾಮದ ದೇಶಾಭಿಮಾನಿಗಳು ಬ್ರಿಟಿಷರಿಗೆ ಸಡ್ಡು ಹೊಡೆದು 1942ರಲ್ಲಿ ಸ್ವಾತಂತ್ರ ಘೋಷಿಸಿಕೊಂಡಿದ್ದಲ್ಲದೇ ಗ್ರಾಮದ ದೇವಾಲಯವೊಂದರ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಕೆಚ್ಚೆದೆಯ ಗುಂಡಿಗೆ ಪ್ರದರ್ಶಿಸಿ ಸ್ವಾತಂತ್ರ ಚಳವಳಿಯ ಬಿರುಸಿಗೆ ಮುನ್ನುಡಿ ಬರೆದಿರುವುದು ದೇಶದ ಸ್ವಾತಂತ್ರ ಚಳವಳಿಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದಾಗಿದೆ. ಈ ಅಪ್ರತಿಮ ಹೋರಾಟದಲ್ಲಿ ಚಿಕ್ಕಮಗಳೂರಿನ ಬಿಸಿರಕ್ತದ ಯುವಕರೂ ಭಾಗವಹಿಸಿದ್ದರೆಂಬುದು ಇಡೀ ಜಿಲ್ಲೆಯ ಹೆಮ್ಮೆಯ ವಿಚಾರವಾಗಿದೆ. ಸ್ವಾತಂತ್ರ ಚಳವಳಿಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ವಿದ್ಯಾಭ್ಯಾಸದ ಸಲುವಾಗಿ ತಂಗಿದ್ದ ಮಲೆನಾಡಿನ ದೇಶಭಕ್ತ ಯುವಕರ ಒಂದು ಗುಂಪು ವಿದ್ಯಾಭ್ಯಾಸ ಮಾಡಿದ್ದಕ್ಕಿಂತ ಹೆಚ್ಚಾಗಿ ಈಸೂರು ಚಳವಳಿಯಲ್ಲಿ ಪಾಲ್ಗೊಂಡದ್ದು, ಬ್ರಿಟಿಷರಿಂದ ಲಾಠಿ ಏಟು ತಿಂದಿದ್ದೇ ಹೆಚ್ಚು. ಈ ಕಾರಣದಿಂದ ಈ ಹೋರಾಟಗಾರರ ಗುಂಪಿನ ಸದಸ್ಯರ ಪೈಕಿ ಕೆಲವರು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಸೆರೆಮನೆ ವಾಸದ ಶಿಕ್ಷೆಗೆ ಗುರಿಯಾದರೆ, ಇನ್ನು ಕೆಲವರು ಬ್ರಿಟಿಷರ ಗುಂಡಿಗೆ ಎದೆಯೊಡ್ಡಬೇಕಾಯಿತು. ಹೀಗೆ ವ್ಯಾಸಂಗದ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದ ಜಿಲ್ಲೆಯ ಮಲೆನಾಡು ಭಾಗದ ಯುವಕನೊಬ್ಬ ತನ್ನ ಸಂಗಡಿಗರೊಂದಿಗೆ ಈಸೂರು ಸ್ವಾತಂತ್ರಚಳವಳಿಯ ನೇತೃತ್ವ ವಹಿಸಿದ್ದ ಮುಖಂಡರ ಸ್ವಾತಂತ್ರದ ರಣಕಹಳೆಯಿಂದ ಪ್ರೇರಣೆ ಗೊಂಡು ವ್ಯಾಸಂಗದೊಂದಿಗೆ ಚಳವಳಿಗೂ ಧುಮುಕಿದ್ದರು. ಕೊನೆಗೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಭೂಗತರಾಗಿದ್ದರು. ಅವರು ಪ್ರಸಕ್ತ ತಮ್ಮ ಮಧ್ಯೆ 18ರ ಯುವಕನಂತೆ ಮಲೆ ನಾಡಿನ ಗ್ರಾಮವೊಂದರಲ್ಲಿ ತಮ್ಮ ಕುಟುಂಬದ ವರೊಂದಿಗೆ ಇಳಿವಯಸ್ಸಿನಲ್ಲಿ ಸಮಾಜಸೇವಾ ಕಾರ್ಯ ಗಳೊಂದಿಗೆ ವಿರಮಿಸುತ್ತಿರುವುದನ್ನು ನೆನೆದು ಇಡೀ ಜಿಲ್ಲೆ ಸ್ವಾತಂತ್ರ ಚಳವಳಿಯ ರೋಚಕ ಇತಿಹಾಸವನ್ನು ಮೆಲುಕು ಹಾಕಿಕೊಳ್ಳುತ್ತಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಕಳಸ ಹೋಬಳಿಯ ತನೂಡಿ ಗ್ರಾಮದ ವೀರಪ್ಪ ಹೆಗ್ಡೆ ಹಾಗೂ ಶೇಷಮ್ಮ ದಂಪತಿಯ ಪುತ್ರನಾಗಿ ಫೆ.6, 1924ರಲ್ಲಿ ಗಂಗಯ್ಯ ಹೆಗ್ಡೆ ಜನಿಸಿದರು. 1939-1941ರ ಅವಧಿ ದೇಶಾದ್ಯಂತ ಮಹಾತ್ಮಾ ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ ಚಳವಳಿ ಕಾವು ಪಡೆದುಕೊಂಡಿದ್ದ ಕಾಲ. ಇದೇ ಅವಧಿಯಲ್ಲಿ ಅಂದರೆ 1942ರಲ್ಲಿ ಗಂಗಯ್ಯ ಹೆಗ್ಡೆ ಇಂಟರ್‌ಮೀಡಿಯೆಟ್ ವ್ಯಾಸಂಗಕ್ಕಾಗಿ ಶಿವಮೊಗ್ಗಕ್ಕೆ ತೆರಳಿ ಹಾಸ್ಟೆಲ್‌ನಲ್ಲಿ ತಂಗಿದ್ದರು. ಗಂಗಯ್ಯ ಹೆಗ್ಡೆ ಗಾಂಧೀಜಿ ಅವರಿಂದ ಪ್ರಭಾವಿ ತರಾಗಿ ಅವರ ಸ್ವಾತಂತ್ರ ಚಳವಳಿ ಕೂಗಿಗೆ ಧ್ವನಿ ಗೂಡಿಸಿದ್ದರು. 1942ರಲ್ಲಿ ಗಾಂಧೀಜಿ ಅವರ ಮಾಡು ಇಲ್ಲವೇ ಮಡಿ ಚಳವಳಿಗೆ ಬೆಂಬಲ ಸೂಚಿಸಲು ಶಿವಮೊಗ್ಗದ ದೇಶಭಕ್ತಿ ಸ್ವಾತಂತ್ರ ಚಳವಳಿಯ ಮುಖಂಡರೊಂದಿಗೆ ವಕೀಲರು, ವಿದ್ಯಾರ್ಥಿಗಳು ನಗರದ ದುರ್ಗಿ ಗುಡಿ ಮುಂಭಾಗ ಸೇರಿದ್ದರು. ವಿದ್ಯಾರ್ಥಿ ಯಾಗಿದ್ದ ಅವರು ಅಂದು ತರಗತಿಗೆ ಚಕ್ಕರ್ ಹೊಡೆದು ಕೊಡಗಿನ ನಾಣಿ ಮತ್ತಿತರ ಸಂಗಡಿಗ ರೊಂದಿಗೆ ದುರ್ಗಿಗುಡಿಯ ಆಂದೋಲನ ಸೇರಿಕೊಂಡು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು.

