ಹ್ಯಾಕರ್ ಗಳಿಂದ ನಿಮ್ಮ ಮಾಹಿತಿಗಳ ಕಳ್ಳತನ ತಡೆಯಲು ಹೀಗೆ ಮಾಡಿ....

Update: 2018-08-15 11:43 GMT

ಸಾಮಾಜಿಕ ಮಾಧ್ಯಮಗಳಲ್ಲಿ ಬೇಕಾಬಿಟ್ಟಿಯಾಗಿ ಮಾಹಿತಿಗಳನ್ನು ಹಂಚಿಕೊಳ್ಳುವುದು ಅಪಾಯಕಾರಿಯಾಗಿದೆ. ಹಲವಾರು ಸಾಧನಗಳ ಬಳಕೆ ಹಾಗೂ ಆನ್ ಲೈನ್‌ನಲ್ಲಿ ಹಣಕಾಸು ಸೇರಿದಂತೆ ಮಹತ್ವದ ಮಾಹಿತಿಗಳು ಇರುವುದರಿಂದ ಹ್ಯಾಕರ್‌ಗಳು ಈ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಹೆಚ್ಚುತ್ತಿದೆ. ಹೀಗಾಗಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಮತ್ತು ಬ್ಯಾಂಕ್ ಖಾತೆಗಳಲ್ಲಿರುವ ನಿಮ್ಮ ಹಣದ ರಕ್ಷಣೆಗಾಗಿ ಅನುಸರಿಸಬೇಕಾದ ಕೆಲವು ಮಾರ್ಗಗಳು ಇಲ್ಲಿವೆ...

►ನಿಮ್ಮ ವೈ-ಫೈ ರಕ್ಷಣೆ

ಇಂದು ಹೆಚ್ಚಿನ ಸಾಧನಗಳು ವೈ-ಫೈ ಸಂಪರ್ಕವನ್ನು ಹೊಂದಿರುತ್ತವೆ ಮತ್ತು ಈ ಸಂಪರ್ಕವನ್ನು ರಕ್ಷಿಸಿಕೊಳ್ಳುವುದು ನಿಮ್ಮ ಆದ್ಯತೆಯಾಗಬೇಕು. ಬಳಸದಿದ್ದಾಗ ವೈ-ಫೈ ಅನ್ನು ಬಂದ್ ಮಾಡುವುದು,ಸಂಕೀರ್ಣ ಪಾಸ್‌ವರ್ಡ್ ಹೊಂದಿರುವುದು ಮತ್ತು ಆಗಾಗ್ಗೆ ಪಾಸ್‌ವರ್ಡ್‌ನ್ನು ಬದಲಿಸುತ್ತಿರುವುದು ಈ ವಿಷಯದಲ್ಲಿ ನಿಮಗೆ ನೆರವಾಗುತ್ತವೆ.

►ನಿಮ್ಮ ಸಾಧನಗಳಿಗೆ ರಕ್ಷಣೆಯಿರಲಿ

ಅತ್ಯುತ್ತಮ ಗುಣಮಟ್ಟದ ಆ್ಯಂಟಿವೈರಸ್ ಮತ್ತು ಮಾಲ್‌ವೇರ್ ಸಾಫ್ಟ್‌ವೇರ್‌ನ್ನು ನಿಮ್ಮ ಸಾಧನದಲ್ಲಿ ಅಳವಡಿಸಿಕೊಳ್ಳುವುದು ಮೊದಲ ಹೆಜ್ಜೆಯಾಗಿದೆ. ಉಚಿತ ಸಾಫ್ಟ್‌ವೇರ್‌ಗಳು ವೈರಸ್ ಮತ್ತು ಮಾಲ್‌ವೇರ್‌ಗಳನ್ನು ಹರಡಬಹುದು,ಹೀಗಾಗಿ ಅವುಗಳ ಗೋಜಿಗೆ ಹೋಗಲೇಬೇಡಿ. ಸ್ಕ್ರೀನ್ ಲಾಕ್ ಮಾಡುವುದರಿಂದ ನಿಮ್ಮ ಸಾಧನ ತಪ್ಪುಕೈಗಳಿಗೆ ಸೇರಿದರೂ ಕೆಲವು ಸಮಯ ನಿಮ್ಮ ಮಾಹಿತಿಗಳು ಸುರಕ್ಷಿತವಾಗಿರುತ್ತವೆ. ಹೆಚ್ಚಿನ ಮೊಬೈಲ್‌ಗಳಲ್ಲಿರುವ ಬಿಲ್ಟ್-ಇನ್ ಕ್ಯಾಮರಾಗಳಿಗೂ ರಕ್ಷಣೆ ಬೇಕು ಎನ್ನುವುದು ನೆನಪಿರಲಿ.

