ಹದಿನೆಂಟು ಹುತಾತ್ಮರ ನೆಲ ಕೋಗನೂರು

Update: 2018-08-15 06:23 GMT
ಹುತಾತ್ಮರಾದ ವೀರಯ್ಯ ಹಿರೇಮಠ, ಮಹದೇವಪ್ಪ ಮೈಲಾರ, ತಿರಕಪ್ಪ ಮಡಿವಾಳರ ಪ್ರತಿಮೆ

ಗದಗ: ಬ್ರಿಟಿಷ್ ಆಡಳಿತದಿಂದ ದೇಶವನ್ನು ಬಿಡುಗಡೆ ಮಾಡುವ ಸಂಗ್ರಾಮದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೋಗನೂರ, ಹೆಬ್ಬಾಳ, ನಾಗರಮಡುವು, ವಡವಿ-ಹೊಸೂರ, ಅಂಕಲಿ ಗ್ರಾಮಗಳ ಹೋರಾಟಗಾರರಲ್ಲಿ ಪ್ರಮುಖ 18 ನಾಯಕರ ಕೊಡುಗೆ ಉಲ್ಲೇಖನೀಯ.

ಆಗಿನ ಅವಿಭಜಿತ ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಬ್ಯಾಡಗಿತಾಲೂಕಿನ ಮೋಟೆಬೆನ್ನೂರು ಗ್ರಾಮದ ಮಾರ್ತಾಂಡಪ್ಪ ಮತ್ತುಬಸಮ್ಮ ದಂಪತಿಯ ಪುತ್ರ ಮಹಾದೇವಪ್ಪಮೈಲಾರ. ಇವರು 1920 ರಲ್ಲಿ ಗಾಂಧೀಜಿಯವರು ಧಾರವಾಡ ಜಿಲ್ಲೆಗೆ ಆಗಮಿಸಿದಾಗ ಅವರ ಭಾಷಣ ಕೇಳಿ ಪ್ರಭಾವಿತರಾಗಿ ಅವರ ಅಹಿಂಸಾ ತತ್ವ ಅಳವಡಿಸಿಕೊಂಡು ಅದರಂತೆ ಬ್ರಿಟಿಷರೊಂದಿಗೆ ಹೋರಾಡಿದವರು.

1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಸ್ವಯಂಪ್ರೇರಿತರಾಗಿ ಕರ್ನಾಟಕದಿಂದ ಪ್ರತಿನಿಧಿಯಾಗಿ ಭಾಗವಹಿಸಿದ ಏಕೈಕ ಪ್ರತಿನಿಧಿ ಮಹದೇವಪ್ಪಎಂಬುದು ಹೆಗ್ಗಳಿಕೆ. ಆಗ ಗಾಂಧೀಜಿ ಅವರು ‘ನೀನು ಇನ್ನೂ ಚಿಕ್ಕವನಿದ್ದೀಯಾ ಬೇಡ ಹೋಗು’ ಎಂದು ಹೇಳಿದ್ದರಂತೆ. ಅವರ ಮಾತು ಕೇಳದೇ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದು, ಅವರ ಉತ್ಸಾಹಕ್ಕೆ ಸಾಕ್ಷಿ ಯಾಗಿತ್ತು. ಸತ್ಯಾಗ್ರಹದಲ್ಲಿ ಬ್ರಿಟಿಷ್ ಅಧಿಕಾರಿಗಳು ಒಂದು ಗೆರೆ ಹಾಕಿ, ಅದನ್ನು ಯಾರೂ ದಾಟದಂತೆ ಸೂಚನೆ ನೀಡಿದ್ದರು. ಅದನ್ನೂ ದಾಟಿ ಬ್ರಿಟಿಷರ ಕಟ್ಟಳೆಯನ್ನು ಮುರಿದ ಕೀರ್ತಿ ಮಹದೇವಪ್ಪರಿಗೆ ಸಲ್ಲುತ್ತದೆ ಎಂದು ನಿವೃತ್ತ ಶಿಕ್ಷಕ ಹಾಲಪ್ಪಸೋಮಪ್ಪಕೆಂಗುಡ್ಡಪ್ಪನವರ ತಾವು ಕೇಳಿದ ಮಾಹಿತಿಯನ್ನು ವಾರ್ತಾಭಾರತಿಯೊಂದಿಗೆ ಸ್ಮರಿಸಿಕೊಂಡಿದ್ದಾರೆ.