                  ಈಸೂರು ದೇವಾಲದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಸಂದರ್ಭ ತೆಗೆದ ಭಾವಚಿತ್ರದಲ್ಲಿ ಗಂಗಯ್ಯ ಹೆಗ್ಡೆ...

1942ರಲ್ಲಿ ಬ್ರಿಟಿಷರು ಈಸೂರನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದರು. ರೊಚ್ಚಿಗೆದ್ದ ಹೋರಾಟಗಾರರು ‘ಏಸೂರನ್ನಾ ದರೂ ಕೊಟ್ಟೆವು, ಈಸೂರನ್ನು ಕೊಡಲಾರೆವು’ ಎಂದು ಚಳವಳಿ ಆರಂಭಿಸಿದ್ದರು. ಈಸೂರು ಗ್ರಾಮದ ನಾಗರಿಕರು ಕ್ರಾಂತಿಕಾರಿ ಗಳಂತೆ ಚಳವಳಿಯಲ್ಲಿ ತೊಡಗಿದ್ದಾಗ ಬ್ರಿಟಿಷ್ ಆಡಳಿತಾಂಗ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಅಮಲ್ದಾರ್‌ರೊಬ್ಬರನ್ನು ಊರಿನ ಪರಿಸ್ಥಿತಿಯ ಅಧ್ಯಯನಕ್ಕೆ ಕಳುಹಿಸಿತ್ತು. ಅದಾಗಲೇ ಬ್ರಿಟಿಷರ ದೌರ್ಜನ್ಯದಿಂದ ಸಹನೆ ಕಳೆದುಕೊಂಡಿದ್ದ ಈಸೂರು ಗ್ರಾಮಸ್ಥರು ಅಧಿಕಾರಿಗಳಿಬ್ಬರನ್ನು ಕಟ್ಟಿ ಹಾಕಿ ಅಮಾನುಷವಾಗಿ ಕೊಲೆ ಮಾಡಿದರು. ಈಸೂರು ಹೋರಾಟಗಾರರೊಂದಿಗಿದ್ದ ಗಂಗಯ್ಯ ಹೆಗ್ಡೆ ಹಾಗೂ ಅವರ ಸಂಗಡಿಗರು ಈ ಘೋರ ಹತ್ಯೆ ಯನ್ನು ಕಣ್ಣಾರೆ ಕಂಡಿದ್ದರು. ಗ್ರಾಮಸ್ಥರ ಈ ವರ್ತನೆಯಿಂದ ರೊಚ್ಚಿ ಗೆದ್ದ ಪೊಲೀಸರು ಹಿಂಸಾಚಾರವನ್ನು ನಡೆಸಲು ಪ್ರಾರಂಭಿಸಿ ದ್ದರೆಂಬುದನ್ನು ಗಂಗಯ್ಯ ಹೆಗ್ಡೆ ವಿಷಾದದಿಂದ ನೆನೆಸಿಕೊಳುತ್ತಾರೆ. ಬಳಿಕ ಮೈಸೂರಿಗೆ ನೂತನ ಅರಸರಾಗಿ ಜಯಚಾ ಮರಾ ಜೇಂದ್ರ ಅರಸರು ನೇಮಕ ಗೊಂಡಿದ್ದ ಅವಧಿಯಲ್ಲಿ ಅವರೊಮ್ಮೆ ಶಿವಮೊಗ್ಗಕ್ಕೆ ಆಗಮಿಸಿದ್ದರು. ಆಗ ಕಾಲೇಜು ಸಂಘದ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ಗಂಗಯ್ಯ ಹೆಗ್ಡೆ ಸೇರಿದಂತೆ ಮಲೆನಾಡಿನವರಾದ ಮಾಕೋನಹಳ್ಳಿಯ ಎಂ.ಯು.ಚಂದ್ರೇ ಗೌಡ, ಶಿವನಗದ್ದೆ ಆರಾಧ್ಯ, ಕೊಪ್ಪದ ದೇವೇಗೌಡ, ಬಿ.ಇ. ಕೃಷ್ಣೇಗೌಡ, ಬೂಪಾಲ್ ಚಂದ್ರಶೇಖರ್, ಶಂಕರಯ್ಯ ಹೆಗಡೆ, ಕರಗಡ ಅನಂತರಾಮಯ್ಯ, ಆರ್ಡಿಕೊಪ್ಪ ಗಣೇಶ್ ರಾವ್ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಶಿವಮೊಗ್ಗದ ಮುಖ್ಯರಸ್ತೆಯಲ್ಲಿ ಅಡ್ಡನಿಂತು ರಾಜರ ಆಳ್ವಿಕೆ ವಿರುದ್ಧ ಹಾಡು ಹಾಡಿ, ಈಸೂರಿನಲ್ಲಿ ಬಂಧಿತರಾಗಿರುವ ನಿರಪರಾಧಿಗಳನ್ನು ಬಿಡುಗಡೆಗೊಳಿಸುವಂತೆ ಮನವಿಮಾಡಿಕೊಂಡಿದ್ದು ಗಂಗಯ್ಯ ಅವರ ಸ್ಮತಿಪಟಲದಲ್ಲಿ ಇನ್ನೂ ಹಸಿರಾಗಿದೆ.