►ಆ್ಯಪ್‌ಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆಯಿರಲಿ

 ಇಂದು ಲಕ್ಷಾಂತರ ಮೊಬೈಲ್ ಫೋನ್ ಆ್ಯಪ್‌ಗಳಿದ್ದು,ಹೆಚ್ಚಿನವು ಉಚಿತವಾಗಿ ದೊರೆಯುತ್ತಿವೆ. ಆದರೆ ಈ ಆ್ಯಪ್‌ಗಳ ಮೂಲಕ ಹೆಚ್ಚಿನ ಡಾಟಾ ಸೋರಿಕೆಯಾಗುವುದರಿಂದ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಒಳ್ಳೆಯದು. ಆ್ಯಪ್‌ಗಳು ಕೇಳುವ ಅನುಮತಿಗಳಿಂದ ಸಮಸ್ಯೆಗಳು ಆರಂಭವಾಗುತ್ತವೆ. ಹೆಚ್ಚಿನ ಆ್ಯಪ್‌ಗಳು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್,ಕ್ಯಾಮರಾ,ಫೋನ್,ಎಸ್‌ಎಂಎಸ್,ಲೊಕೇಷನ್ ಇತ್ಯಾದಿಗಳನ್ನು ಸಂಪರ್ಕಿಸಲು ಅನುಮತಿ ಕೇಳುತ್ತವೆ. ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ನಿಮಗೆ ಹೆಚ್ಚುವರಿ ಇನ್ಸೆಂಟಿವ್‌ನ ಆಮಿಷಗಳನ್ನೂ ಒಡ್ಡಲಾಗುತ್ತದೆ. ಒಮ್ಮೆ ಅನುಮತಿ ನೀಡಿದಿರೆಂದರೆ ಈ ಆ್ಯಪ್‌ಗಳು ನಿಮ್ಮ ಮೊಬೈಲ್‌ನಲ್ಲಿ ಸಂಗ್ರಹವಾಗಿರುವ ಹೆಚ್ಚುಕಡಿಮೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತವೆ.

►ಇ-ಮೇಲ್ ಅಲರ್ಟ್

ಕಠಿಣ ಪಾಸ್‌ವರ್ಡ್ ರೂಪಿಸಿಕೊಳ್ಳುವುದು ಮತ್ತು ಅದನ್ನು ನಿಯಮಿತವಾಗಿ ಬದಲಿಸುತ್ತಿರುವುದು ನಿಮ್ಮ ಇ-ಮೇಲ್ ಅನ್ನು ರಕ್ಷಿಸಿಕೊಳ್ಳುವ ಮೊದಲ ಹೆಜ್ಜೆಯಾಗಿದೆ. ಎರಡನೇ ಹಂತದ ದೃಢೀಕರಣವನ್ನು ಹೊಂದಿರುವುದು ಮುಂದಿನ ಹೆಜ್ಜೆಯಾಗಿರುತ್ತದೆ.

