ಹಳೆಯ ಚಿತ್ರಗಳನ್ನು ಬಳಸಿ ಕೇರಳ ನೆರೆ ಸಂದರ್ಭ ನೀಡಿದ ನೆರವು ಎಂದ ಆರೆಸ್ಸೆಸ್ !

Update: 2018-08-15 11:04 GMT

ಹೊಸದಿಲ್ಲಿ, ಆ.15: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಅಧಿಕೃತ ಫೇಸ್ ಬುಕ್ ಪುಟ ಇತ್ತೀಚೆಗೆ ಹಲವಾರು  ಚಿತ್ರಗಳನ್ನು ಪೋಸ್ಟ್ ಮಾಡಿ ಸೇವಾ ಭಾರತಿ ಕಾರ್ಯಕರ್ತರು ಕೇರಳ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಒದಗಿಸುತ್ತಿರುವ ಚಿತ್ರಗಳೆಂದು ಹೇಳಿ ದೇಣಿಗೆ ಯಾಚಿಸಿತ್ತು. ಈ ಚಿತ್ರಗಳ ಪೈಕಿ ಒಂದು ಚಿತ್ರದಲ್ಲಿ ಪತ್ರಕರ್ತರೊಬ್ಬರು ಮೈಕ್ ಹಿಡಿದು ನಿಂತಿರುವುದು ಹಾಗೂ ಹಿನ್ನೆಲೆಯಲ್ಲಿ ಆರೆಸ್ಸೆಸ್ ಸಮವಸ್ತ್ರದ ಭಾಗವಾಗಿರುವ ಖಾಕಿ ಶಾರ್ಟ್ಸ್ ಧರಿಸಿದ ಕೆಲವರು ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಶೇರ್ ಮಾಡಿದ್ದರು.

2012 ಕೇರಳ ನೆರೆಯ ಸಂದರ್ಭ ತೆಗೆದ ಚಿತ್ರವಿದು

ಆದರೆ ಆರೆಸ್ಸೆಸ್ ಶೇರ್ ಮಾಡಿದ ಫೋಟೋ ಇತ್ತೀಚಿಗಿನ ಕೇರಳ ನೆರೆಯ ಸಂದರ್ಭದ ಪರಿಹಾರ ಕಾರ್ಯಾಚರಣೆಯದ್ದ ಲ್ಲ. ಬದಲಾಗಿ ರಾಜ್ಯದಲ್ಲಿ 2012ರ ನೆರೆಯ ಸಂದರ್ಭದ್ದಾಗಿತ್ತು. ಅದೇ ವರ್ಷ ಆ ಚಿತ್ರದಲ್ಲಿ ಕಾಣುವ ವರದಿಗಾರ ಆ ಫೋಟೋ ಶೇರ್ ಮಾಡಿದ್ದರು. ಇದೇ ಚಿತ್ರವನ್ನು ಆರೆಸ್ಸೆಸ್ ಕಾರ್ಯಕರ್ತರು ಬಳಸಿಕೊಂಡು ಇತ್ತೀಚಿಗಿನ ನೆರೆ ಸಂದರ್ಭ ಪರಿಹಾರ ಕಾರ್ಯಾಚರಣೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ತೋರ್ಪಡಿಸುವ ಯತ್ನ ನಡೆಸಿದ್ದಾರೆ.

2017 ಗುಜರಾತ್ ಪ್ರವಾಹದ ಸಂದರ್ಭದ ಚಿತ್ರಗಳೂ ದುರ್ಬಳಕೆ

ಆರೆಸ್ಸೆಸ್ ಕಾರ್ಯಕರ್ತರು ಕೇರಳ ಪ್ರವಾಹ ಪೀಡಿತರಿಗೆ ಸಹಾಯ ಮಾಡುತ್ತಿದ್ದಾರೆಂದು ಸೂಚಿಸುವ ಇನ್ನೊಂದು ಚಿತ್ರ ಕೂಡ ಅಸಲಿಯಲ್ಲ,  ಬದಲಾಗಿ ಕಳೆದ ವರ್ಷ ಗುಜರಾತ್ ಪ್ರವಾಹದ ಸಂದರ್ಭದ ಚಿತ್ರವೆಂದು ತಿಳಿದು ಬಂದಿದೆ.

ಕರ್ನಾಟಕದ ಬಿಜೆಪಿ ನಾಯಕ ಸಿ ಟಿ.ರವಿ ಕೂಡ ಕೆಲ ಚಿತ್ರಗಳನ್ನು ಶೇರ್ ಮಾಡಿದ್ದಾರೆ. “ಕಮ್ಯುನಿಸ್ಟರು ಹಲವಾರು ಆರೆಸ್ಸೆಸ್ ಕಾರ್ಯಕರ್ತರನ್ನು ಕೇರಳದಲ್ಲಿ ಹತ್ಯೆಗೈದಿದ್ದರೂ ದೇವರ ನಾಡು ಪ್ರವಾಹದಿಂದ ಕಂಗೆಟ್ಟಾಗ ಅದೇ ಆರೆಸ್ಸೆಸ್ ಜನರಿಗೆ ನೆರವಾಗಿದೆ. ಈ ಮಾನವೀಯ ಕೈಂಕರ್ಯವನ್ನು ಪೇಯ್ಡ್ ಮೀಡಿಯಾ ತೋರಿಸುವುದಿಲ್ಲ'' ಎಂದು ರವಿ ಟ್ವೀಟ್ ಮಾಡಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News