ಸ್ವಾತಂತ್ರ್ಯ ಹೋರಾಟದ ಪ್ರತೀಕ ಸುಲ್ತಾನ್ ಬತ್ತೇರಿ

Update: 2018-08-15 07:29 GMT

ಮಂಗಳೂರು: ದೇಶದ ಸ್ವಾತಂತ್ರ ಹೋರಾಟದ ಪ್ರತೀಕವಾಗಿ ಕರಾವಳಿ ಕರ್ನಾಟಕದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರಮುಖ ಸ್ಥಳಗಳಿವೆ. ಅವು ಗಳ ಪೈಕಿ ಒಂದಾಗಿದೆ ಮೈಸೂರು ಹುಲಿ ಫತೇಹ್ ಅಲಿ ಟಿಪ್ಪು ಸುಲ್ತಾನ್ ನಿರ್ಮಿಸಿರುವ ಮಂಗಳೂರು ಗುರುಪುರ ನದಿಯ ತಟದಲ್ಲಿರುವ ಸುಲ್ತಾನ್ ಬತ್ತೇರಿ ಕೋಟೆ. ಮಂಗಳೂರು ನಗರದ ಸ್ವೇಟ್‌ಬ್ಯಾಂಕ್ ಬಸ್ ನಿಲ್ದಾಣ ದಿಂದ ಸುಮಾರು ನಾಲ್ಕು ಕಿ.ಮೀ. ದೂರದ ಬೋಳೂರು ಎಂಬ ಪ್ರದೇಶದಲ್ಲಿ ಈ ಕೋಟೆ ಇದೆ. ತನ್ನ ಮರಣಕ್ಕೆ 15 ವರ್ಷ ಮೊದಲು ಅಂದರೆ 1784ರಲ್ಲಿ ಟಿಪ್ಪು ಸುಲ್ತಾನ್ ಈ ಕೋಟೆಯನ್ನು ನಿರ್ಮಿಸಿದ್ದಾರೆ ಎಂಬುದು ಇತಿಹಾಸ. ಇದನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ. ಬತ್ತೇರಿ ಎಂದರೆ ತೋಪುಗಳನ್ನು ಸಿಡಿಸುವ ತಾಣ ಎಂದು ಅರ್ಥ. ಟಿಪ್ಪು ಸುಲ್ತಾನ್ ನಿರ್ಮಿಸಿದ್ದರಿಂದ ಈ ಕೋಟೆಗೆ ‘ಸುಲ್ತಾನ್ ಬತ್ತೇರಿ’ ಎಂದು ಹೆಸರು ಬಂದಿದೆ. ಈ ಕೋಟೆಯಿಂದಾಗಿ ಬೋಳೂರು ಪ್ರದೇಶವನ್ನು ಸುಲ್ತಾನ್ ಬತ್ತೇರಿ ಎಂದೇ ಕರೆಯಲಾಗುತ್ತಿದೆ. ಅರಬಿ ಸಮುದ್ರದಿಂದ ಅಳಿವೆಬಾಗಿಲು ಮೂಲಕ ಗುರುಪುರ ನದಿಯಲ್ಲಿ ಒಳ ಮಾರ್ಗವಾಗಿ ಹಾದು ಬರುವ ಬ್ರಿಟಿಷರ ಹಡಗುಗಳು ಹಾಗೂ ದೋಣಿಗಳನ್ನು ತಡೆ ಯುವ ಉದ್ದೇಶದಿಂದ ಈ ಕೋಟೆಯನ್ನು ನಿರ್ಮಿಸಲಾಗಿದೆ. ಈ ಕೋಟೆಯಲ್ಲಿ ನಿಂತು ರಂಗಿಗಳಲ್ಲಿ ಗುಂಡುಹಾರಿ ಸುವ ಮೂಲಕ ಗುರುಪುರ ನದಿಯಲ್ಲಿ ಹಾದು ಬರುವ ಬ್ರಿಟಿಷರ ಹಡಗು ಮತ್ತು ದೋಣಿಗಳನ್ನು ಹಿಮ್ಮೆಟ್ಟಿಸಲಾ ಗುತ್ತಿತ್ತು. ಆದ್ದರಿಂದ ಈ ಕೋಟೆಯನ್ನು ಸೈನ್ಯದ ಉಪಯೋಗಕ್ಕಾಗಿ ಬಳಸಲಾಗುತ್ತಿತ್ತು. ಈ ಗೋಪುರದ ಕೆಳಗೆ ಗುಪ್ತ ನೆಲಮಳಿಗೆ ಕೂಡಾ ಇದೆ. ಈ ನೆಲಮಳಿಗೆಯನ್ನು ಗನ್ ಪೌಡರ್, ಮದ್ದುಗುಂಡು ಗಳು ಹಾಗೂ ಪ್ರಮುಖ ವಸ್ತುಗಳನ್ನು ಗುಪ್ತವಾಗಿ ಶೇಖರಿ ಸಲು ಹಾಗೂ ಸೈನಿಕರಿಗೆ ವಿಶ್ರಾಂತಿ ಪಡೆಯಲು ಅನುವಾಗು ವಂತೆ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಪ್ರಸಕ್ತ ನೆಲಮಳಿಗೆ ಒಳಗೆ ಪ್ರವೇಶಿಸದಂತೆ ಗೇಟ್‌ಗೆ ಬೀಗ ಹಾಕಲಾಗಿದೆ. ಹಾಗಾಗಿ ನೆಲಮಳಿಗೆಯ ರಹಸ್ಯ ತಿಳಿದವರು ಯಾರೂ ಇಲ್ಲವಾಗಿದೆ. ಆದರೆ ನೆಲಮಳಿಗೆಯಲ್ಲಿ ಸುರಂಗ ಮಾರ್ಗ ಗಳು ಇವೆೆ ಎಂದು ಹಲವರು ಹೇಳುತ್ತಾರೆ. ಈ ಕೋಟೆಯು ಇಂದು ಈ ಭಾಗದ ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ. ಕೋಟೆಯ ಮೇಲೆ ಏರಲು ಮೆಟ್ಟಿಲುಗಳಿವೆ. ಕೋಟೆಯ ಮೇಲೆ ವಿಶಾಲ ವಾದ ಜಾಗವಿದ್ದು ಕುಳಿತುಕೊಳ್ಳಲು ಬೆಂಚ್‌ಗಳಿವೆ. ಕೋಟೆಯ ಸಂದುಗಳಲ್ಲಿ ನೋಡಿದರೆ ಗುರುಪುರ ನದಿ, ಅರಬಿ ಸಮುದ್ರ, ಸೂರ್ಯಾಸ್ತ ಹಾಗೂ ನಿಸರ್ಗದ ಸೌಂದರ್ಯವನ್ನು ಸವಿಯಬಹುದಾಗಿದೆ. ಈ ಪ್ರದೇಶ ದಿಂದ ದೋಣಿಯ ಮೂಲಕ ನದಿ ದಾಟಿದರೆ ತಣ್ಣೀರುಬಾವಿ ಬೀಚ್‌ಗೆ ಹೋಗಬಹುದಾಗಿದೆ. ಕೋಟೆಯ ಮೇಲಿರುವ ಸಣ್ಣ ಸಣ್ಣ ಕಿಂಡಿಗಳಿಂದ ನೋಡಿದರೆ ಗುರುಪುರ ನದಿ ಹಾಗೂ ಹೊರಭಾಗ ಕಾಣು ತ್ತದೆ. ಆದರೆ ನದಿಯಲ್ಲಿ ಅಥವಾ ಹೊರಭಾಗದಲ್ಲಿ ನಿಂತು ನೋಡಿದರೆ ಈ ಕಿಂಡಿಯಲ್ಲಿ ನೋಡುವವರು ಕಾಣಸಿ ಗುವುದಿಲ್ಲ. ಶತ್ರು ಸೈನ್ಯದ ಮೇಲೆ ಸುಲಭವಾಗಿ ದಾಳಿ ನಡೆಸಲು ಹಾಗೂ ಶತ್ರುಗಳಿಂದ ತಮ್ಮ ಸೈನಿಕರನ್ನು ರಕ್ಷಿಸುವ ತಂತ್ರದಿಂದ ಈ ಕಿಂಡಿಗಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ಈ ಕೋಟೆಯು ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮದನುಸಾರ ಸಂರಕ್ಷಿತ ಸ್ಮಾರಕವಾಗಿದ್ದು ಭಾರತೀಯ ಪುರಾತತ್ವ ಸರ್ವೇ ಕ್ಷಣ ಇಲಾಖೆಯ ಅಧೀನಕ್ಕೊಳಪಟ್ಟಿವೆ. ಇದಕ್ಕೆ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಬಗ್ಗೆ ಕೋಟೆಯ ಪಕ್ಕದಲ್ಲಿ ಎಚ್ಚರಿಕಾ ಫಲಕವನ್ನೂ ಹಾಕಲಾಗಿದೆ. ಆದರೆ ಸ್ವಾತಂತ್ರ ಹೋರಾಟದ ಪ್ರತೀಕವಾದ ಈ ಸ್ಮಾರಕವನ್ನು ಸಂರಕ್ಷಿಸುವಲ್ಲಿ ಪುರಾತತ್ವ, ಪ್ರವಾಸೋದ್ಯಮ ಇಲಾಖೆ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂಬ ದೂರು ಇದೆ. ಈ ಸ್ಮಾರಕವು ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಿದ್ದು, ಮೂಲ ಸ್ಥಿತಿಯನ್ನು ಕಳೆದುಕೊಳ್ಳುತ್ತಿದೆ. ಪ್ರೇಮಿಗಳ, ಪಡ್ಡೆ ಯುವಕರ ಮೋಜಿನ ತಾಣವಾಗಿ ಮಾರ್ಪಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News