►ನಿಮ್ಮ ಕಾರ್ಡ್‌ಗಳು ಸುರಕ್ಷಿತವಾಗಿರಲಿ

 ಎಟಿಎಂ ಯಂತ್ರಗಳಿಂದ ಹಣವನ್ನು ಹಿಂಪಡೆಯುವಾಗ ಕಾರ್ಡ್ ಸ್ಕಿಮಿಂಗ್ ಮತ್ತು ಕ್ಲೋನಿಂಗ್ ಬಗ್ಗೆ ಹೆಚ್ಚಿನ ಎಚ್ಚರಿಕೆ ಇರಲಿ. ವಂಚಕರು ನೀವು ಕಾರ್ಡ್ ತೂರಿಸುವಲ್ಲಿ ಯಾವುದಾದರೂ ಸೂಕ್ಷ್ಮ ಸಾಧನಗಳನ್ನು ಅಳವಡಿಸಿದ್ದಾರೆಯೇ ಎನ್ನವುದನ್ನ್ನು ಪರೀಕ್ಷಿಸಿ. ಪಿನ್ ಒತ್ತುವಾಗ ನಿಮ್ಮ ಬೆರಳುಗಳನ್ನು ಇನ್ನೊಂದು ಕೈಯಿಂದ ಮರೆಮಾಚುವುದನ್ನು ರೂಢಿಸಿಕೊಳ್ಳಿ.

ಬ್ಯಾಂಕ್‌ಗಳಿಂದ ಕರೆಗಳ ಬಗ್ಗೆ ಎಚ್ಚರಿಕೆಯಿರಲಿ ಯಾವುದೇ ಬ್ಯಾಂಕ್ ತನ್ನ ಗ್ರಾಹಕರಿಗೆೆ ಕರೆಗಳನ್ನು ಮಾಡಿ ಕಾರ್ಡ್‌ಗಳ ವಿವರಗಳನ್ನು ಕೇಳುವುದಿಲ್ಲ ಎನ್ನುವುದು ನಿಮಗೆ ನೆನಪಿರಲಿ. ವಂಚಕರು ಇಂತಹ ಕರೆಗಳನ್ನು ಮಾಡಿದರೆ ಯಾವುದೇ ಮಾಹಿತಿ ನೀಡದೆ ಸಂಪರ್ಕವನ್ನು ಕಡಿತಗೊಳಿಸಿ.

►ನಿಮ್ಮ ಪಾಸ್‌ವರ್ಡ್‌ಗಳನ್ನು ರಕ್ಷಿಸಿಕೊಳ್ಳಿ

 ನೀವು ಬ್ಯಾಂಕ್,ಹೂಡಿಕೆ,ಸಾಮಾಜಿಕ ಮಾಧ್ಯಮಗಳು,ಇ-ಮೇಲ್ ಹೀಗೆ ಹಲವಾರು ಪಾಸ್‌ವರ್ಡ್‌ಗಳನ್ನು ಹೊಂದಿರಬಹುದು. ಇವುಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಸೇವ್ ಮಾಡಬೇಡಿ. ಸಾಧ್ಯವಾದರೆ ಎಲ್ಲವನ್ನೂ ನೆನಪಿಟ್ಟುಕೊಳ್ಳಿ. ಬರೆದಿಡುವುದು ಅನಿವಾರ್ಯವಾದರೆ ಅದಕ್ಕಾಗಿ ಕೋಡ್ ಭಾಷೆಯನ್ನು ಬಳಸಿ.

►ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಮಾಹಿತಿ ಹಂಚಿಕೊಳ್ಳಬೇಡಿ

ನಾವು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಮಾಹಿತಿಗಳು ಅಲ್ಲಿ ಶಾಶ್ವತವಾಗಿರುತ್ತವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ನಮ್ಮ ಜನ್ಮದಿನಾಂಕ,ಮನೆ ಅಥವಾ ಕಚೇರಿ ವಿಳಾಸ,ಫೋನ್ ಸಂಖ್ಯೆ ಇತ್ಯಾದಿ ಎಲ್ಲ ವಿವರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತೇವೆ. ಆದರೆ ಸಾಮಾಜಿಕ ಮಾಧ್ಯಮ ಖಾತೆಯನ್ನು ಡಿಲೀಟ್ ಮಾಡಿದರೂ ಈ ಎಲ್ಲ ವಿವರಗಳು ಬ್ಯಾಕಪ್‌ಗಳಲ್ಲಿರುತ್ತವೆ ಮತ್ತು ಹ್ಯಾಕರ್‌ಗಳು ಸುಲಭವಾಗಿ ಪಡೆದುಕೊಳ್ಳಬಹುದು ಎನ್ನುವುದು ಗೊತ್ತಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News