ಮಹದೇವಪ್ಪಅವರ ಮುಖಂಡತ್ವದಲ್ಲಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೋಗನೂರು ಗ್ರಾಮದ 18 ಮಂದಿ ಹೋರಾಟಗಾರರನ್ನು ಒಗ್ಗೂಡಿಸಿಕೊಂಡು ಬ್ರಿಟಿಷರ ನೆಲೆಗಳನ್ನು ನಾಶ ಮಾಡಿದ್ದರು. ಬ್ರಿಟಿಷ ರಿಗೆ ಸಂಬಂಧಿಸಿದ ಟಪಾಲುಗಳನ್ನು ಬಸ್‌ನಲ್ಲಿ ಸಾಗಣೆ ಮಾಡುತ್ತಿದ್ದಾಗ ಮಾಗಡಿ ಮುಳಗುಂದ ಮಾರ್ಗ ಮಧ್ಯೆ, ಗುಡಗೇರಿಯಲ್ಲಿ ಬಸ್ ತಡೆದು ಟಪಾಲ್ ಅಪಹರಣ ಮಾಡುತ್ತಿದ್ದರು ಎಂದು ತಿಳಿಸಿದರು.

           ಹುತಾತ್ಮತ್ರಯರ ಸ್ಮಾರಕ

ಮಹದೇವಪ್ಪಅವರು, 18 ಮಂದಿ ಹೋರಾಟಗಾರರೊಂದಿಗೆ ಕೋಗನೂರು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬ್ರಿಟಿಷರು ಹಫ್ತಾ ವಸೂಲಿ ಮಾಡುತ್ತಿದ್ದ ವೇಳೆ ತಡೆ ಒಡ್ಡುವ ಕೆಲಸವನ್ನು ಮಾಡುತ್ತಿದ್ದರಂತೆ. ಅಲ್ಲದೆ ಬ್ರಿಟಿಷರಿಗೆ ಸಂಬಂಧಿಸಿದಂತೆ ಗೋವಿನಕೊಪ್ಪ, ಹೊನ್ನತ್ತಿ, ಬಿಜ್ಜೂರಿನಲ್ಲಿ ಇದ್ದ ಚಾವಡಿಗಳನ್ನು ಹಾನಿ ಮಾಡಿದ್ದಾರೆ. ಹಲವಾರು ರೈಲ್ವೆ ಸ್ಟೇಷನ್‌ಗಳನ್ನು ಸುಟ್ಟು ಹಾಕಿದ್ದರು ಎಂದು ಮಾಹಿತಿ ನೀಡಿದರು.

ಬ್ರಿಟಿಷರ ಸವಾಲಿಗೆ ಅಂಜದ ಮಹದೇವಪ್ಪ: ‘ಮಹದೇವಪ್ಪ ಅವರು ನೀಡುತ್ತಿದ್ದ ಉಪಟಳಗಳನ್ನು ತಾಳಲಾರದೇ ಬ್ರಿಟಿಷರು ಹೈರಾಣಾಗಿದ್ದರಂತೆ. ಹಾಗಾಗಿ ಇವರನ್ನು ಹೇಗಾದರೂ ಮಾಡಿ ಬಂಧಿಸಬೇಕು ಇಲ್ಲವೇ ಕೊಲೆ ಮಾಡಬೇಕು ಎಂಬ ಉದ್ದೇಶದಿಂದ, ಕ್ರಿ.ಶ.1943ರ ಎಪ್ರಿಲ್ 1ರಂದು ಹೊಸರಿತ್ತಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬ್ರಿಟಿಷರು ಹಫ್ತಾ ವಸೂಲಿ ಮಾಡಿದ ಹಣವನ್ನು ಸಂಗ್ರಹಿಸಿಟ್ಟು, ನಿಜವಾದ ಅಚ್ಚ ಕನ್ನಡಿಗರಾದರೆ ಹಫ್ತಾ ಹಣವನ್ನು ಅಪಹರಣ ಮಾಡಿ ಎಂದು ಸವಾಲ್ ಹಾಕಿದ್ದರಂತೆ. ಈ ಸವಾಲ್ ತೆಗೆದುಕೊಂಡ ಮಹದೇವಪ್ಪ, ಕೋಗನೂರಿನ ವೀರಯ್ಯ ಹಿರೇಮಠ, ಮಡಿವಾಳ ತಿರಕಪ್ಪರ ಜೊತೆಗೂಡಿ ಎ.1ರಂದು ಬೆಳಗಿನ ಜಾವ ಹೊಸರಿತ್ತಿಗೆ ತೆರಳಿ ಸಾಂಗ್ಲಿ ಪೊಲೀಸರ ಭದ್ರತೆಯ ನಡುವೆಯೂ ಹಣವನ್ನು ಅಪಹರಣ ಮಾಡಲು ದೇವಸ್ಥಾನಕ್ಕೆ ನುಗ್ಗಿದಾಗ ಪೊಲೀಸರ ಗುಂಡೇಟಿಗೆ ಮೂವರು ಹೋರಾಟಗಾರರು ಹುತಾತ್ಮರಾದರು’ ಎಂದು ಹಾಲಪ್ಪ ಹೇಳಿದರು. ಮಹಾದೇವಪ್ಪರಂತಹ ಮುಂಚೂಣಿ ನಾಯಕರಿಗೆ ಸದಾ ಬೆಂಗಾವ ಲಾಗಿ ಅವರು ಹೋರಾಟಕ್ಕೆ ಕರೆ ಕೊಟ್ಟಾಕ್ಷಣ ಬ್ರಿಟಿಷರಿಗೆ ಒಳಪಡುವ ಎಲ್ಲ ಜಾಗಗಳಲ್ಲಿ ಪ್ರತಿದಿನ ಒಂದಲ್ಲ ಒಂದು ಪ್ರತಿಭಟನೆ, ಧರಣಿ ಮಾಡುತ್ತಾ ಬಂದವರಲ್ಲಿ ನಿಂಗಪ್ಪಕುರಗುಂದ, ಬಸವಕುಮಾರ ಶಿಗ್ಲಿ, ಆದಯ್ಯ ಹಿರೇಮಠ, ಗೊಣೆಪ್ಪಕಮತ, ವಿ.ವಿ.ವಾಯಿ, ಹಾಲಪ್ಪಉಡಚಣ್ಣವರ ಇವರೆಲ್ಲರ ಹೆಸರು ಇತಿಹಾಸದ ಪುಟದಲ್ಲಿ ಅಜರಾಮರ ವಾಗಿ ಉಳಿದಿದೆೆ. ಕೊಂಚಿಗೇರಿ, ಹೊಳೆ-ಇಟಗಿ, ಸಾಸಲವಾಡ, ಬಿಜ್ಜೂರ ಗ್ರಾಮಗಳ ಚಳವಳಿಗಾರರು ಸಹ ಸ್ವಾತಂತ್ರ್ಯ ತಂದು ಕೊಡುವಲ್ಲಿ ಸಲ್ಲಿಸಿದ ಸೇವೆಯು ಅನನ್ಯ.