ಈಸೂರು ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು, ಈಸೂರಿನ ವೀರಭದ್ರೇಶ್ವರ ದೇವಸ್ಥಾನದ ಮೇಲೆ ತ್ರಿವರ್ಣ ಧ್ವಜ ಹಾರಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಕುಪಿತಗೊಂಡ ಬ್ರಿಟಿಷ್ ಸರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಸ್ವಾತಂತ್ರ ಹೋರಾಟಗಾರರು ಎಲ್ಲೇ ಕಂಡರೂ ಅವರನ್ನು ಬಂಧಿಸಿ ನೇಣಿಗೆ ಹಾಕುವಂತೆ ಆದೇಶ ಹೊರಡಿಸಿದ್ದರು. ಈ ಸಂದರ್ಭದಲ್ಲಿ ಹಲವಾರು ಸ್ವಾತಂತ್ರ ಹೋರಾಟಗಾರರನ್ನು ಬ್ರಿಟಿಷರು ಬಂಧಿಸಿ, ಕೆಲವರನ್ನು ಬಿಡುಗಡೆ ಮಾಡಿ, ಕೆಲವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಅದರಲ್ಲಿ ಸ್ವಾತಂತ್ರ ಹೋರಾಟಗಾರರಾದ ಕೆ.ಗುರುವಪ್ಪ, ಮಲ್ಲಪ್ಪ, ಹಾಲಪ್ಪ, ಸೂರ್ಯ ನಾರಾಯಣ್ ರಾವ್ ಅವರನ್ನು ಬ್ರಿಟಿಷರು 1943ರಲ್ಲಿ ನೇಣಿಗೇರಿಸಿದ್ದರು.

ವಿದ್ಯಾರ್ಥಿ ಸಂಘದ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಗಂಗಯ್ಯ ಹೆಗ್ಡೆ ಹಾಗೂ ಅವರ ಸಹಚರರನ್ನು ಬಂಧಿಸಲು ಬ್ರಿಟಿಷರು ಹುಡುಕಾಡುತ್ತಿದ್ದ ವಿಷಯ ತಿಳಿದ ಗಂಗಯ್ಯ ಹೆಗ್ಡೆ ಮತ್ತವರ ಪಟಾಲಂ ಬ್ರಿಟಿಷರ ಕಣ್ಣಿಗೆ ಮಣ್ಣೆರಚಿ ಕಾಲೇಜಿಗೂ ಹೋಗದೇ 2 ವರ್ಷಗಳ ಕಾಲ ಭೂಗತರಾಗಿದ್ದರು. ಕೊನೆಗಳಿಗೆಯಲ್ಲಿ ಬ್ರಿಟಿಷರು ಚಳವಳಿಯಲ್ಲಿ ಭಾಗವಹಿಸು ವವರನ್ನು ಕಂಡಲ್ಲಿ ಗುಂಡು ಹಾರಿಸುವಂತೆ ಆದೇಶಿಸಿದ್ದರು. ಗಂಗಯ್ಯ ಹೆಗ್ಡೆ ನಿಷೇಧಾಜ್ಞೆಗೆ ಹೆದರದೇ ತಮ್ಮ ಸೈಕಲ್‌ನಲ್ಲಿ ತಿರುಗುತ್ತಿದ್ದಾಗ ಒಮ್ಮೆ ಪೊಲೀಸರ ಕೈಗೆ ಸಿಲುಕಿ ಲಾಠಿ ಏಟು ತಿಂದಿದ್ದರು. ಈ ವೇಳೆ ಅವರ ಸೈಕಲ್ ಮುರಿದಿದ್ದು, ಆ ಸೈಕಲ್ ಹೊತ್ತುಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ದ್ದರೆಂಬ ಮೈನವಿರೇಳಿಸುವ ಘಟನೆಯನ್ನು ಅವರು ಈಗಲೂ ಮೆಲುಕು ಹಾಕುತ್ತಿದ್ದಾರೆ.

ಗಂಗಯ್ಯ ಹೆಗ್ಡೆ ಅವರು ಪ್ರಸಕ್ತ ಮೂಡಿಗೆರೆ ತಾಲೂಕಿನ ಗೌತವಳ್ಳಿಯಲ್ಲಿ ತಮ್ಮ ಕುಟುಂಬದವರೊಂದಿಗೆ ಮುಸ್ಸಂಜೆಯ ಕಾಲ ಕಳೆಯುತ್ತಿದ್ದಾರೆ. 96 ವರ್ಷವಾಗಿದ್ದರೂ ಸದಾ ಚಟುವಟಿಕೆ ಯಿಂದಿರುವ ಅವರು ವಿವಿಧ ಸಮಾಜ ಸೇವಾಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Writer - ಕೆ.ಎಲ್.ಶಿವು, ಚಿಕ್ಕಮಗಳೂರು

contributor

Editor - ಕೆ.ಎಲ್.ಶಿವು, ಚಿಕ್ಕಮಗಳೂರು

contributor

Similar News