ಹುತಾತ್ಮ ಹೋರಾಟಗಾರರು: ಕೋಗನೂರ ಗ್ರಾಮದ ವೀರಯ್ಯ ಹಿರೇಮಠ, ತಿರಕಪ್ಪ ಮಡಿವಾಳರ, ಗೋಣೆಪ್ಪಭರಮಪ್ಪಕಮತ, ಯಲ್ಲಮ್ಮ ಕಮತ, ಗುಡ್ಡಪ್ಪಕರಿಯಲ್ಲಪ್ಪ ಡೇಲಕ್ಕನವರ, ನಿಂಗಪ್ಪಗುಡ್ಡಪ್ಪಕುರಗುಂದ, ಈರಪ್ಪಅಂಗಡಿ, ನೀಲಪ್ಪಕರಿಯಲ್ಲಪ್ಪ ಡೆಲಕ್ಕನವರ, ವೀರಭದ್ರಗೌಡ ಪಾಲಾಕ್ಷಗೌಡ ಪಾಟೀಲ, ನಿಸಿಮಪ್ಪಬೆನ್ನೂರ, ಪಕ್ಕಿರಡ್ಡಿ ರಡ್ಡೇರ, ಪಕ್ಕೀರಪ್ಪಕುರಗುಂದ, ಭಗವಂತಪ್ಪಬೂದನೂರು, ಶಿವಯ್ಯ ಹಿರೇಮಠ, ವಾಸುರಡ್ಡಿ ರಡ್ಡೇರ್, ರಾಮಣ್ಣ ಕುರಗುಂದ, ಚನ್ನಪ್ಪಅಗಸರ.

ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರ ಸ್ಮರಣಾರ್ಥ 2001ರ ಎಪ್ರಿಲ್ 1ರಂದು ಕೋಗನೂರು ಗ್ರಾಮದಲ್ಲಿ ‘ಹುತಾತ್ಮತ್ರಯರ ಸ್ಮಾರಕ’ ವನ್ನು ಕಟ್ಟಿಸಿದ್ದಾರೆ. ಇಲ್ಲಿ ಪ್ರತಿವರ್ಷ ಎಪ್ರಿಲ್ 1ರಂದು ಹುತಾತ್ಮರ ದಿನವನ್ನು ಅದ್ದೂರಿಯಾಗಿ ಗ್ರಾಮಸ್ಥರು ಆಚರಿಸುತ್ತಾ ಬಂದಿದ್ದೇವೆ.  ಹಾಲಪ್ಪ ಸೋಮಪ್ಪ,

ಕೆಂಗುಡ್ಡಪ್ಪನವರ, ನಿವೃತ್ತ ಶಿಕ್ಷಕ

Writer - ಕೆ ಎಂ. ಪಾಟೀಲ

contributor

Editor - ಕೆ ಎಂ. ಪಾಟೀಲ

contributor

Similar News